ರಾಜಕಾಲುವೆಗೆ ತ್ಯಾಜ್ಯ ಹರಿಸುವ ಹೊಟೇಲ್‍ಗಳಿಗೆ ಬೀಗ

ಈ ಸುದ್ದಿಯನ್ನು ಶೇರ್ ಮಾಡಿ

Hotel-BBMP

ಬೆಂಗಳೂರು, ಜೂ.16-ರಾಜಕಾಲುವೆಗಳಿಗೆ ತ್ಯಾಜ್ಯ ಹರಿಸುವ ಹೊಟೇಲ್‍ಗಳಿಗೆ ಶಾಶ್ವತ ಬೀಗ ಜಡಿಯಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಎಚ್ಚರಿಸಿದರು.  ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.  ಭಾರತಿನಗರ ವಾರ್ಡ್‍ನ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿರುವ ಕೆಲವು ಹೊಟೇಲ್‍ನವರು ತಮ್ಮ ತ್ಯಾಜ್ಯವನ್ನು ರಾಜಕಾಲುವೆಗೆ ಹರಿಸುತ್ತಿರುವುದನ್ನು ಕಂಡು ಕೆಂಡಾಮಂಡಲರಾದ ಸಚಿವರು, ಕೂಡಲೇ ಎಲ್ಲಾ ಹೊಟೇಲ್ ಮಾಲೀಕರಿಗೂ ನೋಟೀಸ್ ಜಾರಿ ಮಾಡುವಂತೆ ಆದೇಶಿಸಿದರು.

ನೋಟೀಸ್ ಉಲ್ಲಂಘಿಸಿ ತ್ಯಾಜ್ಯವನ್ನು ಮತ್ತೆ ಚರಂಡಿಗೆ ಹಾಕಿದರೆ ಅಂತಹ ಹೊಟೇಲ್‍ಗಳನ್ನು ಶಾಶ್ವತವಾಗಿ ಬಂದ್ ಮಾಡಿಸಲು ಸೂಚನೆ ನೀಡಿದರು.
ಅದೇ ರೀತಿ ಶಿವಾಜಿನಗರದ ಹಲವು ಪ್ರದೇಶಗಳಲ್ಲಿ ರಾಜಾರೋಷವಾಗಿ ಅಳವಡಿಸಲಾಗಿದ್ದ ಅನಧಿಕೃತ ಜಾಹೀರಾತು ಫಲಕಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದರು.  ಕಮರ್ಷಿಯಲ್ ಸ್ಟ್ರೀಟ್‍ಗೆ ಪ್ರತಿನಿತ್ಯ ಸಾವಿರಾರು ನಾಗರಿಕರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಫುಟ್‍ಪಾತ್‍ಗಳನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಶಿವಾಜಿನಗರ ಕ್ಷೇತ್ರದಲ್ಲಿ ಆಸ್ಪತ್ರೆ, ಶಾಲೆ, ಸಮುದಾಯಭವನ ನಿರ್ಮಾಣಕ್ಕೆ 29 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಕಾಮಗಾರಿಗಳನ್ನು ಆದಷ್ಟು ಶೀಘ್ರ ಆರಂಭಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಭಾರತಿನಗರದಲ್ಲಿ 700 ಮಕ್ಕಳು ಓದುತ್ತಿರುವ ಶಾಲಾ ಕಟ್ಟಡ ಶಿಥಿಲವಾಗಿದ್ದು, ಕಟ್ಟಡ ಕುಸಿತ ಭೀತಿಯಿಂದ ಹಲವಾರು ಮಕ್ಕಳು ಶಾಲೆ ತೊರೆದಿದ್ದಾರೆ. ಹೀಗಾಗಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು. ಅದೇ ರೀತಿ ತಿಮ್ಮಯ್ಯ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆ ಮತ್ತು ಸಮುದಾಯಭವನವನ್ನು ನವೀಕರಣಗೊಳಿಸಲಾಗುವುದು ಎಂದರು.  ಮೇಯರ್ ಜಿ.ಪದ್ಮಾವತಿ ಮಾತನಾಡಿ, ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 4 ಕಾಮಗಾರಿಗಳ ವೀಕ್ಷಣೆ ಮಾಡಲಾಯಿತು. ಮುಂದಿನ ವಾರದಲ್ಲಿ ಎಲ್ಲಾ ಕಾಮಗಾರಿಗಳಿಗೂ ಗುದ್ದಲಿಪೂಜೆ ನೆರವೇರಿಸಿ ಕಾಲಮಿತಿಯೊಳಗೆ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಕಮರ್ಷಿಯಲ್ ಸ್ಟ್ರೀಟ್‍ನಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳನ್ನು ಅಂಗಡಿಯವರೇ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಪಾಲಿಕೆಯಿಂದ ನಿರ್ದಾಕ್ಷಿಣ್ಯವಾಗಿ ಎಲ್ಲಾ ಫಲಕಗಳನ್ನು ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಚಿವ ರೋಷನ್‍ಬೇಗ್ ಮತ್ತಿತರರು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin