ರಾಜಕಾಲುವೆ ಒತ್ತುವರಿ ಪತ್ತೆ ಕಾರ್ಯಾಚರಣೆಗೆ ಇಳಿದ ಬಿಎಂಟಿಎಫ್ ಎಡಿಜಿಪಿ
ಬೆಂಗಳೂರು, ಆ.22-ನಗರದಲ್ಲಿ ಹೆಚ್ಚುತ್ತಿರುವ ರಾಜಕಾಲುವೆ ಒತ್ತುವರಿ ಪತ್ತೆ ಕಾರ್ಯಾಚರಣೆಗೆ ಸ್ವತಃ ಬಿಎಂಟಿಎಫ್ ಎಡಿಜಿಪಿ ಪ್ರಶಾಂತ್ಕುಮಾರ್ ಠಾಕೂರ್ ಅವರೇ ಕಾರ್ಯಾಚರಣೆಗೆ ಇಳಿದಿದ್ದಾರೆ. ಕಳೆದ ಐದು ದಿನಗಳಲ್ಲಿ ಸುರಿದ ಮಳೆ ನಗರದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿತ್ತು. ರಾಜಕಾಲುವೆಯ ನೀರು ತುಂಬಿ ರಸ್ತೆ, ಮನೆಗಳಿಗೆ ನುಗ್ಗಿ ಗಬ್ಬೆದ್ದು ಹೋಗಿತ್ತು. ಇಷ್ಟೆಲ್ಲಾ ಅನಾಹುತಕ್ಕೆ ರಾಜಕಾಲುವೆ ಒತ್ತುವರಿ ಕಾರಣ ಎಂಬ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ರಾಜಕಾಲುವೆ ಒತ್ತುವರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಎಫ್ ಎಲ್ಲೆಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ ಎಂಬುದನ್ನು ಪತ್ತೆ ಹಚ್ಚಲು ಎಸ್ಪಿ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಿದೆ. ಈಗಾಗಲೇ ಈ ತಂಡಗಳು ನಗರದಲ್ಲಿ ಎಲ್ಲೆಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ ಎಂಬುದನ್ನು ತಿಳಿಯಲು ಕಾರ್ಯಾಚರಣೆಗಿಳಿದಿವೆ. ಎಲ್ಲೇ ರಾಜಕಾಲುವೆ ಒತ್ತುವರಿಯಾಗಿದ್ದರೂ. ಅಲ್ಲಿ ತಂಡದವರು ಸ್ವಯಂಪ್ರೇರಿತ ದೂರು ದಾಖಲಿಸಲು ಅನುಮತಿ ನೀಡಲಾಗಿದೆ. ಸಾರ್ವಜನಿಕರು ಕೂಡ ಈ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇಂದು ಸ್ವತಃ ಎಡಿಜಿಪಿ ಪ್ರಶಾಂತ್ಕುಮಾರ್ ಠಾಕೂರ್ ಅವರೇ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ರಾಜಕಾಲುವೆ ಒತ್ತುವರಿಯಾಗಿರುವುದನ್ನು ಪರಿಶೀಲಿಸಿದರು. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ರಾಜಕಾಲುವೆ ಒತ್ತುವರಿಯಾಗಿರುವ ಬಗ್ಗೆ ಸಂಪೂರ್ಣವರದಿ ಸಿದ್ಧಪಡಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸಲು ಬಿಎಂಟಿಎಫ್ ತೀರ್ಮಾನಿಸಿದೆ.