ರಹಾನೆ ಶತಕ, ವೆಸ್ಟ್ ಇಂಡೀಸ್ ವಿರುದ್ದ ಭಾರತಕ್ಕೆ 105 ರನ್‍ಗಳ ಭರ್ಜರಿ ಜಯ

ಈ ಸುದ್ದಿಯನ್ನು ಶೇರ್ ಮಾಡಿ

Rahane--01

ಟ್ರೆನಿಡಾಡ್,ಜೂ.26- ಆರಂಭಿಕ ಆಟಗಾರ ಅಂಜಿಕ್ಯ ರಹಾನೆ(103) ಮನಮೋಹಕ ಶತಕ , ಶಿಖರ್ ಧವನ್ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಅರ್ಧ ಶತಕ ಹಾಗೂ ಉತ್ತಮ ಬೌಲಿಂಗ್ ನೆರವಿನಿಂದ ಭಾರತ ದ್ವಿತೀಯ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ದ 105 ರನ್‍ಗಳ ಭರ್ಜರಿ ಗೆಲುವು ಸಾಧಿಸಿದೆ.   ಇದರೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ನಿಂದ ಮುನ್ನಡೆ ಪಡೆದಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ಟೈನಿಡಾಡ್ ಕ್ರೀಡಾಂಗಣಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ನಾಯಕ ಹೋಲ್ಟರ್ ಭಾರತಕ್ಕೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.

ಭಾರತದ ಪರ ಇನಿಂಗ್ಸ್ ಆರಂಭಿಸಿದ ರಹಾನೆ ಹಾಗೂ ಶಿಖರ್ ಧವನ್ ಆರಂಭದಲ್ಲಿ ಎಚ್ಚರಿಕೆ ಆಟವಾಡಿದರು. ವಿಕೆಟ್ ನಷ್ಟವಿಲ್ಲದೆ 16.4 ಓವರ್‍ಗಳಲ್ಲಿ 100 ರನ್ ಆಗಿದ್ದಾಗ ಮಳೆ ಧಾರಾಕಾರವಾಗಿ ಸುರಿದಿದ್ದು , ಮೈದಾನ ತುಂಬಾ ನೀರು ನಿಂತುಕೊಂಡಿತು. ಇದರಿಂದಾಗಿ ಪಂದ್ಯ ಎರಡು ಗಂಟೆಗಳು ತಡವಾಗಿ ಆರಂಭವಾಯಿತು. ಪಂದ್ಯದ 7 ಓವರ್‍ಗಳನ್ನು ಕಡಿತಗೊಳಿಸಿ 43 ಓವರ್‍ಗಳಿಗೆ ನಿಗದಿಗೊಳಿಸಲಾಯಿತು.  ಬಳಿಕ ಆಟ ಮುಂದುವರೆಸಿದ ಶಿಖರ್ ಧವನ್ 59 ಎಸೆತಗಳಲ್ಲಿ 10 ಬೌಂಡರಿ ನೆರವಿನೊಂದಿಗೆ 61 ರನ್ ಸಿಡಿಸಿ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‍ಗೆ 18.2 ಓವರ್‍ಗಳಲ್ಲಿ ತಂಡದ ಮೊತ್ತ 114 ರನ್ ಆಗಿದ್ದಾಗ ಧವನ್ ಔಟಾದರು.

ರಹಾನೆ ಶತಕ:

ಚಾಂಪಿಯನ್ ಟ್ರೋಫಿಯಲ್ಲಿ ಆಡಲು ಅವಕಾಶ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಪಂದ್ಯದಲ್ಲಿ ರಹಾನೆ ಆಕರ್ಷಕ ಶತಕ ಬಾರಿಸಿದರು. ಕೆರೆಬಿಯನ್ ಬೌಲರ್‍ಗಳನ್ನು ದಂಡಿಸಿದ ರಹಾನೆ ವೈಯಕ್ತಿಕ ಮೂರನೇ ಶತಕ ದಾಖಲಿಸಿದರು.   ನಾಯಕ ವಿರಾಟ್ ಕೊಹ್ಲಿ ಅವರ ಸಾಥ್ ತೆಗೆದುಕೊಂಡು 104 ಎಸೆತಗಳಲ್ಲಿ 10 ಬೌಂಡ್ರಿ,2 ಸಿಕ್ಸರ್ ಸಹಿತ 103 ರನ್ ಗಳಿಸಿದರು. 2ನೇ ವಿಕೆಟ್ ಜೊತೆಯಾಟದಲ್ಲಿ 97 ರನ್ ಸೇರಿಸಿದರು.
ಇತ್ತ ನಾಯಕ ವಿರಾಟ್ ಕೊಹ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಆಕರ್ಷಕ ಅರ್ಧಶತಕ ಬಾರಿಸಿದರು. 66 ಎಸೆತಗಳಲ್ಲಿ 4 ಬೌಂಡ್ರಿ, 4 ಸಿಕ್ಸರ್ ಸಹಿತ 87 ರನ್ ಸೇರಿಸಿ ತಂಡದ ಮೊತ್ತ ಹೆಚ್ಚಿಸಿದರು.

ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 4, ಯುವರಾಜ್ 14, ಧೋನಿ ಅಜೇಯ 13 ಹಾಗೂ ಜಾಧವ್ 13 ರನ್ ಸೇರಿಸಿದರು. ಅಂತಿಮವಾಗಿ ಭಾರತ 43 ಓವರ್‍ಗಳಲ್ಲಿ 310 ರನ್ ಕಲೆ ಹಾಕಿತು.

ಅತಿಥೇಯರ ಬಿಗುವಿನ ಬೌಲಿಂಗ್:

ಬೃಹತ್ ಮೊತ್ತದತ್ತ ಬೆನ್ನಟ್ಟಿದ ವೆಸ್ಟ್‍ಇಂಡೀಸ್ ಆರಂಭಿಕ ಆಟಗಾರರಾದ ಪವಲ್-(0) ಹಾಗೂ ಮೊಹಮ್ಮದ್(0) ಅವರ ವಿಕೆಟ್ ಕಬಳಿಸಿದ ಭುವನೇಶ್ವರ್ ಕುಮಾರ್ ಭಾರತಕ್ಕೆ ಮೇಲುಗೈ ಒದಗಿಸಿಕೊಟ್ಟರು.   ಆರಂಭದಲ್ಲೇ 4 ರನ್‍ಗೆ ಎರಡು ವಿಕೆಟ್‍ಗಳನ್ನು ಕಳೆದುಕೊಂಡ ವೆಸ್ಟ್ ಇಂಡೀಸ್ ಆಘಾತ ಅನುಭವಿಸಿತು. ಹೀಗಾಗಿ ನಿಧಾನಗತಿಯ ಆಟಕ್ಕೆ ಮೊರೆಹೋದ ಕೆರೆಬಿಯನ್ ತಂಡ ಭಾರತದ ಬೌಲರ್‍ಗಳ ಶಿಸ್ತುಬದ್ಧ ದಾಳಿಗೆ ಸಿಲುಕಿ ರನ್ ಗಳಿಸಲು ಪರದಾಡಿತು.

ಶಾಹಿ ಹೋಪ್(81), ಲೂಯಿಸ್(21) ಹಾಗೂ ಓಲ್ಡರ್(29) ಅವರ ವಿಕೆಟ್‍ನ್ನು ಸ್ಪಿನ್ನರ್ ಕುಲ್‍ದೀಪ್ ಯಾದವ್ ಕಬಳಿಸಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮೆನ್‍ಗಳ ಬೆನ್ನೆಲುಬು ಮುರಿದರು.  ಕಾಟರ್(13) ಅವರ ವಿಕೆಟ್‍ನ್ನು ಅಶ್ವಿನ್ ಉರುಳಿಸಿದರು. ಒತ್ತಡಕ್ಕೆ ಸಿಲುಕಿದ ವೆಸ್ಟ್ ಇಂಡೀಸ್ 43  ಓವರ್‍ಗಳಲ್ಲಿ 205 ದಾಖಲಿಸಿ 105 ರನ್‍ಗಳ ಅಂತರದಿಂದ ಸೋಲು ಒಪ್ಪಿಕೊಂಡಿತು. ಮೂರನೇ ಏಕದಿನ ಪಂದ್ಯ ಇದೇ 30ರಂದು ನಡೆಯಲಿದೆ.

ದಾಖಲೆ:

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 96 ಬಾರಿ 300ಕ್ಕೂ ಹೆಚ್ಚು ರನ್ ಗಳಿಸಿ ಸಾಧನೆ ಮಾಡಿದೆ. ಹೀಗಾಗಿ ಏಕದಿನ ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ ಹೊಸ ದಾಖಲೆ ಸೃಷ್ಟಿಸಿದೆ. ಆಸ್ಟ್ರೇಲಿಯಾ 95 ಬಾರಿ 300ಕ್ಕೂ ಅಧಿಕ ರನ್ ಗಳಿಸಿದೆ 2ನೇ ಸ್ಥಾನದಲ್ಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin