ರಾಖಿ ಕಟ್ಟೋ ಸಹೋದರಿಯರೇ ಇದನ್ನೊಮ್ಮೆ ಓದಿಕೊಳ್ಳಿ..!

ಈ ಸುದ್ದಿಯನ್ನು ಶೇರ್ ಮಾಡಿ

Raksha-aBandhan

ರಕ್ಷಾ ಹಬ್ಬವು ಸಹೋದರ-ಸಹೋದರಿ ಯರ ನಡುವಿನ ಪವಿತ್ರ ಪ್ರೀತಿಯ ಸಂಕೇತವಾಗಿದೆ. ಈ ಪ್ರೀತಿಯಲ್ಲಿ ಆತ್ಮೀಯತೆ, ಮಧುರತೆ, ತ್ಯಾಗ, ಸಂರಕ್ಷಣೆ ಮತ್ತು ಸಮರ್ಪಣೆ ಸಮಾವೇಶಗೊಂಡಿದೆ. ಆದರೆ, ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಯಾರೂ ಯಾರನ್ನೂ ರಕ್ಷಿಸಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿರುವುದನ್ನು ನಿತ್ಯ ನಮ್ಮ ಸುತ್ತ ಮುತ್ತ ಮಾಧ್ಯಮಗಳ ಮೂಲಕ ತಿಳಿಯುತ್ತಿದ್ದೇವೆ.

ರಕ್ಷಾ ಬಂಧನ ಈ ಪದದಲ್ಲಿ ಎರಡು ವಿರುದ್ಧ ಪದಗಳಿವೆ. ಮಾನವ ಯಾವುದೇ ಬಂಧನವನ್ನು ಸ್ವಾಭಾವಿಕವಾಗಿ ಇಷ್ಟ ಪಡುವುದಿಲ್ಲ. ಸದಾ ಸ್ವತಂತ್ರವಾಗಿರುವುದನ್ನೇ ಬಯಸುತ್ತಾನೆ ಮತ್ತು ಇದಕ್ಕಾಗಿ ಪ್ರಯತ್ನಿಸುತ್ತಾನೆ. ಆದರೆ, ರಕ್ಷಾ ಬಂಧನವು ಬಂಧನದ ಬಂಧವಲ್ಲ, ಅದು ಸಹೋದರಿಯು ಸಹೋದರನಲ್ಲಿ ತನ್ನ ಮಾನ-ಪ್ರಾಣದ ರಕ್ಷಣೆ ನಿನ್ನದೆಂದು ನೆನಪಿಸುವ ಶ್ರಾವಣ ಮಾಸದ ಪಾವನ ಹಬ್ಬ.  ಇಲ್ಲಿ ಯೋಚಿಸಬೇಕಾದ ವಿಚಾರವೆಂದರೆ ಎಲ್ಲ ಸಂದರ್ಭ- ಸಮಯದಲ್ಲಿ ತನ್ನ ಸಹೋದರನೇ ರಕ್ಷಿಸುತ್ತಾನೆಂಬ ವಿಶ್ವಾಸವನ್ನು ಹೇಗೆ ಹೊಂದುವುದು? ಕಷ್ಟದ ಪರಿಸ್ಥಿತಿಗಳಲ್ಲಿ ಎಲ್ಲರೂ ಯಾರನ್ನು ನೆನೆಯುತ್ತಾರೆ? ಜಗತ್ ರಕ್ಷಕ ಪರಮಾತ್ಮನನ್ನಲ್ಲವೇ? ನಾವು ಸದಾ ರಕ್ಷಣೆ ಲಭ್ಯವಾಗದೆ?

ಮಾನವನಿಗೆ ಎರಡು ಪ್ರಕಾರದ ಬಂಧನಗಳಿವೆ. ಜಗತ್ ರಕ್ಷಕ ಜಗದೀಶ್ವರನ ಬಂಧನ, ಪ್ರಾಪಂಚಿಕ ಬಂಧನ ಈಶ್ವರನ ಬಂಧನದಿಂದ ಮಾನವಾತ್ಮರಿಗೆ ಸುಖ-ಶಾಂತಿ-ಆನಂದ ಪ್ರಾಪ್ತಿಯಾದರೆ, ಪ್ರಾಪಂಚಿಕ ಬಂಧನ ಸುಖ-ಶಾಂತಿ-ಆನಂದದ ಮರೀಚಿಕೆ ಮಾಡುತ್ತದೆ. ಇದರ ಫಲ ನಮಗೆ ದುಃಖ-ಅಶಾಂತಿಯಷ್ಟೆ ಸಿಗುತ್ತದೆ. ರಕ್ಷಾ ಬಂಧನವು ಈಶ್ವರನ ಬಂಧನವಾಗಿದೆ. ವಿಚಾರವಂತರು , ಆಧ್ಯಾತ್ಮ ಸಾಧಕರು, ಚಿಂತಕರು, ಪರಮ ಭಕ್ತರು ಪರಮಾತ್ಮನ ಬಂಧನದಲ್ಲಿ ಬಂಧಿಯಾಗಲು ಬಯಸುತ್ತಾರೆ. ರಕ್ಷಾ ಬಂಧನವು ವಿಕರ್ಮಗಳ ಫಲದಿಂದ ಮುಕ್ತರನ್ನಾಗಿಸಿ ಸುಖ-ಸಂತೋಷ ತಂದುಕೊಡುವ ಪವಿತ್ರ ಸಂಬಂಧದ ಬಂಧನದ ಹಬ್ಬವಾಗಿದೆ. ಆದರೆ ಈಗ ಈ ಭಾವನೆಯನ್ನು ಮರೆತು ಪ್ರಾಪಂಚಿಕ ಆಡಂಬರವಾಗಿ ಈ ಹಬ್ಬದ ಸತ್ಯತೆ ಮತ್ತು ಆಧ್ಯಾತ್ಮಿಕ ರಹಸ್ಯ ಮರೆಯಾಗುತ್ತಿದೆ.

ಪ್ರತಿಯೊಬ್ಬ ಮಾನವನು ಐದು ರೀತಿಯ ಬಂಧನಗಳಿಂದ ಮುಕ್ತನಾಗಿರಲು ಬಯಸುತ್ತಾನೆ. ದೇಹಾರೋಗ್ಯದ/ಜೀವ ರಕ್ಷಣೆ, ಆತ್ಮರಕ್ಷಣೆ/ಪ್ರಾಣರಕ್ಷಣೆ(ಶಕ್ತಿ), ಸ್ವಧರ್ಮದ ರಕ್ಷಣೆ(ಸುಖ, ಶಾಂತಿ, ಆನಂದ, ಸಂತೋಷ), ಪವಿತ್ರತೆ/ಶೀಲ ರಕ್ಷಣೆ, ವಿಘ್ನಗಳು/ಕಷ್ಟಗಳಿಂದ ರಕ್ಷಣೆ.  ದೇಹಾರೋಗ್ಯದ ರಕ್ಷಣೆಗಾಗಿ ಮಾನವನ ಪರಿಶ್ರಮ, ವೈದ್ಯಕೀಯ ಕ್ಷೇತ್ರದ ಪ್ರಯತ್ನಗಳು ಅಸೀಮವಾಗಿವೆ. ಧರ್ಮ ಮತ್ತು ಪವಿತ್ರತೆಯ ರಕ್ಷಣೆಗಾಗಿ ಮಾರಣ ಹೋಮಗಳು ನಡೆದಿರುವುದನ್ನು ಇತಿಹಾಸಗಳು ಬಿಂಬಿಸುತ್ತವೆ. ಸಹೋದರಿಯರ ರಕ್ಷಣೆ ಸಹೋದರರಿಂದಾಗಲಿ ಎಂಬ ಹಿನ್ನೆಲೆಯಲ್ಲಿ ರಕ್ಷಾ ಬಂಧನ ಪ್ರಾರಂಭವಾಯಿತೆಂಬುದಿದೆ. ಪ್ರಾಣ ರಕ್ಷಣೆ ಯಾವ ಮಾನವರಿಗಾಗಲಿ, ದೇವತೆಗಳಿಗಾಗಲಿ ಇಲ್ಲ. ಕಾರಣ ಎಲ್ಲರೂ ಕಾಲಕ್ಕೆ ಅಧೀನರು. ಪರಮ ಪರಾಕ್ರಮಿಗಳು, ವಿರಾಗ್ರಣಿಗಳು, ದೇವತೆಗಳು ಅಸುರರೂ ಕಾಲವಶರಾಗಿದ್ದಾರೆ.

ಇನ್ನು ಮಾನವನೇ ಮಾನವನ ನೋವು-ದುಃಖ-ಕಷ್ಟಗಳನ್ನು ದೂರ ಮಾಡುವುದಿದ್ದರೆ ಭಕ್ತಿ, ಜ್ಞಾನ , ವೈರಾಗ್ಯ, ಸನ್ಯಾಸ, ವ್ರತ ಮತ್ತು ಆಧ್ಯಾತ್ಮ ಸಾಧನೆಗಳು ಏಕೆ ಆಚರಣೆಯಲ್ಲಿರುತ್ತಿದ್ದವು. ಹಾಗಾದರೆ ಕಾಲನ ಕರಾಳ ಬಾಹುಗಳಿಂದ, ಕಷ್ಟಗಳೆಂಬ ಮಾಯಾಪಂಜರದಿಂದ, ಮಾಯಾ ದೈತ್ಯನೆಂಬ ಬಿರುಗಾಳಿಯಿಂದ ವಾಸ್ತವಿಕವಾಗಿ ರಕ್ಷಣೆ ಕೊಡುವವರು ಯಾರು ಯಾರೆಂದರೆ ಸರ್ವರ ದುಃಖಹರ್ತ-ಸುಖಕರ್ತ, ಸರ್ವಶಕ್ತಿವಂತ, ನಿರಾಕಾರ ಪರಂಜ್ಯೋತಿ ಪರಮಾತ್ಮ. ಮಾನವಾತ್ಮರಾದ ನಾವುಗಳು ಪರಮಾತ್ಮನನ್ನು ನಮ್ಮ ಮನಸ್ಸು ಬುದ್ಧಿಯ ಏಕಾಗ್ರತೆಯಿಂದ ನೆನಪು ಮಾಡುತ್ತಿದ್ದರೆ ನಮಗೆ ಸರ್ವ ರೀತಿಯ ರಕ್ಷಣೆ ಸಹಜವಾಗಿ ಪ್ರಾಪ್ತವಾಗುತ್ತದೆ.

ರಾಖಿಯನ್ನು ಕಟ್ಟುವ ವಿಧಿ ಮತ್ತು ಆಧ್ಯಾತ್ಮಿಕ ರಹಸ್ಯ:

ಸಹೋದರಿ ತನ್ನ ಸಹೋದರನ ಬಲಗೈಗೆ ರಾಖಿಯನ್ನು ಕಟ್ಟಿ, ಹಣೆಗೆ ತಿಲಕವನ್ನಿಟ್ಟು ಸಿಹಿ ತಿನಿಸಿ ಶುಭ ಹಾರೈಸಿ ಪ್ರೀತಿಯ ಉಡುಗೊರೆ ಪಡೆದುಕೊಳ್ಳುವಳು. ಇಲ್ಲಿ ರಾಖಿ ಪವಿತ್ರತೆಯ ಕಂಕಣ ಕಟ್ಟಿಕೊಳ್ಳುವ ಸಂಕೇತವಾಗಿದೆ. ತಿಲಕ ನಮ್ಮ ಹಣೆಯ ಮಧ್ಯದಲ್ಲಿ ಅಜರ ಅಮರ ಆತ್ಮನಿರುವ ಸಂಕೇತವಾಗಿದೆ. ಸಿಹಿ ನಮ್ಮ ಭಾವನೆ, ವಿಚಾರ, ದೃಷ್ಟಿ, ಮಾತು, ಕರ್ಮ, ಸಂಬಂಧ, ವ್ಯವಹಾರಗಳು ಮಧುರ ಮತ್ತು ಪವಿತ್ರ ಪಾವನವಾಗಿರಲೆಂಬುದನ್ನು ತಿಳಿಸುತ್ತದೆ. ರಾಖಿ ಕಟ್ಟಿಸಿಕೊಂಡ ಸಹೋದರ ಸಾಮಾನ್ಯವಾಗಿ ಏನಾದರೂ ಉಡುಗೊರೆ ಕೊಡುವುದು ರೂಢಿ. ಹಣ ವಸ್ತುವಿನ ಉಡುಗೊರೆ ಕೊಡುವುದು ಸುಲಭ. ಆದರೆ, ನಿಜವಾದ ಉಡುಗೊರೆ ನಮ್ಮಲ್ಲಿನ ವಿಷಯ ವಿಕಾರಗಳನ್ನು ಪರಮಾತ್ಮನಿಗೆ ಈ ಪವಿತ್ರ ಪಾವನ ಪರ್ವದಲ್ಲಿ ದಾನವಾಗಿ ಕೊಡುವುದು.

ನಾವೆಲ್ಲ ರಕ್ಷಾ ಬಂಧನದ ಸತ್ಯಾರ್ಥವನ್ನು, ಆಧ್ಯಾತ್ಮಿಕ ಹಿನ್ನೆಲೆಯನ್ನು ತಿಳಿದು ಯತಾರ್ಥ ರೀತಿಯಲ್ಲಿ ಆಚರಿಸುತ್ತ ಸಂಪೂರ್ಣ ಸ್ವಾತಂತ್ರ್ಯದ ಸತ್ಯವಾದ ಬದುಕನ್ನು ನಡೆಸುತ್ತ ಸುಖ-ಶಾಂತಿಯ ಜಗತ್ತನ್ನು ಪುನರ್ ಸ್ಥಾಪಿಸುವ ಭಗವಂತನ ಮಹಾಕಾರ್ಯದಲ್ಲಿ ತೊಡಗೋಣ. ರಕ್ಷಾ ಬಂಧನದ ಶುಭಾಶಯಗಳು.

– ರಾಜಯೋಗಿನಿ ಬಿ.ಕೆ. ಭಾಗ್ಯಕ್ಕ,  (ಚಿಕ್ಕಮಗಳೂರು)

 

Facebook Comments

Sri Raghav

Admin