ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ಬಿಲ್ಡರ್‍ಗಳ ವಿರುದ್ಧವೂ ಮುಲಾಜಿಲ್ಲದೆ ಕ್ರಮ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha-01ಮೈಸೂರು, ಆ.12- ರಾಜಕಾಲುವೆ ಒತ್ತುವರಿ ಸಂಬಂಧ ಈಗಾಗಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಬಿಲ್ಡರ್‍ಗಳು ತಪ್ಪು ಮಾಡಿದ್ದರೆ ಅವರುಗಳ ವಿರುದ್ಧವೂ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು.   ರಾಜಕಾಲುವೆಯನ್ನು ನಕ್ಷೆ ಆಧಾರಿತವಾಗಿ ತೆರವುಗೊಳಿಸಲಾಗುತ್ತದೆ. ಈ ಮಾರ್ಗದಲ್ಲಿ ಎಷ್ಟೇ ಪ್ರಭಾವಿಗಳ ಕಟ್ಟಡವಿದ್ದರೂ ನಿರ್ಧಾಕ್ಷಿಣ್ಯವಾಗಿ ದ್ವಂಸಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  ಮೈಸೂರಿಗೆ ಆಗಮಿಸಿದ್ದ ಅವರು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕಾಲುವೆ ತೆರವು ಕಾರ್ಯಾಚರಣೆಯಲ್ಲಿ ಬಡವರ ಮನೆಗಳನ್ನು ಒಡೆಯಲಾಗುತ್ತಿದೆ. ಶ್ರೀಮಂತರ ಮತ್ತು ಪ್ರಭಾವಿಗಳ ಕಟ್ಟಡಗಳನ್ನು ಉಳಿಸಲಾಗುತ್ತಿದೆ ಎಂಬ ಆಕ್ಷೇಪಗಳನ್ನು ತಳ್ಳಿ ಹಾಕಿದರು.

ರಾಜಕಾಲುವೆ ತೆರವು ಕಾರ್ಯಾಚರಣೆಯನ್ನು ನಕ್ಷೆ ಆಧಾರಿತವಾಗಿ ನಡೆಸಲಾಗುತ್ತಿದೆ. ಅಪಾರ್ಟ್‍ಮೆಂಟ್, ಶಾಪಿಂಗ್‍ಮಾಲ್ ಸೇರಿದಂತೆ ಎಷ್ಟೇ ದೊಡ್ಡ ಕಟ್ಟಡಗಳಿದ್ದರೂ ಉಳಿಸುವುದಿಲ್ಲ. ಎಷ್ಟೇ ದೊಡ್ಡವ್ಯಕ್ತಿಗಳು ಕಟ್ಟಡ ನಿರ್ಮಿಸಿದ್ದರೂ ಪ್ರಭಾವಕ್ಕೆ ಮಣಿಯುವುದಿಲ್ಲ. ನಕ್ಷೆಯಲ್ಲಿರುವಂತೆ ರಾಜಕಾಲುವೆ ಖುಲ್ಲಾ  ಆಗಿರಬೇಕು. ನಮ್ಮ ಸರ್ಕಾರ ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದರು.
ರಾಜಕಾಲುವೆ ಒತ್ತುವರಿಗೆ ಸಹಕರಿಸಿದ ಮತ್ತು ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ 20ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಈಗಾಗಲೇ ಸೂಚಿಸಿದ್ದೇನೆ. ಕೇವಲ ಅಧಿಕಾರಿಗಳ ವಿರುದ್ಧವಷ್ಟೇ ಕ್ರಮ ಜರುಗಿಸುವುದಿಲ್ಲ. ಅಕ್ರಮವಾಗಿ ಒತ್ತುವರಿ ಮಾಡಿದ ಬಿಲ್ಡರ್‍ಗಳ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಸಿಎಂ ಹೇಳಿದರು.
ಈಗಾಗಲೇ ಗುರುತಿಸಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ. ಜತೆಗೆ ತಪ್ಪು ಮಾಡಿ ತಪ್ಪಿಸಿಕೊಂಡಿರುವ ಅಧಿಕಾರಿಗಳನ್ನು ಪತ್ತೆಹಚ್ಚಲು ಸೂಚಿಸಲಾಗಿದೆ ಎಂದರು.
ಮಹದಾಯಿ ಕಳಸಾ ಬಂಡೂರಿ ಹೋರಾಟದಲ್ಲಿ ಜೈಲು ಸೇರಿದ ರೈತರ ಬಿಡುಗಡೆಗೆ ರಾಜ್ಯ ಸರ್ಕಾರ ಸಹಕಾರ ನೀಡಿದೆ. ಜೈಲಿನಲ್ಲಿರುವ ರೈತರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ಸರ್ಕಾರ ಅಥವಾ ಪೆÇಲೀಸರು ಯಾವುದೇ ಆಕ್ಷೇಪಣೆ ಸಲ್ಲಿಸಬಾರದು ಎಂಬ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಹೋರಾಟಗಾರರಿಗೆ  ಜಾಮೀನು ನೀಡಿದೆ. ಇದು ತಮಗೆ ಸಮಾಧಾನ ತಂದಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಏಕಾಏಕಿ ಹಿಂಪಡೆಯಲು ತಾಂತ್ರಿಕ ತೊಂದರೆಯಿರುವುದರಿಂದ ದೋಷಾರೋಪಣೆ ಪಟ್ಟಿ ಸಲ್ಲಿಸುವವರೆಗೂ ತಾಳ್ಮೆಯಿಂದ ಇರುವಂತೆ ಅವರು ಮನವಿ ಮಾಡಿದರು.

ಇಂದು ನನ್ನ ಹುಟ್ಟುಹಬ್ಬ. ಆದರೆ, ಅದನ್ನು ಆಚರಿಸಿಕೊಳ್ಳುವ ಮನಸ್ಥಿತಿಯಲ್ಲಿ ನಾನಿಲ್ಲ. ನನ್ನ ಮಗ ರಾಕೇಶ್‍ನನ್ನು ಕಳೆದುಕೊಂಡ ದುಃಖದಿಂದ ಇನ್ನೂ ಹೊರಬಂದಿಲ್ಲ. ಆದ್ದರಿಂದ ದಯವಿಟ್ಟು ಯಾರೂ ನನ್ನ ಹುಟ್ಟುಹಬ್ಬವನ್ನು ಆಚರಿಸಬೇಡಿ, ಜಾಹೀರಾತು ನೀಡುವುದು, ಫ್ಲೆಕ್ಸ್ ಬ್ಯಾನರ್ ಕಟ್ಟುವುದು, ಸಿಹಿ ಹಂಚುವುದು ಮಾಡಬಾರದು. ಹಾರ-ತುರಾಯಿಗಳನ್ನು ತಂದು ನನಗೆ ಶುಭಾಶಯ ಕೋರುವುದನ್ನೂ ಮಾಡಬೇಡಿ. ಅದನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿ ನಾನಿಲ್ಲ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.   ದಸರಾ ಹಾಗೂ ಸ್ವಾತಂತ್ರ್ಯೋತ್ಸವದ ದಿನ ಮೈಸೂರಿಗೆ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇತ್ತೀಚೆಗೆ ಮೈಸೂರಿನ ನ್ಯಾಯಾಲಯದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin