ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಅರ್ಚಕ ವಾಸುದೇವ್ ಮೃತದೇಹ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Vasudev--02

ಬೆಂಗಳೂರು, ಅ.14- ಮಾರಿ ಮಳೆಗೆ ರಾಜಧಾನಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ವರುಣನ ಆರ್ಭಟಕ್ಕೆ ನಿನ್ನೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಅರ್ಚಕರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ತಾಯಿ-ಮಗಳ ಶೋಧಕಾರ್ಯ ತೀವ್ರಗೊಂಡಿದ್ದು, ಸುಮನಹಳ್ಳಿ ಸಮೀಪದ ರಾಜಕಾಲುವೆಯಲ್ಲಿ ಅರ್ಚಕ ವಾಸುದೇವ ಭಟ್ ಅವರ ಮೃತದೇಹ ಪತ್ತೆಯಾಗಿದೆ. ನಿನ್ನೆ ರಾತ್ರಿಯಿಂದ ಕಾರ್ಯಾಚರಣೆ ನಡೆಸಿದ ಎನ್‍ಡಿಆರ್‍ಎಫ್, ಎಸ್‍ಟಿಆರ್‍ಎಫ್, ಅಗ್ನಿಶಾಮಕ ದಳ, ಬಿಬಿಎಂಪಿ ಸಿಬ್ಬಂದಿ ವಾಸುದೇವ ಭಟ್ ಅವರ ಮೃತದೇಹ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ತಾಯಿ ನಿಂಗವ್ವ ಹಾಗೂ ಮಗಳು ಪುಷ್ಪಾ ಅವರ ದೇಹಕ್ಕಾಗಿ ಶೋಧಕಾರ್ಯ ತೀವ್ರಗೊಳಿಸಿದ್ದಾರೆ.

ನಿನ್ನೆ ಸಂಜೆ ಮಹಾಲಕ್ಷ್ಮಿ ಲೇಔಟ್‍ನ ಕುರುಬರಹಳ್ಳಿಯಲ್ಲಿ ಸುರಿದ ಭಾರೀ ಮಳೆಗೆ ಶಂಕರಮಠ ವಾರ್ಡ್‍ನ ವೆಂಕಟೇಶ್ವರ ದೇವಸ್ಥಾನದ ಬಳಿ ಅರ್ಚಕ ವಾಸುದೇವ ಭಟ್ ಅವರು ಕೊಚ್ಚಿಹೋಗಿದ್ದರೆ, 16ನೆ ಕ್ರಾಸ್ ಸಮೀಪ ತಾಯಿ-ಮಗಳು ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರು.  ನಾಲ್ಕು ತಂಡಗಳು ನಿನ್ನೆ ತಡರಾತ್ರಿವರೆಗೆ ಕಾರ್ಯಾಚರಣೆ ನಡೆಸಿದ್ದು, ಎರಡು ಗಂಟೆ ನಂತರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇಂದು ಬೆಳಗ್ಗೆ ಮುಂದುವರಿಸಿದ ಕಾರ್ಯಾಚರಣೆಯಲ್ಲಿ ವಾಸುದೇವ ಭಟ್ ಅವರ ದೇಹ ಪತ್ತೆಯಾಗಿದೆ.

ಇಂದು ಕೂಡ ಮತ್ತೆ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ನಿನ್ನೆ ಸಂಜೆ 2 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ರಾಜಕಾಲುವೆ ಪ್ರದೇಶದಲ್ಲಿದ್ದ ಹಲವಾರು ಮನೆಗಳು ಕುಸಿದು ಬಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾವಿರಾರು ಜನ ನಿರಾಶ್ರಿತರಾಗಿದ್ದು, ನೂರಾರು ಕೋಟಿ ರೂ. ನಷ್ಟವಾಗಿದೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ ಆಟೋ, ಬೈಕ್‍ಗಳು ಇಂದು ಪತ್ತೆಯಾಗಿವೆ. ಪ್ರತಿ ವಾರ್ಡ್‍ಗೂ 50 ಜನರನ್ನು ನಿಯೋಜಿಸಿ ಪರಿಹಾರ ಕಾರ್ಯಗಳನ್ನು ಮಾಡಲಾಗುತ್ತಿದೆ. ಒಟ್ಟಾರೆ ಮಹಾನಗರ ಬೆಂಗಳೂರು ಮಹಾಮಳೆಗೆ ಮುಳುಗಿ ಹೋಗಿದೆ. ಇನ್ನೆಷ್ಟು ಗಂಡಾಂತರ ಕಾದಿದೆಯೋ ಸದ್ಯಕ್ಕಂತೂ ಹೇಳಲು ಸಾಧ್ಯವಿಲ್ಲ.

ತಗ್ಗು ಪ್ರದೇಶದ ಜನರು ಆತಂಕದಲ್ಲಿ ಜೀವ ಹಿಡಿದು ಬದುಕುತ್ತಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋದವರ ಕುಟುಂಬಕ್ಕೆ ಹಾಗೂ ಗೋಡೆ ಕುಸಿತದಿಂದ ಸಾವಿಗೀಡಾದವರ ಕುಟುಂಬದವರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಲಾಗಿದೆ. ಮಳೆ ನೀರು ನೂರಾರು ಮನೆಗಳಿಗೆ ನುಗ್ಗಿದ್ದರಿಂದ ಮೊಣಕಾಲುದ್ದದ ನೀರು ಮನೆಯಲ್ಲೆಲ್ಲ ನಿಂತು ಅಪಾರ ಹಾನಿ ಸಂಭವಿಸಿದೆ. ಅಡುಗೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 5 ಸಾವಿರ ಮಂದಿಗೆ ಶಾಸಕ ಕೆ.ಗೋಪಾಲಯ್ಯ ಉಪಹಾರದ ವ್ಯವಸ್ಥೆ ಮಾಡಿದ್ದಾರೆ.ಬಿಬಿಎಂಪಿ ವತಿಯಿಂದ, ಇಸ್ಕಾನ್ ಸಂಸ್ಥೆ ಮೂಲಕ ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್‍ನ ಕುರುಬರಹಳ್ಳಿ, ನಾಗ್ಪುರ, ಲಗ್ಗೆರೆ, ಮಹಾಲಕ್ಷ್ಮಿಪುರಗಳಲ್ಲಿ ನಿನ್ನೆ 2 ಗಂಟೆ ಅವಧಿಯಲ್ಲಿ 10 ಸೆಂ.ಮೀ.ನಷ್ಟು ಮಳೆಯಾಗಿದೆ. ಕಳೆದ 60 ದಿನಗಳಲ್ಲಿ 51 ದಿನ ಮಳೆಯಾಗಿದ್ದು, ನಿನ್ನೆ ಭಾರೀ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ ಅವಘಡಗಳು ಸಂಭವಿಸಿದ್ದು, ಎಲ್ಲ ವಾರ್ಡ್‍ಗಳಲ್ಲೂ ಆಗಿರುವ ಅನಾಹುತಗಳನ್ನು ಪರಿಶೀಲಿಸಿ ಸರ್ಕಾರದೊಂದಿಗೆ ಚರ್ಚಿಸಿ ಪರಿಹಾರ ಕಾರ್ಯ ಕೈಗೊಳ್ಳುವುದಾಗಿ ಶಾಸಕ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಎಂ.ಶಿವರಾಜ್, ಪಾಲಿಕೆ ಅಧಿಕಾರಿಗಳು, ಎನ್‍ಡಿಆರ್‍ಎಫ್ ತಂಡದವರು ಪಾಲ್ಗೊಂಡು ತೀವ್ರ ಹುಡುಕಾಟ ನಡೆಸಿದರೂ ಅರ್ಚಕ ವಾಸುದೇವ ಭಟ್ ಅವರು ಪತ್ತೆಯಾಗಲಿಲ್ಲ.

ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಸಂಪತ್‍ರಾಜ್, ಬಿಬಿಎಂಪಿ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ.
ದೀಪಾವಳಿವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ. ತಗ್ಗು ಪ್ರದೇಶದ ಜನರನ್ನು ಸ್ಥಳಾಂತರ ಮಾಡಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.  ಮಳೆ ಅನಾಹುತ ಮಹಾಲಕ್ಷ್ಮಿ ಲೇಔಟ್‍ಗಷ್ಟೇ ಸೀಮಿತವಾಗಿಲ್ಲ. ಶ್ರೀರಾಂಪುರ, ಮಲ್ಲೇಶ್ವರ, ಕಾಮಾಕ್ಷಿಪಾಳ್ಯ, ಹೆಬ್ಬಾಳ, ರಾಜರಾಜೇಶ್ವರಿನಗರ ಮುಂತಾದೆಡೆ ರಾತ್ರಿಯಿಡೀ ಜನ ನೀರು ಹೊರಹಾಕುವಲ್ಲೇ ಕಾಲ ಕಳೆದಿದ್ದಾರೆ.

ಹಲವೆಡೆ ನೆಲಮಹಡಿಗಳಿಗೆ, ಪಾರ್ಕಿಂಗ್ ಪ್ರದೇಶಗಳಿಗೆ ನೀರು ನುಗ್ಗಿದ್ದು, ಅಗ್ನಿಶಾಮಕ ಸಿಬ್ಬಂದಿ ಇಂದು ಕೂಡ ಹೊರಹಾಕುತ್ತಿದ್ದುದು ಕಂಡುಬಂದಿತು. ಕೈಗಾರಿಕಾ ಪ್ರದೇಶಗಳು ಸೇರಿದಂತೆ ಹಲವು ಪ್ರದೇಶಗಳ ನೆಲಮಹಡಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

Facebook Comments

Sri Raghav

Admin