ರವಿ ಬೆಳಗೆರೆ ಸಿಗರೇಟ್ ಸೇದಿದ್ದು, ಫೋನ್ ಮಾಡಿದ್ದರ ಕುರಿತು ಗೃಹ ಸಚಿವರು ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Ravi-Belegere--01

ಬೆಂಗಳೂರು, ಡಿ.11-ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಬಂಧನದಲ್ಲಿರುವ ರವಿ ಬೆಳಗೆರೆ ಅವರು ಬೇರೊಬ್ಬರಿಗೆ ಫೋನ್ ಮಾಡಿದ್ದಾರೆ ಎಂಬ ಬಗ್ಗೆ ಆಯುಕ್ತರಿಂದ ವರದಿ ಕೇಳಿದ್ದೇನೆ. ಒಂದು ವೇಳೆ ಅವರು ಕರೆ ಮಾಡಿದ್ದರೆ ಅದು ತಪ್ಪು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಹೇಳಿದರು. ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿಬೆಳಗೆರೆ ಅವರು ಪೊಲೀಸ್ ಜೀಪ್‍ನಲ್ಲಿ ಸಿಗರೇಟ್ ಸೇದುವುದು ಮತ್ತು ಸಿಗರೇಟ್‍ಗಾಗಿ ಹಠ ಹಿಡಿದಿರುವ ವಿಚಾರವನ್ನು ಟಿವಿ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆರೋಪಿಗಳಿಗೆ ಹೀಗೆ ಮಾಡಲು ಅವಕಾಶವಿಲ್ಲ. ಈ ವಿಚಾರದ ಬಗ್ಗೆ ಪೊಲೀಸರ ಜೊತೆ ಚರ್ಚಿಸುವುದಾಗಿ ಹೇಳಿದರು.

ಸಿಸಿಬಿ ಕಸ್ಟಡಿಯಲ್ಲಿರುವಾಗಲೇ ರವಿ ಬೆಳಗೆರೆ, ಸುನಿಲ್ ಹೆಗ್ಗರವಳಿ ಅವರಿಗೆ ಕರೆ ಮಾಡಿರುವ ಬಗ್ಗೆ ಆಯುಕ್ತರಿಂದ ವರದಿ ಕೇಳಿದ್ದೇನೆ. ಒಂದು ವೇಳೆ ಅವರು ಕರೆ ಮಾಡಿದ್ದರೆ ಅದು ತಪ್ಪು. ಯಾರ ಮೊಬೈಲ್‍ನಿಂದ ಕರೆ ಮಾಡಿದ್ದಾರೋ ಆ ಬಗ್ಗೆಯೂ ವಿವರಣೆ ಕೇಳಿದ್ದೇನೆ ಎಂದು ಹೇಳಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರ ಆರೋಪಕ್ಕೆ ತಿರುಗೇಟು ನೀಡಿದ ರಾಮಲಿಂಗಾರೆಡ್ಡಿ, ಯಾರ ಕಾಲದಲ್ಲಿ ಏನು ಆಗಿದೆ ಅಂತ ಚರ್ಚಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

ಜೆಡಿಎಸ್ ಮುಖಂಡ ಗೋವಿಂದೇಗೌಡ ಕೊಲೆ ಪ್ರಕರಣದ ಬಗ್ಗೆ ಇವರು ಮಾತನಾಡುತ್ತಾರೆ. ಆದರೆ ಯಾರು ಮಾಡಿದ್ದಾರೆ ಎಂಬ ಬಗ್ಗೆ ಹೇಳುವುದಿಲ್ಲ ಎಂದು ತಿಳಿಸಿದರು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ದಿಕ್ಕು ತಪ್ಪಿಸಲು ರವಿಬೆಳಗೆರೆ ಅವರನ್ನು ಬಂಧಿಸಲಾಗಿದೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಇವರ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ಪೆÇಲೀಸರು ತನಿಖೆ ಮಾಡುತ್ತಿದ್ದಾರೆ. ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿ ಹಂತಕರನ್ನು ಸಾಕ್ಷ್ಯಾಧಾರ ಸಮೇತ ಬಂಧಿಸುತ್ತೇವೆ ಎಂದು ಹೇಳಿದರು.

Facebook Comments

Sri Raghav

Admin