ರಸ್ತೆ ಅಗಲೀಕರಣ ವೇಳೆ ಘರ್ಷಣೆ, ಎಸ್‍ಐ ತಲೆಗೆ ಕಲ್ಲೇಟು

ಈ ಸುದ್ದಿಯನ್ನು ಶೇರ್ ಮಾಡಿ

Bangarapete--01

ಬಂಗಾರಪೇಟೆ,ಜು.22-ಪುರಸಭೆಯವರು ನಡೆಸುತ್ತಿರುವ ರಸ್ತೆ ಅಗಲೀಕರಣ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಸೇರಿದಂತೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಲ್ಲು ತೂರಾಟದಲ್ಲಿ ತಲೆಗೆ ಏಟು ಬಿದ್ದು ರಕ್ತಸ್ರಾವವಾದ ಬಂಗಾರಪೇಟೆ ಸಬ್‍ಇನ್‍ಸ್ಪೆಕ್ಟರ್ ರವಿಕುಮಾರ್ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು , ಸೊಂಟಕ್ಕೆ ಬಲವಾದ ಏಟು ಬಿದ್ದು ಗಂಭೀರ ಸ್ಥಿತಿಯಲ್ಲಿರುವ ಪುರಸಭೆ ಸಿಬ್ಬಂದಿ ಶಿವು ಅವರನ್ನು ಕೋಲಾರದ ಎಸ್‍ಎನ್‍ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಕುಮಾರ್ ಆಗಮಿಸಿದ್ದು , ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಘಟನೆ ವಿವರ: ಇಲ್ಲಿನ ನಿವೃತ್ತ ಪೊಲೀಸ್ ಇನ್‍ಸ್ಪೆಕ್ಟರ್ ಒಬ್ಬರು ನಗರದ ಕೆಎಸ್ ಆರ್‍ಟಿಸಿ ಬಸ್ ಸ್ಟ್ಯಾಂಡ್ ಎದುರು ತಮ್ಮ ಮನೆ ಮುಂದೆ ಅಂಗಡಿ ಮಳಿಗೆಯೊಂದನ್ನು ನಿರ್ಮಿಸಿದ್ದರು. ಅದು ರಸ್ತೆಗೆ ಅಡ್ಡವಾಗಿತ್ತು.

ರಸ್ತೆ ಅಗಲೀಕರಣ ಕಾರ್ಯಕ್ರಮದಂತೆ ಪುರಸಭೆ ಸಿಬ್ಬಂದಿ ಇಂದು ಬೆಳಗ್ಗೆ ಜೆಸಿಬಿ ಸಹಿತ ಬಂದು ಕಟ್ಟಡ ತೆರವಿಗೆ ಮುಂದಾಗಿದ್ದಾರೆ. ಈ ಸಂದರ್ಭ ನಿವೃತ್ತ ಎಸ್‍ಐ ರಘುರಾಮ್ ರೆಡ್ಡಿ , ಅವರ ಮಕ್ಕಳಾದ ವಿಜಯ್ ರೆಡ್ಡಿ , ರಘುರಾಮ್ ರೆಡ್ಡಿ ಹಾಗೂ ಮತ್ತೊಬ್ಬರು ಕಟ್ಟಡ ತೆರವಿಗೆ ಅಡ್ಡಿಪಡಿಸಿದ್ದಾರೆ.  ಈ ವೇಳೆ ಸಿಬ್ಬಂದಿ ಮತ್ತು ಇವರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ರಘುರಾಮ ರೆಡ್ಡಿ ಮತ್ತು ಅವರ ಮಕ್ಕಳು ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಮತ್ತು ಮನೆ ಮೇಲಿನಿಂದ ಎಸೆದ ಕಲ್ಲು ಬಂಗಾರಪೇಟೆ ಎಸ್‍ಐ ರವಿಕುಮಾರ್ ಅವರ ತಲೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಾಗರಿಕರು ಎಸ್‍ಐ ರವಿಕುಮಾರ್ ಅವರ ಪರ ಪ್ರತಿಭಟನೆಗಿಳಿದರು. ಪೊಲೀಸ್ ಠಾಣೆ ಎದುರು ಕೂಡ ಅನೇಕರು ಪ್ರತಿಭಟನೆ ನಡೆಸಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು. ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರಿಷ್ಠಾಧಿಕಾರಿ ಲೋಕೇಶ್ ಕುಮಾರ್ ಸ್ಥಳದಲ್ಲೇ ಇದ್ದು ಬಂದೋಬಸ್ತ್ ನೋಡಿಕೊಳ್ಳುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin