ರಸ್ತೆಯಲ್ಲೆ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಶಿರಾ, ಜೂ.2- ರಾಷ್ಟ್ರೀಯ ಹೆದ್ದಾರಿ ತಾವರೆಕರೆ ಅಂಡರ್ ಪಾಸ್‍ನಲ್ಲಿ ಮಳೆ ಬಂದರೆ ಮುಂದೆ ಹೋಗದ ನೀರು, ಸಾರ್ವಜನಿಕರಿಗೆ ಕಿರಿ ಕಿರಿ ದುರಸ್ತಿ ಪಡಿಸುವಂತೆ ಆಗ್ರಹಿಸಿ ಕಾಲೇಜ್ ವಿದ್ಯಾರ್ಥಿ ಸಮೂಹ ಹಾಗೂ ಸಾರ್ವಜನಿಕರು ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲೇ ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿರುವ ಗ್ರಾಮ ತಾವರೆಕೆರೆ ಎನ್‍ಹೆಚ್4 ಮಾರ್ಗ ದಾಟಿ ಗ್ರಾಮಕ್ಕೆ ಹೋಗುವಂತ ದ್ವಿಚಕ್ರವಾಹನ ಹಾಗೂ ಪಾದಚಾರಿಗಳು ಇದೇ ಅಂಡರ್‍ಪಾಸ್‍ನಿಂದ ಮುಂದೆ ಸಾಗಬೇಕು. ಇಲ್ಲಿ ಐತಿಹಾಸಿಕ ಪ್ರಸಿದ್ಧ ಶ್ರೀ ಬಂಡೀ ರಂಗನಾಥ ಸ್ವಾಮಿ ದೇವಸ್ಥಾನ ಕೂಡ ಇರುವುದರಿಂದ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚು.

ಅಲ್ಲದೇ ನಿತ್ಯ ಶಿರಾ ನಗರಕ್ಕೆ ಕಾಲೇಜ್‍ಗೆ ಹೋಗುವಂತ ವಿದ್ಯಾರ್ಥಿಗಳು ಕೊಡ ಇಲ್ಲಿಂದಲೇ ಓಡಾಡ ಬೇಕಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಂಡರ್‍ಪಾಸ್ ನಿರ್ಮಾಣ ಮಾಡುವ ವೇಳೆ ಮಳೆ ನೀರು ಸಮರ್ಪಕವಾಗಿ ಮುಂದೆ ಸಾಗಲು ಮಾರ್ಗ ಮಾಡದೆ ಇರುವುದರಿಂದ ನೀರು ನಿಂತು ಓಡಾಡಲು ತುಂಬಾ ಅನಾನುಕೂಲವಾಗಿದೆ ಎಂದು ಆಕ್ರೋಶಿಸಿ ಪ್ರತಿಭಟನೆ ನಡೆಸಿದರು.

ಐಆರ್‍ಬಿ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಕಾರರು ತಕ್ಷಣ ಸಮಸ್ಯೆ ಬಗೆಹರಿಸುವಂತೆ ಅಗ್ರಹಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾವರೆಕೆರೆ ಫೋಲೀಸ್ ಠಾಣೆಯ ಪಿಎಸ್‍ಐ ಪ್ರವೀಣ್‍ಕುಮಾರ್ ಪ್ರತಿಭಟನೆ ಕೈಬಿಡಿ ಐಆರ್‍ಬಿ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂಬ ಭರವಸೆ ನೀಡಿದಾಗ ಪ್ರತಿಭಟನೆ ಮುಂದೂಡಲಾಯಿತು.

ಆಟೋ ಚಾಲಕರ ಸಂಘ, ಶ್ರೀವಾಲ್ಮೀಕಿ ಯುವಕ ಸಂಘ, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ , ಕಾಲೇಜ್ ವಿದ್ಯಾರ್ಥಿಗಳ ಸಂಘಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದವು. ಮುಖಂಡರಾದ ಟಿ.ಸಿ.ದೇವರಾಜು, ತಾವರೆಕೆರೆ ಗ್ರಾ.ಪಂ. ಸದಸ್ಯರಾದ ತಿಮ್ಮಣ್ಣ, ರಾಜೇಗೌಡ, ಶಿವುಸ್ನೇಹ ಪ್ರಿಯ, ರಾಜೀವ್‍ಗೌಡ, ಶಿವು ತಾವರೆಕೆರೆ, ನಾಗರಾಜುಗೌಡ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

Facebook Comments