ರಾಗಿ ಮುದ್ದೆ -ಸೊಪ್ಪು ಸಾರು : ಮುಂದಿನ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಜೆಡಿಎಸ್ ಹೊಸ ತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Mudde-saru

ಬೆಂಗಳೂರು,ಮೇ 19-ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲು ಪಣ ತೊಟ್ಟಿರುವ ಜೆಡಿಎಸ್, ಮತದಾರರನ್ನು ಸೆಳೆಯಲು ಹೊಸ ತಂತ್ರ ರೂಪಿಸಿದೆ.  ದಕ್ಷಿಣ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ರಾಗಿ ಮುದ್ದೆ -ಸೊಪ್ಪು ಸಾರು, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಈ ಬಾರಿ ಚುನಾವಣೆಯ ಪ್ರಮುಖ ವಿಷಯವಾಗಲಿದೆ.   2014ರ ಲೋಕಸಭೆ ಚುನಾವಣೆಯಲ್ಲಿ ಚಾಯಿ ಪೇ ಚರ್ಚಾ ದೇಶಾದ್ಯಂತ ಭಾರೀ ಜನಪ್ರಿಯತೆ ಪಡೆದುಕೊಂಡಿತ್ತು. ಅಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ಯಾಗಿದ್ದ ನರೇಂದ್ರ ಮೋದಿ ನಾನು ಬಾಲ್ಯದಲ್ಲಿ ಚಹಾ ಮಾರಾಟ ಮಾಡುತ್ತಿದ್ದೆ ಎಂದು ಹೇಳಿದ್ದರು.
ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್, ನರೇಂದ್ರ ಮೋದಿ ಚಹಾ ಮಾರಲು ಯೋಗ್ಯರಾಗಿದ್ದಾರೆ. ಕಾಂಗ್ರೆಸ್ ಕಚೇರಿ ಬಳಿ ಬಂದರೆ ಅವರಿಗೆ ಅಂಗಡಿ ಇಟ್ಟುಕೊಡುವುದಾಗಿ ಹೇಳಿದ್ದರು.ಇದನ್ನು ಸವಾಲಾಗಿ ಸ್ವೀಕರಿಸಿದ ಬಿಜೆಪಿ ಚಾಯಿಪಾಯಿ ಚರ್ಚೆಗೆ ಬನ್ನಿ ಎಂದು ಕಾಂಗ್ರೆಸ್‍ಗೆ ಸವಾಲು ಹಾಕಿತ್ತು.  ಮುಂದೆ ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿತೆಂದರೆ ಇಡೀ ದೇಶಾದ್ಯಂತ ಚಾಯಿ ಪೇ ಚರ್ಚಾ ಎಂದೇ ಮತದಾರ ಮಾತನಾಡಿಕೊಳ್ಳತೊಡಗಿದ.  ಈಗ ಇದೇ ಅಸ್ತ್ರವನ್ನು ಜೆಡಿಎಸ್ ರಾಗಿಮುದ್ದೆ- ಜೋಳದ ರೊಟ್ಟಿ ಮುಂದಿಟ್ಟುಕೊಂಡು ಮತ ದಾರರ ಮನಗೆಲ್ಲಲು ಕಾರ್ಯತಂತ್ರ ಹೆಣೆದಿದೆ.  ಜೆಡಿಎಸ್‍ನ ಚಿಂತಕರ ಛಾವಡಿಗಾರನೆಂದೇ ಗುರುತಿಸಿಕೊಂಡಿರುವ ಶಾಸಕ ವೈ.ಎಸ್.ವಿ.ದತ್ತ ಈ ಕಲ್ಪನೆಯನ್ನು ಮುಂದಿಟ್ಟಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಸೊಪ್ಪಿನ ಸಾರು, ರಾಗಿ ಮುದ್ದೆ ಎಂದರೆ ಅತ್ಯಂತ ಜನಪ್ರಿಯ. ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು ಭಾಗದಲ್ಲಿ ಇದನ್ನು ನೆನೆಸಿಕೊಂಡರೆ ಬಾಯಲ್ಲಿ ನೀರು ಬರುತ್ತದೆ.
ಇನ್ನು ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಅತ್ಯಂತ ಜನಪ್ರಿಯ ಊಟ. ಈ ಎರಡು ಕಲ್ಪನೆಯೊಂದಿಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಲೆಕ್ಕಾಚಾರ ಜೆಡಿಎಸ್‍ನದ್ದು.  ಈಗಾಗಲೇ ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಮನೆ ಮನೆಗೆ ತಲುಪಿಸಲು ಕೆಲ ಆಯ್ದ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗಿದೆ.   ಜೋಳದ ರೊಟ್ಟಿ , ರಾಗಿಮುದ್ದೆ ಎಷ್ಟರ ಮಟ್ಟಿಗೆ ಜೆಡಿಎಸ್ ಕೈ ಹಿಡಿಯುತ್ತದೆ ಎಂಬುದನ್ನು ಕಾದು ನೋಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin