ರಾಜಕಾಲುವೆ ಒತ್ತುವರಿಯಲ್ಲಿ ಮನೆ ಕಳೆದುಕೊಂಡವರ ಅರಣ್ಯ ರೋದನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.25- ಕಳೆದ ಮೂರ್ನಾಹಲ್ಕು ದಿನಗಳಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಸ್ಥಗಿತಗೊಳಿಸಿದ್ದ ಬಿಬಿಎಂಪಿ ಇಂದು ಮತ್ತೆ ತೆರವು ಕಾರ್ಯಾರಚರಣೆ ಪ್ರಾರಂಭ ಮಾಡಿದ್ದು, ಅವನಿ ಶೃಂಗೇರಿ ನಗರದಲ್ಲಿ ಸ್ಥಳೀಯರು ತೀವ್ರ ವಿರೋಧ ಒಡ್ಡಿದ್ದರಿಂದ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.  ಮೂರ್ನಾರಲ್ಕು ದಿನಗಳಿಂದ ಆರ್.ಆರ್. ನಗರ, ದಾಸರಹಳ್ಳಿ, ಯಲಹಂಕ, ಅವನಿ ಶೃಂಗೇರಿ ನಗರ, ಬೊಮ್ಮನಹಳ್ಳಿ ಮತ್ತಿತರೆಡೆ ಒತ್ತುವರಿ ಕಾರ್ಯ ನಿಲ್ಲಿಸಿ ಸರ್ವೆ ಮಾಡಿ ಮಾರ್ಕಿಂಗ್ ಮಾಡುವ ಕೆಲಸ ನಡೆದಿತ್ತು.   ನಿನ್ನೆ ಬಿಬಿಎಂಪಿ ಕಮೀಷನರ್ ಮಂಜುನಾಥ ಪ್ರಸಾದ್ ಎಲ್ಲ ಎಂಟೂ ವಲಯಗಳ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿ ಮಾರ್ಕಿಂಗ್ ಜೊತೆಗೆ ತೆರವು ಕಾರ್ಯವನ್ನು ಪ್ರಾರಂಭಿಸಿ, ಯಾವುದೇ ಒತ್ತಡಕ್ಕೆ ಮಣಿಯಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಈ ಸೂಚನೆ ಮೇರೆಗೆ ಇಂದು ಬೊಮ್ಮನಹಳ್ಳಿ ವಿಭಾಗದ ಜಂಟಿ ಆಯುಕ್ತ ಮುನಿರಾಜು ನೇತೃತ್ವದಲ್ಲಿ ಅವನಿ ಶೃಂಗೇರಿ ನಗರದಿಂದ ಸರಸ್ವತಿಪುರಂವರೆಗೆ ಒತ್ತುವರಿ ತೆರವುಗೊಳಿಸಲಾಗುತ್ತಿದೆ.
ಈ ಪ್ರದೇಶದಲ್ಲಿ ನಾಲ್ಕು ಖಾಲಿ ನಿವೇಶನ, ಮೂರು ಡ್ಯುಫ್ಲೆಕ್ಸ್ ಮನೆ, ಒಂದು ಶೆಡ್, ಒಂದು ಆರ್ಸಿಸಿ ಮನೆ ಇವೆ. ಇಲ್ಲಿ ಸುಮಾರು 8 ಅಡಿ ರಾಜಕಾಲುವೆ ಒತ್ತುವರಿಯಾಗಿದೆ ಎಂದು ಮಾರ್ಕಿಂಗ್ ಮಾಡಲಾಗಿತ್ತು. ಇಲ್ಲಿ ಮನೆಗಳನ್ನು ಜೆಸಿಬಿ ಮೂಲಕ ಭಾಗಶಃ ನೆಲಕ್ಕುರುಳಿಸಲಾಗುತ್ತಿದೆ.

ಆರೋಪ:

ಇದೇ ಪ್ರದೇಶದಲ್ಲೇ ಸುರಕ್ಷಾ ಗೋಲ್ಡನ್ ಫಾರ್ಮ್ ಅಪಾರ್ಟ್ಮೆಂಟ್ ಇದೆ. ಇಲ್ಲಿ ಸುಮಾರು 160 ಮನೆಗಳಿವೆ. ಅಪಾರ್ಟ್ಮೆಂಟ್ನವರು ರಾಜಕಾಲುವೆ ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆ. ಆದರೆ ಈ ಅಪಾರ್ಟ್ಮೆಂಟ್ನ್ನು ಉಳಿಸಲು ಬಿಬಿಎಂಪಿ ಅಧಿಕಾರಿಗಳು ನಕ್ಷೆ ಬದಲಾವಣೆ ಮಾಡಿದ್ದಾರೆ ಎಂದು ಅಪಾರ್ಟ್ಮೆಂಟ್ ಸಮೀಪದ ಮನೆಗಳವರು ಆರೋಪಿಸಿದರು.  ರಾಜಕಾಲುವೆ ಒತ್ತುವರಿ ಮಾಡಿ ಅಪಾರ್ಟ್ಮೆಂಟ್ ಕಟ್ಟಿರುವವರನ್ನು ಬಿಬಿಎಂಪಿ ಅಧಿಕಾರಿಗಳು ಬಿಟ್ಟಿದ್ದಾರೆ. ನಾವು ಒತ್ತುವರಿ ಮಾಡಿದ್ದೇವೆ ಎಂದು ಹೇಳಿ ನಮ್ಮ ಮನೆಗಳನ್ನು ಒಡೆಯುತ್ತಿದ್ದಾರೆ. ಇದು ನ್ಯಾಯವಲ್ಲ, ಸಾಲಸೋಲ ಮಾಡಿ ಮನೆ ಕಟ್ಟಿದ್ದೇವೆ. ಈಗ ಏಕಾಏಕಿ ಸರ್ವೆ ಮಾಡಿ ನಕ್ಷೆ ಬದಲಾಯಿಸಿ ನಮ್ಮನ್ನು ಬೀದಿಗೆ ತಳ್ಳಿದ್ದಾರೆ ಎಂದು ಸ್ಥಳೀಯರು ಆರೋಪಿಸಿ ಪ್ರತಿಭಟನೆ ನಡೆಸಿದರು.  ಅಪಾರ್ಟ್ಮೆಂಟ್ನವರು ತಮ್ಮ ಮನೆಗಳನ್ನು ಉಳಿಸಿಕೊಳ್ಳಲು ಯತ್ನಿಸಿದರೆ, ಇತ್ತ ಸಮೀಪದ ಮನೆಗಳವರು ಅಸಹಾಯಕತೆಯಿಂದ ಆಕ್ರೋಶವ್ಯಕ್ತಪಡಿಸುತ್ತಿದ್ದುದು ಕಂಡುಬಂತು.  ಜನರ ಪ್ರತಿರೋಧಕ್ಕೆ ಮಣಿಯದೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಬಿಬಿಎಂಪಿ ಅಧಿಕಾರಿಗಳು ಮನೆಗಳ ತೆರವು ಕಾರ್ಯವನ್ನು ಮುಂದುವರೆಸಿದ್ದಾರೆ.    ಆರ್.ಆರ್.ನಗರ, ದಾಸರಹಳ್ಳಿ, ಯಲಹಂಕದಲ್ಲಿ ಮಾರ್ಕಿಂಗ್ ಕಾರ್ಯ ಮುಂದುವರೆದಿದೆ.

Facebook Comments

Sri Raghav

Admin