ರಾಜಕಾಲುವೆ ಒತ್ತುವರಿ ತೆರವು ವೇಳೆ ಮನೆ ಕಳೆದುಕೊಂಡ ‘ಪುನರ್ವಸತಿ ಭಾಗ್ಯ’

ಈ ಸುದ್ದಿಯನ್ನು ಶೇರ್ ಮಾಡಿ

CM-Meet

ಬೆಂಗಳೂರು, ಆ.27- ರಾಜಕಾಲುವೆ ಒತ್ತುವರಿ ತೆರವಿನಿಂದ ಉಂಟಾಗಿರುವ ಹಾನಿಯನ್ನು ಸರಿದೂಗಿಸಲು ನಿರ್ಗತಿಕರಿಗೆ ನಿವೇಶನ ಅಥವಾ ಫ್ಲಾಟ್ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಬಿಬಿಎಂಪಿಯ ಅಧಿಕಾರಿಗಳು, ಮೇಯರ್, ಉಪಮೇಯರ್, ಸಚಿವರು ಹಾಗೂ ಶಾಸಕರ ಜತೆ ಉನ್ನತ ಮಟ್ಟದ ಸಭೆ ನಡೆಸಿ ಅಗತ್ಯ ಇರುವ ಕಡೆ ಮಾತ್ರ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸುವಂತೆ ಸೂಚನೆ ನೀಡಿದ್ದಾರೆ.  ಕೆರೆಯಿಂದ ಕೆರೆಗೆ ಸಂಪರ್ಕಗೊಂಡು ನೀರು ಹರಿಯುವ ಸಜೀವ ಕಾಲುವೆಗಳ ಒತ್ತುವರಿಯನ್ನು ತೆರವು ಮಾಡಿ. ನೀರು ಹರಿಯದೇ ಇರುವ ನಿರ್ಜೀವ ಕಾಲುವೆಗಳನ್ನು ಸದ್ಯಕ್ಕೆ ತೆರವು ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಆದೇಶಿಸಿದ್ದಾರೆ.

ಈ ಮೂಲಕ ಮನೆ ಹಾಗೂ ವಾಣಿಜ್ಯ ಕಟ್ಟಡಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಬಹುತೇಕರು ನಿಟ್ಟುಸಿರು ಬಿಡುವಂತಾಗಿದೆ. ಆದರೆ, ತೆರವು ಕಾರ್ಯಾಚರಣೆ ಮಾತ್ರ ಸ್ಥಗಿತಗೊಳ್ಳುವುದಿಲ್ಲ. ಮಳೆ ಸುರಿಯುವ ಸಂದರ್ಭದಲ್ಲಿ ಮುಳುಗಡೆಯಾಗುವ ಪ್ರದೇಶಗಳಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ ಒತ್ತುವರಿಯನ್ನು ತೆರವು ಮಾಡಿ ಎಂದು ಸಿಎಂ ಸೂಚನೆ ನೀಡಿದ್ದಾರೆ. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೊಳಗಾಗುವ 38 ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಜಾಗದಲ್ಲಿನ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು. ಅವಶ್ಯಕತೆ ಇರುವ ಕಡೆ ಮಾತ್ರ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳಿ, ಕೆರೆಯಿಂದ ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಗಳಿಗೆ ಆದ್ಯತೆ ನೀಡಿ, ಈ ಹಿಂದೆ ವ್ಯವಸಾಯದ ಭೂಮಿಯಾಗಿದ್ದಾಗ ಅಲ್ಲಿ ರಾಜಕಾಲುವೆ ಇದೆ ಎಂದು ಗುರುತಿಸಿರಲಿಲ್ಲ. ಬಡಾವಣೆಗಳಾದ ಮೇಲೆ ರಾಜಕಾಲುವೆ ಗುರುತಿಸಲಾಗಿದೆ. ಹೀಗಾಗಿ ತೆರವು ಕಾರ್ಯಾಚರಣೆ ವೇಳೆ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ. ನಿರ್ಜೀವ ಕೆರೆಗಳನ್ನು ತೆರವುಗೊಳಿಸುವುದು ಬೇಡ ಎಂದು ಸಿಎಂ ಸೂಚಿಸಿದ್ದಾರೆ ಎಂದರು.
ಪರಿಹಾರ:
ಮೇಯರ್ ಮಂಜುನಾಥರೆಡ್ಡಿ ಮಾತನಾಡಿ, ರಾಜಕಾಲುವೆ ಒತ್ತುವರಿ ಕಾರ್ಯಾಚರಣೆಯಿಂದ ಮನೆಕಳೆದುಕೊಂಡ ನಿರ್ಗತಿಕರಿಗೆ ಪರಿಹಾರ, ನಿವೇಶನ ಹಾಗೂ ಫ್ಲಾಟ್ ನೀಡುವುದಾಗಿ ಸಿಎಂ ಭರವಸೆ ನೀಡಿರುವ ಅವರು, ಮನೆ ಕಳೆದುಕೊಂಡವರಿಗೆ ಈ ಸಂದೇಶ ರವಾನಿಸಿದ್ದಾರೆ ಎಂದರು.  ಮನೆ ಕಳೆದುಕೊಂಡ ನಿರ್ಗತಿಕರ ಪಟ್ಟಿಮಾಡುವಂತೆ ಸಿಎಂ ಸೂಚಿಸಿದ್ದು, ಇದರಲ್ಲಿ ಪೂರ್ತಿ ಮನೆ ಕಳೆದುಕೊಂಡವರು, ಭಾಗಶಃ ಮನೆ ಕಳೆದುಕೊಂಡವರನ್ನು ಗುರುತಿಸಲಾಗುವುದು. ಬೇರೆಲ್ಲೂ ನಿವೇಶನ, ಮನೆಗಳಿಲ್ಲದೆ ಬೀದಿಗೆ ಬಂದ ಕುಟುಂಬಗಳು ಬಯಸಿದರೆ ತಕ್ಷಣಕ್ಕೆ ಬಿಡಿಎ ನಿರ್ಮಿಸಿರುವ ಫ್ಲಾಟ್ಗಳನ್ನು ಹಂಚಿಕೆ ಮಾಡಲಾಗುವುದು. ನಿವೇಶನಕ್ಕಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರ ಸಾವಿರಾರು ಎಕರೆಗಳನ್ನು ಸ್ವಾಧೀನ ಪಡಿಸಿಕೊಂಡಿದೆ. ನಿರ್ಗತಿಕರಿಗೆ ಅಲ್ಲಿ ನಿವೇಶನ ನೀಡಿ ಪುನರ್ವಸತಿ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.

ನಿರ್ಗತಿಕರಿಗೆ ಈ ಸೌಲಭ್ಯ ಒದಗಿಸಲು ಫಲಾನುಭವಿಗಳ ಪಟ್ಟಿ ಸಿದ್ದಪಡಿಸುವುದಾಗಿ ಮೇಯರ್ ತಿಳಿಸಿದರು. ತೆರವು ಕಾರ್ಯಾಚರಣೆ ಸದ್ಯಕ್ಕೆ ಸ್ಥಗಿತಗೊಳ್ಳುವುದಿಲ್ಲ. ಯಲಹಂಕ, ಬೊಮ್ಮನಹಳ್ಳಿ, ಕೆ.ಆರ್.ಪುರ ಮತ್ತಿತರ ಭಾಗಗಳಲ್ಲೂ ಮುಂದುವರೆಯಲಿದೆ. ನಿರ್ಜೀವ ಕಾಲುವೆ ಮೇಲೆ ಆರ್ಆರ್ನಗರದ ಐಡಿಯಲ್ ಹೋಂ ಬಡಾವಣೆ ನಿರ್ಮಾಣವಾಗಿದೆ. ಹೀಗಾಗಿ ಅದನ್ನು ತೆರವುಗೊಳಿಸುವ ಅಗತ್ಯ ಇಲ್ಲ ಎಂದು ಯಾವ ಅಧಿಕಾರಿಗಳೂ ವಾದ ಮಾಡಿಲ್ಲ. ಅನಗತ್ಯವಾಗಿ ಗೊಂದಲ ಮೂಡಿಸಬಾರದು. ಮಳೆ ನೀರಿನಿಂದ ತೊಂದರೆಗಳಾಗುವ ಯಾವುದೇ ಜಾಗವಾಗಿದ್ದರೂ ಅದನ್ನು ತೆರವುಗೊಳಿಸುತ್ತೇವೆ. ರಾಜರಾಜೇಶ್ವರಿ ನಗರದಲ್ಲೂ ಅಗತ್ಯ ಇರುವ ಕಡೆ ತೆರವು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದರು.

ನಮ್ಮ ಪಕ್ಷದ ನಾಯಕರಿರಲಿ , ಸಚಿವರಿರಲಿ, ಯಾವುದೇ ಪ್ರಭಾವಿ ವ್ಯಕ್ತಿಗಳಿರಲಿ, ದೊಡ್ಡ ದೊಡ್ಡ ಬಿಲ್ಡರ್ ಇರಲಿ ಯಾರಿಗೂ ಮುಲಾಜು ತೋರಿಸದೆ ಅಕ್ರಮವಾಗಿರುವ ಒತ್ತುವರಿಯನ್ನು ತೆರವುಗೊಳಿಸುವಂತೆ ತಾಕೀತು ಮಾಡಿದ್ದಾರೆ. ಅದರಂತೆ ಕಾರ್ಯಾಚರಣೆ ನಡೆಯಲಿದೆ ಎಂದು ಅವರು ಸ್ಪಷ್ಟ ಪಡಿಸಿದರು.  ನಿರ್ಜೀವ, ಸಜೀವ ಕಾಲುವೆಗಳ ಬಗ್ಗೆ ಹೆಚ್ಚಿನ ಚರ್ಚೆಯಾಗಿಲ್ಲ. ಕೆರೆಯಿಂದ ಕೆರೆ ಸಂಪರ್ಕ ಕಲ್ಪಿಸುವ ಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಲಾಗುವುದು. ನಿರ್ಜೀವ ಕಾಲುವೆಗಳ ಹೆಸರಿನಲ್ಲಿ ಪ್ರಭಾವಿಗಳ ನಿರ್ಮಾಣಗಳನ್ನು ರಕ್ಷಿಸುವ ಉದ್ದೇಶವಿಲ್ಲ ಎಂದು ತಿಳಿಸಿದರು.

ಸರ್ವೆ ರಿಪೋರ್ಟ್ ಬಗ್ಗೆ ಯಾವುದೇ ಗೊಂದಲವಿಲ್ಲ:
ಭೂ ಸರ್ವೆ ದಾಖಲೆಗಳ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಆತುರಾತುರವಾಗಿ ಸರ್ವೆ ಮಾಡಿಸಲಾಗುವುದಿಲ್ಲ. ಸ್ವಲ್ಪ ಹೆಚ್ಚೂ ಕಡಿಮೆಯಾದರೂ ಮುಂದೆ ಭಾರೀ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಸಾವಧಾನವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮೇಯರ್ ಮಂಜುನಾಥರೆಡ್ಡಿ ಹೇಳಿದರು.  ಸಚಿವ ರೋಷನ್ಬೇಗ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ಗುಂಡೂರಾವ್, ಶಾಸಕರಾದ ಆರ್.ವಿ.ದೇವರಾಜ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಎಂ.ಕೃಷ್ಣಪ್ಪ, ಎನ್.ಎ.ಹ್ಯಾರಿಸ್, ಪ್ರಿಯಾಕೃಷ್ಣ, ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ಜಾದವ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.

Facebook Comments

Sri Raghav

Admin