ರಸ್ತೆಯ ಮೇಲೆಲ್ಲ ವರ್ತೂರು ಕೆರೆಯ ವಿಷಕಾರಿ ನೊರೆಯ ನರ್ತನ

ಈ ಸುದ್ದಿಯನ್ನು ಶೇರ್ ಮಾಡಿ

Varturu-Lake--01

ಬೆಂಗಳೂರು, ಮೇ 29- ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಒಂದೆಡೆ ನಗರ ತತ್ತರವಾಗಿದ್ದರೆ ಈ ಮತ್ತೊಂದೆಡೆ ಕೆರೆಯಲ್ಲಿ ನೀರು ಹೆಚ್ಚುತ್ತಿದ್ದಂತೆಯೇ ಜನರ ಆತಂಕ ಹೆಚ್ಚುತ್ತಿದೆ. ಇದಕ್ಕೆ ಕಾರಣ ವಿಷಕಾರಿ ನೊರೆ…! ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ವರ್ತೂರು ಕೆರೆಯಲ್ಲಿ ಮಾಲಿನ್ಯಯುಕ್ತ ನೊರೆ ತುಂಬಿದ್ದು, ರಸ್ತೆಯ ಮೇಲೆಲ್ಲ ಹಾರಿ ದಾರಿಹೋಕರಿಗೂ, ವಾಹನ ಸವಾರರಿಗೂ ಅಸಹ್ಯವನ್ನುಂಟುಮಾಡುತ್ತಿದೆ. ವರ್ತೂರು ಕೆರೆಯಲ್ಲಿ ಮುಗಿಲೆತ್ತರಕ್ಕೆ ಹಾರುತ್ತಿರುವ ಮಾಲಿನ್ಯಯುಕ್ತ ನೊರೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬೆಂಗಳೂರಿನ ಮಾನವನ್ನೇ ಹರಾಜುಮಾಡುತ್ತಿದೆ.ಬೆಳ್ಳಂದೂರು ಕೆರೆಯ ಸ್ವಚ್ಛತಾ ಕಾರ್ಯ ಆರಂಭವಾಗಿದ್ದರೂ ಆ ಕಾಮಗಾರಿ ಸಂಪೂರ್ಣ ಮುಗಿಯುವುದಕ್ಕೆ ವರುಷವೇ ಬೇಕು ಎಂದು ಸರ್ಕಾರವೇ ಹೇಳಿದೆ. ಅದಕ್ಕಾಗಿಯೇ ರಾಷ್ಟ್ರೀಯಹಸಿರು ಪ್ರಾಧಿಕಾರದ ಬಳಿ ಕಾಲಾವಕಾಶವನ್ನೂ ಸರ್ಕಾರ ಕೇಳಿತ್ತು. ಇದೀಗ ವರ್ತೂರು ಕೆರೆಯಲ್ಲೂ ನೊರೆ ಏಳುವುದಕ್ಕೆ ಆರಂಭವಾಗಿ ದ್ವಿಚಕ್ರವಾಹನ ಸವಾರರಿಗೆ ದುಃಸ್ವಪ್ನ ಎನಿಸಿದೆ.

ಸಾಂಕ್ರಾಮಿಕ ರೋಗದ ಭಯ:

ಈ ಭಾಗದಲ್ಲಿ ವಾಸಿಸುವ ಜನರು ಸಾಂಕ್ರಾಮಿಕ ರೋಗದ ಭಯದಲ್ಲಿದ್ದಾರೆ. ಅಸಹನೀಯ ಎನ್ನಿಸುವಂಥ ವಾಸನೆಯೂ ಕೆರೆಯಿಂದ ಬರುತ್ತಿರುವುದರಿಂದ ಪ್ರತಿ ದಿನ ಸರ್ಕಾರಕ್ಕೆ ಹಿಡಿಶಾಪ ಹಾಕುವುದಲ್ಲದೆ ಬೇರೆ ದಾರಿ ಇಲ್ಲಿನ ಜನರಿಗಿಲ್ಲ. ಪ್ರತಿ ವರ್ಷ ಮಳೆಗಾಲ ಆರಂಭವಾದರೂ ಇಲ್ಲಿನ ಜನರು ಇದೇ ಸಮಸ್ಯೆ ಎದುರಿಸಬೇಕಾಗುತ್ತದಾದರೂ ಸರ್ಕಾರ ಮಾತ್ರ ಈ ಬಗ್ಗೆ ಗಂಭೀರವಾಗಿ ಯೋಚಿಸಿಲ್ಲ.

ಕೆರೆಯಲ್ಲಿ ಇತ್ತೀಚೆಗೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ಪ್ರಾಧಿಕಾರ ಮಧ್ಯಪ್ರವೇಶಿಸಿದರೂ ಕೂಡ ಅಧಿಕಾರಿಗಳು ಯಾವುದೇ ಸರಿಯಾದ ಕ್ರಮ ಇದುವರೆಗೆ ಕೈಗೊಂಡಿಲ್ಲ. ಕಾರ್ಯ ಯೋಜನೆಯೊಂದನ್ನು ಸಿದ್ದಪಡಿಸಿದ್ದು ಸದ್ಯದಲ್ಲಿಯೇ ಜಾರಿಗೆ ಬರಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಕೆರೆಯಿಂದ ಅವ್ಯಾಹತವಾಗಿ ನೊರೆ ಉಕ್ಕಿ ಹರಿಯುತ್ತಿರುವುದರಿಂದ ನಮಗೆ ತೀವ್ರ ತೊಂದರೆಯಾಗುತ್ತಿದ್ದು ಕೆಟ್ಟ ವಾಸನೆ ಕೂಡ ಬರುತ್ತಿದೆ. ರಸ್ತೆ ಮೇಲೆಲ್ಲಾ ನೊರೆ ಬಿದ್ದಿದೆ ಎನ್ನುತ್ತಾರೆ ಹತ್ತಿರದ ನಿವಾಸಿ ಸೊನಾಲಿ ಸಿಂಗ.

ಮೊನ್ನೆ 12ರಂದು ರಾಷ್ಟ್ರೀಯ ಹಸಿರು ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಸಂಸ್ಕರಿಸದ ಚರಂಡಿ ನೀರನ್ನು ಬಿಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿತ್ತು. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಕೂಡ ಎಚ್ಚರಿಕೆ ನೀಡಿದ ಹಸಿರು ಪ್ರಾಧಿಕಾರ ಕೆರೆಯ ನೀರಿನ ಸ್ವಚ್ಛತೆ ಕಾಪಾಡುವಂತೆ ಹೇಳಿತ್ತು.

ಹತ್ತಿರದ ಅಪಾರ್ಟ್‍ಮೆಂಟ್, ಕೈಗಾರಿಕೆಗಳಿಂದ ಸಂಸ್ಕರಿಸದ ನೀರು ಕಳೆದ 5 ವರ್ಷಗಳಿಂದ ಕೆರೆಗೆ ಹರಿದು ಬರುತ್ತಿರುವುದರಿಂದ ಕೆರೆಯ ನೀರು ಸಂಪೂರ್ಣ ಹಾನಿಯಾಗಿದೆ. ಹೆಚ್ ಎಎಲ್ , ದೊಮ್ಮಲೂರು, ಕೋರಮಂಗಲ ಮತ್ತು ಅಗರ ಪ್ರದೇಶಗಳಿಂದ ಕೆರೆಗೆ ಕೊಳಕು ನೀರು ಒಂದೇ ಸಮನೆ ಹರಿದು ಬರುತ್ತದೆ.
ಸ್ವಲ್ಪ ದಿನಗಳ ಹಿಂದಷ್ಟೇ ಇಲ್ಲಿ ಬೆಂಕಿ ಮತ್ತು ನೊರೆ ಕಾಣಿಸಿಕೊಂಡು ಸುದ್ದಿಯಾಗಿತ್ತು. ಆಗ ಬಿಬಿಎಂಪಿ ಮೇಯರ್ ಪದ್ಮಾವತಿ ಇಲ್ಲಿಗೆ ಭೇಟಿಯಾಗಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಆದರೆ ಈಗ ಮತ್ತೊಮ್ಮೆ ನೊರೆ ಕಾಣಿಸಿಕೊಂಡಿರುವುದು ಬಿಬಿಎಂಪಿಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ ಎನ್ನಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin