ರಸ್ತೆ ಬದಿಗಳಲ್ಲಿ ಮೂಡಿ ಬಂತು ಕುಂಚ ಪ್ರಪಂಚ

ಈ ಸುದ್ದಿಯನ್ನು ಶೇರ್ ಮಾಡಿ

art
ಬೆಂಗಳೂರು, ಜ.7-ರಸ್ತೆಯ ತುಂಬೆಲ್ಲ ಚಿತ್ರಕಲೆ ಹಾಗೂ ವಿವಿಧ ಕಲಾಕೃತಿಗಳ ಮೆರವಣಿಗೆ ನಡೆದಿದೆಯೋ ಎಂಬಂತೆ ಕಣ್ಣು ಹಾಯಿಸಿದಷ್ಟು ದೂರಕ್ಕೂ ಬಣ್ಣಗಳ ವೈಭವ, ಕಣ್ಣಿಗೆ ಕಟ್ಟುವ ಕಲಾಕೃತಿಗಳು, ಕುಂಚ ಪ್ರಪಂಚದಲ್ಲಿ ತಲ್ಲೀನರಾದ ಕಲಾಕಾರರನ್ನು ನೋಡುವುದೇ ಒಂದು ಸೊಗಸು.  ಇದು ಚಿತ್ರಸಂತೆ ಅಂಗವಾಗಿ ನಗರದ ಕುಮಾರಕೃಪ ರಸ್ತೆಯಲ್ಲಿ ಕಂಡುಬಂದ ರಂಗು ರಂಗಿನ ಚಿತ್ತಾರಗಳು. ತೈಲವರ್ಣ, ಜಲವರ್ಣ, ಕ್ಯಾನ್ವಸ್ ಸೇರಿದಂತೆ ಹಲವಾರು ಬಗೆಯ ವರ್ಣಚಿತ್ರಗಳು, ಸ್ಥಳದಲ್ಲೇ ಚಿತ್ರಗಳನ್ನು ಬಿಡಿಸುತ್ತಾ, ನಿಂತ ಕಲಾವಿದರ ಕೈಚಳಕ ಎಲ್ಲವೂ ಈ ಸಂತೆಯ ವಿಶೇಷಗಳೇ.  ಇದರೊಂದಿಗೆ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟವೂ ಸೇರಿ ಇಡೀ ರಸ್ತೆಯಲ್ಲಿ ಕಲೆಗಳ ಉತ್ಸವ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು. ವಿಂಡ್ಸರ್ ಮ್ಯಾನರ್ ವೃತ್ತದಿಂದ ಶಿವಾನಂದ ಸರ್ಕಲ್‍ವರೆಗಿನ ಸಂಪೂರ್ಣ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ಚಿತ್ರಸಂತೆಗೆ ಅನುವು ಮಾಡಿಕೊಡಲಾಗಿತ್ತು. ಈ ರಸ್ತೆಯ ಮಧ್ಯದಲ್ಲಿರುವ ಕೆಲವು ಖಾಲಿ ನಿವೇಶನಗಳ ಜಾಗದಲ್ಲೂ ಕಲಾಕೃತಿಗಳ, ಕಲಾಕಾರರ ಚಿತ್ರಪ್ರದರ್ಶನಗಳಿಗೆ ಅವಕಾಶ ಕಲ್ಪಿಸಿದ್ದರಿಂದ ಎಲ್ಲೆಲ್ಲೂ ಚಿತ್ರಗಳದೇ ಕಾರುಬಾರು ಎಂಬಂತೆ ಕಂಡುಬರುತ್ತಿತ್ತು.

artb1

ಕಳೆದ ವರ್ಷ ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲು 2300 ಅರ್ಜಿಗಳು ಬಂದಿದ್ದರೆ ಈ ಬಾರಿ 3700 ಅರ್ಜಿಗಳು ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಂದ ಕಲಾಕಾರರು ಸಲ್ಲಿಸಿದ್ದರು. ಇವರಲ್ಲಿ 1500 ಕಲಾಕಾರರಿಗೆ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಅದರಲ್ಲೂ ಭೂತಾನ್ ಸೇರಿದಂತೆ 16 ರಾಜ್ಯಗಳಿಂದ, ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾಕಾರರು ಚಿತ್ರಸಂತೆಯಲ್ಲಿ ಕಲಾಪ್ರದರ್ಶನಕ್ಕೆ ಮುಂದಾಗಿದ್ದಾರೆ.  ಸುಮಾರು 5 ಸಾವಿರದಿಂದ ಐದು ಲಕ್ಷದವರೆಗಿನ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಕಳೆದ ವರ್ಷ ನೋಟು ಅಮಾನೀಕರಣವಾಗಿದ್ದ ಸಂದರ್ಭದಲ್ಲಿ 3ರಿಂದ ನಾಲ್ಕು ಲಕ್ಷ ಜನ ಚಿತ್ರಸಂತೆಗೆ ಬಂದಿದ್ದರು. ಅದರಲ್ಲಿ ಮೂರು ಕೋಟಿಗೂ ಹೆಚ್ಚು ವಹಿವಾಟು ನಡೆದಿತ್ತು. ಈ ಬಾರಿ 6ರಿಂದ 7 ಲಕ್ಷ ಮಂದಿ ಬರುವ ನಿರೀಕ್ಷೆಯಿದ್ದು, ವ್ಯವಹಾರವೂ ದುಪ್ಪಟ್ಟಾಗಲಿದೆ ಎಂದು ಅಂದಾಜಿಸಲಾಗಿದೆ.

art-6

ವಿವಿಧ ಹಬ್ಬ , ಉತ್ಸವಗಳಿಂದ ಕಂಗೊಳಿಸುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿತ್ರಸಂತೆಯೂ ಒಂದು ಹಬ್ಬದಂತೆ ಚಿತ್ರಕಲಾ ರಸಿಕರಿಗೆ ರಸದೌತಣ ನೀಡುತ್ತಿದೆ. ಎಲ್ಲಾ ರೀತಿಯ ಎಲ್ಲಾ ಪ್ರಾಕಾರಗಳ ಚಿತ್ರಕಲೆಗಳು, ಕಲಾಕೃತಿಗಳು ಒಂದೆಡೆ ಸಿಗುವಂತೆ ಮಾಡುವ ಈ ಸಂತೆ ಬೆಂಗಳೂರಿಗರಿಗೆ ಹಬ್ಬವಾಗಿ ಪರಿಣಮಿಸುತ್ತದೆ. ಕಲಾಪ್ರಿಯರು ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಿದ್ದು, ಸಂಜೆ 7ರವರೆಗೂ ಸಂತೆ ನಡೆಯಲಿದೆ.  ಸ್ವಚ್ಛತೆಗೆ ಆದ್ಯತೆ:ಈ ಬಾರಿ ಹಿಂದೆಂದಿಗಿಂತ ಹೆಚ್ಚಾಗಿ ಸಂತೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮೇಯರ್ ಸಂಪತ್ ರಾಜ್ ಖುದ್ದು ಸ್ಥಳದಲ್ಲಿ ಹಾಜರಿದ್ದು , ರಸ್ತೆ ಗುಡಿಸುವ ಯಂತ್ರದಿಂದ ರಸ್ತೆ ಸ್ವಚ್ಚತೆ ಮಾಡಿಸಿದರು. ಆರು ಇ-ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, 50ಕ್ಕೂ ಹೆಚ್ಚು ಡಸ್ಟ್‍ಬಿನ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಮಳಿಗೆಗೂ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ತ್ಯಾಜ್ಯ ಹಾಕಲು ಪರಿಷತ್ ವತಿಯಿಂದ ವಿತರಿಸಲಾಗಿದೆ. ಹೊರ ರಾಜ್ಯದ ಕಲಾವಿದರಿಗೆ ಪರಿಷತ್‍ನಿಂದಲೇ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

art-5 art-2

Facebook Comments

Sri Raghav

Admin