ರಾಜಕೀಯಕ್ಕೆ ಹಿಂತಿರುಗುವರೇ ಗಣಿಧಣಿ ..?
ಬೆಂಗಳೂರು,ನ.17-ತಮ್ಮ ಪುತ್ರಿಯ ಅದ್ಧೂರಿ ಮದುವೆ ಮೂಲಕ ದೇಶದ ಗಮನಸೆಳೆದಿರುವ ಗಣಿಧಣಿ ಜನಾರ್ದನ ರೆಡ್ಡಿ ಮತ್ತೆ ಸಕ್ರೀಯ ರಾಜಕಾರಣದತ್ತ ಮುಖ ಮಾಡಿದ್ದಾರೆಯೇ?ಕಳೆದ ಐದು ವರ್ಷಗಳಿಂದ ರಾಜಕಾರಣದಿಂದಲೇ ದೂರ ಉಳಿದಿರುವ ಜನಾರ್ದನ ರೆಡ್ಡಿ ಕಳೆದು ಹೋಗಿರುವ ತಮ್ಮ ಗತಕಾಲದ ವೈಭವಗಳನ್ನು ಮರುಕಳಿಸುವ ಹಪಾಹಪಿಯಲ್ಲಿದ್ದಾರೆ. ಇದಕ್ಕಾಗಿಯೇ ಹಲವರ ವಿರೋಧದ ನಡುವೆಯೂ ತಮ್ಮ ಪುತ್ರಿ ಬ್ರಹ್ಮಿಣಿ ವಿವಾಹವನ್ನು ವಿರೋಧಿಗಳಿಗೆ ಕಣ್ಣು ಕುಕ್ಕುವಂತೆ ನೆರವೇರಿಸಿದರು. ಇದರ ಸರಳ ಅರ್ಥ ಇಷ್ಟೇ. ಜನಾರ್ದನ ರೆಡ್ಡಿ ಮತ್ತೆ ತಾನು ಎಷ್ಟು ಬಲಿಷ್ಠ ಎಂಬುದನ್ನು ಸಾಬೀತುಪಡಿಸುವ ಉದ್ದೇಶದಿಂದಲೇ ಇದನ್ನು ನೆರವೇರಿಸಿದ್ದಾರೆ.
ಸದ್ಯಕ್ಕೆ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿರುವ ಜನಾರ್ದನ ರೆಡ್ಡಿ ಯಾವ ಪಕ್ಷಕ್ಕೂ ಬೇಡವಾದ ಅಸ್ಪೃಶ್ಯ ರಾಜಕಾರಣಯಾಗಿದ್ದಾರೆ. ಯಾವೊಂದು ಪಕ್ಷವೂ ಅವರನ್ನು ರತ್ನಗಂಬಳಿ ಹಾಕಿ ಸ್ವಾಗತಿಸುವ ಸ್ಥಿತಿಯಲ್ಲಿಲ್ಲ. ಏಕೆಂದರೆ ಒಬ್ಬ ರೆಡ್ಡಿಯನ್ನು ಪಕ್ಷಕ್ಕೆ ತೆಗೆದುಕೊಂಡರೆ ತಮ್ಮ ಪಕ್ಷಕ್ಕೆ ಎಲ್ಲಿ ಕಪ್ಪು ಚುಕ್ಕೆ ಮೂಡುತ್ತದೆ ಎಂಬ ಅಳುಕು ಎಲ್ಲರಲ್ಲೂ ಕಾಡುತ್ತಿದೆ.ರೆಡ್ಡಿಯೇನು ರಾಜಕಾರಣಕ್ಕೆ ಧುಮುಕುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಅವರ ಮೇಲೆ ಕೇಳಿಬಂದಿರುವ ಅಕ್ರಮ ಗಣಿಗಾರಿಕೆ ಮತ್ತು ಭ್ರಷ್ಟಾಚಾರದ ಆರೋಪಗಳು ಯಾವ ಪಕ್ಷಕ್ಕೂ ಬೇಡದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. 2011 ಸೆಪ್ಟೆಂಬರ್ 5ರಂದು ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಹೈದರಾಬಾದ್ನ ಸಿಬಿಐ ವಿಶೇಷ ತಂಡ ಜನಾರ್ಧನ ರೆಡ್ಡಿಯನ್ನು ಬಂಧಿಸಿತ್ತು. ತದನಂತರ ಮೂರುವರೆ ವರ್ಷಗಳ ಬಳಿಕ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ತವರೂರು ಬಳ್ಳಾರಿಗೆ ಕಾಲಿಡಬಾರದೆಂಬ ಷರತ್ತು ವಿಧಿಸಿತ್ತು. ತಮ್ಮ ಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ ಬಳ್ಳಾರಿಗೆ ಹೋಗಲು ಅನುಮತಿ ನೀಡುವಂತೆ ಕೋರಿದ ಕಾರಣ ನ್ಯಾಯಾಲಯ ಅನುಮತಿ ನೀಡಿತ್ತು.
ಬಿಜೆಪಿಯತ್ತ ರೆಡ್ಡಿ: ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧಿಸಿಯೇ ರಾಜಕಾರಣಕ್ಕೆ ಕಾಲಿಟ್ಟಿದ್ದ ಜನಾರ್ದನ ರೆಡ್ಡಿ ತಮ್ಮ ಮೂಲ ಪಕ್ಷವಾದ ಬಿಜೆಪಿಯಿಂದಲೇ ಮರುಹುಟ್ಟು ಪಡೆಯುವ ಆಲೋಚನೆಯಲ್ಲಿದ್ದಾರೆ. ಸಿಬಿಐ ರೆಡ್ಡಿಯವರನ್ನು ಬಂಧಿಸಿದ ಬಳಿಕ ಬಿಜೆಪಿ ಅವರನ್ನು ಪಕ್ಷದಿಂದ ಅಮಾನತು ಮಾಡಿತ್ತು. ಬಿಜೆಪಿಯಿಂದ ರೆಡ್ಡಿ ಕುಟುಂಬವನ್ನು ದೂರ ಇಟ್ಟಿದ್ದರು. ಕಮಲ ಪಕ್ಷದೊಳಗಿನ ಕೆಲ ನಾಯಕರ ಸಂಬಂಧ ಹಾಲುಜೇನಿನಂತಿತ್ತು. ಮಾಜಿ ಸಚಿವ ಕರುಣಾಕರ ರೆಡ್ಡಿ , ಸಹೋದರ ಸೋಮಶೇಖರ ರೆಡ್ಡಿ ಜೊತೆ ಈಗಲೂ ಬಿಜೆಪಿ ನಾಯಕರು ಅಮಿನಾಭಾವ ಸಂಬಂಧವಿಟ್ಟುಕೊಂಡಿದ್ದಾರೆ. ಇನ್ನು ಜನಾರ್ದನ ರೆಡ್ಡಿಯ ಬಲಗೈನಂತಿರುವ ಮಾಜಿ ಸಚಿವ ಶ್ರೀರಾಮುಲು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿಯೂ ಆಯ್ಕೆಯಾಗಿದ್ದಾರೆ. ರೆಡ್ಡಿಯನ್ನು ಪಕ್ಷಕ್ಕೆ ಕರೆತರಲು ರಾಮುಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದರಾದರೂ ಅವರ ಮೇಲಿರುವ ಆರೋಪ ಕೈ ಕಟ್ಟಿ ಹಾಕಿದೆ. ಒಂದೆಡೆ ಪ್ರಧಾನಿ ನರೇಂದ್ರಮೋದಿ ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ದ ಸಮರವನ್ನು ಸಾರಿದ್ದಾರೆ.
ಇಂಥ ಸಂದರ್ಭದಲ್ಲಿ ರೆಡ್ಡಿಯನ್ನು ಪಕ್ಷಕ್ಕೆ ಆಹ್ವಾನಿಸಿದರೆ ರಾಷ್ಟ್ರಮಟ್ಟದಲ್ಲಿ ಮುಜುಗರಕ್ಕೆ ಸಿಲುಕಬಹುದೆಂಬ ಆತಂಕ ಎಲ್ಲರಲ್ಲಿ ಕಾಡುತ್ತಿದೆ. ಇನ್ನು ರೆಡ್ಡಿ ಜೊತೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ 2ನೇ ಹಂತದ ನಾಯಕರು ಅನ್ಯೋನ್ಯವಾಗಿಯೇ ಇದ್ದಾರೆ. ಎರಡು ದಿನಗಳಿಂದ ನಡೆದ ಪುತ್ರಿಯ ವಿವಾಹ ಸಮಾರಂಭಕ್ಕೆ ಹೋಗಿ ಆಶೀವರ್ದಿಸಿ ಬಂದಿದ್ದಾರೆ. ಪಕ್ಷ ಸೇರುವ ಇಂಗಿತವನ್ನು ತಮ್ಮ ಆಪ್ತರ ಬಳಿ ರೆಡ್ಡಿ ವ್ಯಕ್ತಪಡಿಸಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಗದಗ ಜಿಲ್ಲೆಯ ಉಸ್ತುವಾರಿಯನ್ನು ನೀಡಿದರೆ ಗೆಲ್ಲಿಸಿಕೊಡುವ ಹೊಣೆಗಾರಿಕೆ ತಮ್ಮದೆಂಬ ಭರವಸೆಯನ್ನು ನೀಡಿದ್ದಾರೆ. ಆದರೆ ರೆಡ್ಡಿಯನ್ನು ಪಕ್ಷಕ್ಕೆ ಬರಮಾಡಿಕೊಂಡರೆ ಪ್ರತಿಪಕ್ಷಗಳು ಇದನ್ನೇ ಅಸ್ತ್ರ ಮಾಡಿಕೊಂಡು ತಮ್ಮ ವಿರುದ್ಧ ಚುನಾವಣೆಯಲ್ಲಿ ಅಪಪ್ರಚಾರ ನಡೆಸಬಹುದೆಂಬ ಅಳುಕು ಆತಂಕ ಕಮಲ ಪಕ್ಷವನ್ನು ಬಿಟ್ಟು ಬಿಟ್ಟು ಕಾಡುತ್ತಿದೆ. ಸದ್ಯಕ್ಕೆ ಜನಾರ್ದನರೆಡ್ಡಿ ಪರಿಸ್ಥಿತಿ ನೀರಿನಿಂದ ಹೊರಬಿದ್ದ ಮೀನಿನಂತಾಗಿದೆ.
-ರವೀಂದ್ರ.ವೈ.ಎಸ್
► Follow us on – Facebook / Twitter / Google+