ರಸ್ತೆಗುಂಡಿ ಮುಚ್ಚುವ ಕಾರ್ಯಕ್ಕೆ ಮೇಯರ್ ಚಾಲನೆ
ಮೈಸೂರು,ಸೆ.17-ದಸರಾ ಹಿನ್ನೆಲೆಯಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಪಾಲಿಕೆ ಮೇಯರ್ ಬೈರಪ್ಪ ಇಂದು ಚಾಲನೆ ನೀಡಿದರು. ನಗರದ ಕುಕ್ಕರಹಳ್ಳಿಯ ದೋಬಿಘಾಟ್ ಸಮೀಪ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ವಿಖ್ಯಾತ ದಸರೆ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಸಾಂಸ್ಕೃತಿಕ ನಗರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಇಲ್ಲಿನ ರಸ್ತೆಗಳನ್ನು ಉತ್ತಮಗೊಳಿಸುವುದು ಅಗತ್ಯವಾಗಿದೆ ಎಂದರು.
ಮಳೆಯಿಂದ ನಗರದ ಕೆಲವು ರಸ್ತೆಗಲ್ಲಿ ಹಳ್ಳಗಳು ಬಿದ್ದು ರಸ್ತೆಗಳು ಸಂಪೂರ್ಣ ದಸ್ತರವಾಗಿವೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು , ವಿಶೇಷವಾಗಿ ದಸರೆ ಸಂದರ್ಭದಲ್ಲಿ ಪ್ರವಾಸಿಗರಿಗೆ ಸಂಚಾರ ಯಾವುದೇ ಅಡೆತಡೆಗಳಿಲ್ಲದೆ ಸಾಗುವ ಉದ್ದೇಶದಿಂದ ಈ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ನಗರದ ವಿವಿಧ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಕೆಲವು ಕಾಮಗಾರಿಗಳು ಈಗ ಚಾಲ್ತಿಯಲ್ಲಿವೆ. ಇನ್ನು ಕೆಲವು ಕಾಮಗಾರಿ ಆರಂಭಿಸಬೇಕಾಗಿದೆ ಎಂದು ಭೈರಪ್ಪ ತಿಳಿಸಿದರು.
ಈ ಬಾರಿ ನಡೆಯುವ ದಸರೆ ಒಳಗಾಗಿ ಕೆಲವು ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಿದ್ದೇವೆ. ಇನ್ನುಳಿದ ಕಾಮಗಾರಿಗಳಿಗೆ ದಸರೆಯ ನಂತರ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.
► Follow us on – Facebook / Twitter / Google+