ರಸ್ತೆಗಿಳಿದಿವೆ 637 ಹೈಟೆಕ್ ನಗರ ಸಾರಿಗೆ ಬಸ್ ಗಳು

ಈ ಸುದ್ದಿಯನ್ನು ಶೇರ್ ಮಾಡಿ

BUS-Kasrtc

ಬೆಂಗಳೂರು, ಆ.18-ಪ್ರಯಾಣಿಕರ ಸುರಕ್ಷಿತೆಗೆ ಸಿಸಿ ಕ್ಯಾಮೆರಾ, ಹಿಂಬದಿ ನೋಟದ ಕ್ಯಾಮೆರಾ, ಎಲ್ಇಡಿ ಪ್ರದರ್ಶನದ ವ್ಯವಸ್ಥೆ , ವಿದ್ಯುತ್ ಚಾಲಿತ ಬಾಗಿಲು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡಿರುವ ಕೆಎಸ್ಆರ್ಟಿಸಿಯ 637 ನಗರ ಸಾರಿಗೆ ಬಸ್ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾರ್ಪಣೆ ಮಾಡಿದರು.  ವಿಧಾನಸೌಧದ ಮುಂಭಾಗದಲ್ಲಿ ರಾಷ್ಟ್ರದಲ್ಲಿಯೇ ಮೊದಲನೆಯದಾದ ಅತ್ಯಾಧುನಿಕ ಬಸ್ಗಳಿಗೆ ಚಾಲನೆ ನೀಡಿದ ನಂತರ ನೂತನ ಬಸ್ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಯಾಣಿಸಿದ್ದು ವಿಶೇಷವಾಗಿತ್ತು.  ಹಾಸನ, ಶಿವಮೊಗ್ಗ , ಭದ್ರಾವತಿ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ತುಮಕೂರು, ದಾವಣಗೆರೆ, ಮಂಗಳೂರು, ಉಡುಪಿ, ಮಡಿಕೇರಿ, ಕೋಲಾರ, ಕೆಜಿಎಫ್, ಚಿತ್ರದುರ್ಗ ಮತ್ತು ಮಂಡ್ಯ ನಗರಗಳಲ್ಲಿ ಈ ಅತ್ಯಾಧುನಿಕ ಬಸ್ಗಳು ಪ್ರಯಾಣಿಕರ ಸೇವೆಗೆ ದೊರೆಯಲಿದೆ.
ತುರ್ತು ಸಂದರ್ಭದಲ್ಲಿ ಅಪಾಯದ ಸಂದೇಶವನ್ನು ನಿಯಂತ್ರಣ ಕೇಂದ್ರಕ್ಕೆ ತಲುಪಿಸುವ ವ್ಯವಸ್ಥೆ, ಬಾಗಿಲು ಮುಚ್ಚಿದಾಗ ಮಾತ್ರ ವಾಹನ ಚಾಲನೆ ಆಗುವಿಕೆ, ವಿಕಲಚೇತನರಿಗೆ ಅನುಕೂಲವಾಗುವಂತೆ ರ್ಯಾಂ ಪ್ ವ್ಯವಸ್ಥೆಗಳನ್ನು ಕೂಡ ಈ ಬಸ್ಗಳು ಒಳಗೊಂಡಿವೆ. ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ , ಸಾರಿಗೆ ಸಂಸ್ಥೆಗಳು ಉತ್ತಮ ಕಾರ್ಯ ನಿರೂಪಣೆಯಿಂದ ಇದುವರೆಗೂ 212 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. 1996ರಿಂದ ಪ್ರಶಸ್ತಿಗಳು ದೊರೆಯುತ್ತಿದ್ದು , ಕೆಎಸ್ಆರ್ಟಿಸಿಗೆ ಒಟ್ಟು 132 ಪ್ರಶಸ್ತಿಗಳು ಸಂದಾಯವಾಗಿವೆ ಎಂದು ವಿವರಿಸಿದರು.

bus-01

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮಾನವಾದ ಅನುದಾನದಲ್ಲಿ ರಾಜ್ಯದ 38 ನಗರ, ಪಟ್ಟಣದಲ್ಲಿ ನಗರ ಸಾರಿಗೆ ಸೇವೆ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.  1.15 ಲಕ್ಷ ಸಿಬ್ಬಂದಿ ಇದ್ದು ಈ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಶೇ.12.5ರಷ್ಟು ವೇತನ ಪರಿಷ್ಕರಣೆ ಮಾಡಲಾಗಿದೆ ಎಂದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಸಂಸ್ಥೆಗಳಿಗೆ 400 ಕೋಟಿ ರೂ. ಹಣವನ್ನು ಬಸ್ಪಾಸ್ ಮತ್ತಿತರ ಉದ್ದೇಶಕ್ಕಾಗಿ ಒದಗಿಸಿದ್ದಾರೆ. ಮೂಲಸೌಲಭ್ಯ ಅಭಿವೃದ್ಧಿ ಪಡಿಸಲು 18 ಕೋಟಿ ರೂ. ಅನುದಾನವನ್ನು ಆಯವ್ಯಯದಲ್ಲಿ ಮೀಸಲಿಡಲಾಗಿದೆ ಎಂದು ಹೇಳಿದರು.

ನಾಲ್ಕು ಸಾರಿಗೆ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ಮಾದರಿಯ 2499 ಹೊಸ ಬಸ್ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ನೂತನ ಬಸ್ನಿಲ್ದಾಣ ನಿರ್ಮಾಣ, ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು. ಬಸ್ ಡಿಪೋ, ಬಸ್ ನಿಲ್ದಾಣ, ಪ್ರಾದೇಶಿಕ ಹಾಗೂ ವಿಭಾಗೀಯ ಕಾರ್ಯರಗಾರಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ. ಕೆಎಸ್ಆರ್ಟಿಸಿ ವಾಯುವ್ಯ ಹಾಗೂ ಈಶಾನ್ಯ ಸಾರಿಗೆಯ ಎಲ್ಲ ಬಸ್ಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ:
ಕಲಾಸಿಪಾಳ್ಯದಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣವನ್ನು 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ನಾಲ್ಕು ಅಂತಸ್ತುಗಳ ಬಸ್ ನಿಲ್ದಾಣದಲ್ಲಿ ನೆಲ ಅಂತಸ್ತಿನಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ, ಅಂತರರಾಜ್ಯ ಬಸ್ಗಳಿಗೆ ಪ್ಲಾಟ್ಫಾರಂಗಳು, ಆಟೋ ನಿಲ್ದಾಣ, ಲಿಫ್ಟ್ , ಶೌಚಾಲಯ, ಕುಡಿಯುವ ನೀರು, ಸುರಂಗ ಮಾರ್ಗ, ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಮತ್ತಿತರ ಸೌಲಭ್ಯ ಕಲ್ಪಿಸಲಾಗುವುದು.   4.13 ಎಕರೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಇದೇ ಸಂದರ್ಭದಲ್ಲಿ ಗುಂಜೂರಿನಲ್ಲಿ ಸಿಬ್ಬಂದಿಗೆ ನಿರ್ಮಿಸಿರುವ ವಸತಿ ಗೃಹಗಳನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. 1.30 ಎಕರೆ ಪ್ರದೇಶದಲ್ಲಿ 779 ಲಕ್ಷ ರೂ. ವೆಚ್ಚದಲ್ಲಿ 36 ಮನೆಗಳನ್ನು ನಿರ್ಮಿಸಲಾಗಿದೆ. ಅಂಜನಾಪುರದಿಂದ ಹೊಸ ಬಸ್ ಡಿಪೋ ನಿರ್ಮಾಣವಾಗಿದ್ದು ಅದನ್ನು ಕೂಡ ಇದೇ ಸಂದರ್ಭದಲ್ಲಿ ಉದ್ಘಾಟನೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ರಮೇಶ್ಕುಮಾರ್, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಆರ್.ವಿ.ದೇವರಾಜ್, ಶಕುಂತಲಾಶೆಟ್ಟಿ , ರಾಮಕ್ಕ , ಶಿವರಾಮಹೆಬ್ಬಾರ್, ವಿಧಾನಪರಿಷತ್ ಸದಸ್ಯರಾದ ಉಗ್ರಪ್ಪ , ಗೋವಿಂದರಾಜು, ಕೆಎಸ್ಆರ್ಟಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರಕುಮಾರ್ ಕಟಾರಿಯಾ, ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕ ಏಕ್ರೂಪ್ಕೌರ್ ಮತ್ತಿತರರು ಉಪಸ್ಥಿತರಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin