ರಾಜಕಾಲುವೆ ಒತ್ತುವರಿ ತೆರವು ನಿಲ್ಲುವುದಿಲ್ಲ : ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

gSGHSSSS

ಬೆಂಗಳೂರು, ಆ.8- ನಗರದ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ಪ್ರಭಾವಿಗಳಿರಲಿ, ಬಿಲ್ಡರ್ಸ್‍ಗಳಿರಲಿ, ಯಾರೇ ಇರಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಒತ್ತುವರಿ  ತೆರವು ಮಾಡದಿದ್ದರೆ ಮುಂದೊಂದು ದಿನ ಚೆನ್ನೈನ ಪರಿಸ್ಥಿತಿ ನಮಗೂ ಬಂದೊದಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು. ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ  ಆವರಣದಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ರಾಜಕಾಲುವೆ ಒತ್ತುವರಿ ತೆರವು ಕಾರ್ಯವನ್ನು ಮುಂದುವರಿಸಲಾಗುವುದು. ಯಾವುದೇ ಪ್ರಭಾವಿಗಳ ಒತ್ತಡಕ್ಕೆ ಮಣಿಯುವುದಿಲ್ಲ. ಒತ್ತುವರಿ ತೆರವಿನಿಂದ ಕೆಲವರಿಗೆ ತೊಂದರೆ ಆಗಿರಬಹುದು.  ಒಳ್ಳೆಯ ಕೆಲಸ ಮಾಡುವಾಗ ಕೆಲವರಿಗೆ ತೊಂದರೆಯಾಗುವುದು ಸಹಜ ಎಂದು ಹೇಳಿದರು.

ರಾಜಕಾಲುವೆ ಒತ್ತುವರಿಯಲ್ಲಿ ಅಧಿಕಾರಿಗಳದ್ದೂ ತಪ್ಪಿರಬಹುದು. ಆದರೆ, ಅವ್ಯಾವೂ ನಮ್ಮ ಕಾಲದಲ್ಲಿ ಆಗಿದ್ದಲ್ಲ. ಕಾಲುವೆ ಮೇಲೆ ಮನೆ ಕಟ್ಟಿಕೊಂಡಿದ್ದು ಜನರ ತಪ್ಪಲ್ಲವೆ..? ಎಂದು ಸಿಎಂ ಪ್ರಶ್ನಿಸಿದರು.  ಮಳೆ ಬಂದು ಜನವಸತಿ ಪ್ರದೇಶಗಳಿಗೆ, ಮನೆಗಳಿಗೆ, ಅಪಾರ್ಟ್‍ಮೆಂಟ್‍ಗಳಿಗೆ ನೀರು ನುಗ್ಗಿದರೆ ಸರ್ಕಾರವನ್ನು ದೂಷಣೆ ಮಾಡುತ್ತೀರ. ತೆರವು ಮಾಡಲು ಹೋದರೆ ಮತ್ತೆ ನಮ್ಮನ್ನೇ ಕೇಳುತ್ತೀರ, ತೆರವು ಮಾಡದೆ ಇದ್ದರೂ ನಮ್ಮನ್ನೇ ಪ್ರಶ್ನೆ ಮಾಡುತ್ತೀರ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.  ಕೆಲವರಿಗೆ ತೊಂದರೆಯಾದರೂ ಉಳಿದವರಿಗೆ ಅನುಕೂಲವಾಗುತ್ತದೆ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಕಾನೂನಿನ ಪ್ರಕಾರ, ಕೆಲಸ ಮಾಡಬೇಕು. ಜನರು ಮಾಡುವ ಆರೋಪಗಳ ಬಗ್ಗೆಯೂ ಕೂಡ ತನಿಖೆ ನಡೆಸಲಾಗುತ್ತದೆ. ಯಾರೇ ತಪ್ಪು ಮಾಡಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿದ್ದು ಖಡಕ್ಕಾಗಿ ಹೇಳಿದರು.

ಪ್ರಭಾವಿಗಳ ಕಟ್ಟಡಗಳು ಇರುವ ಕಡೆಗಳಲ್ಲಿ ರಾಜಕಾಲುವೆಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆಧಾರ ಇದ್ದರೆ ಆರೋಪ ಮಾಡಬೇಕು. ಮನೆಗಳನ್ನು ಒಡೆಯಬಾರದು ಎನ್ನುತ್ತಾರೆ. ನಮಗೂ ಕಾಳಜಿ ಇದೆ. ಹಾಗಾದರೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಬಾರದೆ..? ಮಳೆ ಬಂದಾಗ ಆಗುವ ಅನಾಹುತದ ಬಗ್ಗೆಯೂ ಯೋಚಿಸಬೇಕಲ್ಲವೆ..? ಕೆಲ ಅಧಿಕಾರಿಗಳಿಂದಲೂ ತಪ್ಪುಗಳು ಆಗಿವೆ. ಇಲ್ಲ ಎಂದು ಹೇಳಲಾಗದು. ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿಯೇ ತನಿಖೆಗೆ ಆದೇಶ ನೀಡಲಾಗಿದೆ. ಅಕ್ರಮ ನಿರ್ಮಾಣ ಮತ್ತು ಒತ್ತುವರಿಗೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ರಾಜಕಾಲುವೆ ಒತ್ತುವರಿ ತೆರವುಗೊಳಿಸದಿದ್ದರೆ ಬೆಂಗಳೂರು ಚೆನ್ನೈ ನಗರದಂತೆ ಆಗುತ್ತದೆ. ಆಗ ತೊಂದರೆ ಅನುಭವಿಸುವವರು ಸಾರ್ವಜನಿಕರೇ ಅಲ್ಲವೇ ಎಂದು ಪ್ರಶ್ನಿಸಿದರು.

ಮಳೆ ನೀರು ಹರಿಯುವ ಚರಂಡಿ ಮೇಲೆ ಮನೆ ಕಟ್ಟಿಕೊಂಡಿರುವುದರಿಂದ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗುತ್ತದೆ. ಆಗ ಬಿಬಿಎಂಪಿಯನ್ನು ದೂಷಿಸಲಾಗುತ್ತದೆ. ಈಗ ಮನೆಗಳನ್ನು ಒಡೆಯಲು ಮುಂದಾದರೆ ಟೀಕೆ ವ್ಯಕ್ತವಾಗುತ್ತದೆ. ಈ ರೀತಿಯಾದರೆ ಉತ್ತರಿಸುವುದು ಹೇಗೆ ಎಂದು ಸಿಎಂ ಪ್ರಶ್ನಿಸಿದರು.  ಇದಕ್ಕೂ ಮುನ್ನ ನಿಜಲಿಂಗಪ್ಪನವರ ಬಗ್ಗೆ ಮಾತನಾಡಿದ ಅವರು, ನಿಜಲಿಂಗಪ್ಪನವರು ಮೂರು ಬಾರಿ ಸಿಎಂ ಆಗಿದ್ದರು. ಅವರ ಕಾಲ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಲಾಗಿತ್ತು. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಕರ್ನಾಟಕದ ಏಕೀಕರಣಕ್ಕೆ ಹೋರಾಟ ಮಾಡಿದ್ದರು ಎಂದು ಸ್ಮರಿಸಿದರು.  ಸಚಿವರಾದ ರಾಮಲಿಂಗಾರೆಡ್ಡಿ, ಆಂಜನೇಯ, ಮಾಜಿ ಕೇಂದ್ರ ಸಚಿವ ರಾಜಶೇಖರನ್, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಭಾ ಗವಹಿಸಿದ್ದರು.

Facebook Comments

Sri Raghav

Admin