ರಾಜಕೀಯ ಅಖಾಡಕ್ಕಿಳಿದ ಸಿದ್ದರಾಮಯ್ಯನವರ ಪುತ್ರ ಯತೀಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

Yateendra

ಮೈಸೂರು, ಆ.25- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿರಿಯ ಮಗ ರಾಕೇಶ್ ಸಿದ್ದರಾಮಯ್ಯನವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ರಾಜಕೀಯ ಅಖಾಡಕ್ಕಿಳಿದಿರುವ ಅವರ ಮತ್ತೋರ್ವ ಪುತ್ರ ಡಾ.ಯತೀಂದ್ರ ತನ್ನ ತಂದೆಯ ಜವಾಬ್ದಾರಿ ಹೊರಲು ಸಿದ್ಧರಾಗಿದ್ದು ಇಂದು ಕೂಡ ಜನರ ಅಹವಾಲುಗಳನ್ನು ಸ್ವೀಕರಿಸಿದರು.  ವರುಣಾ, ಚಾಮುಂಡೇಶ್ವರಿ, ಮೈಸೂರು ಕ್ಷೇತ್ರದ ಜನರಿಂದ ಅಭಿನಂದನೆ ಸ್ವೀಕರಿಸಿದ ನಂತರ ಅವರು, ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಿದರು.  ನಿನ್ನೆಯಿಂದಲೇ ಜನರೊಂದಿಗೆ ಬೆರೆಯುತ್ತಿದ್ದಾರೆ. ಇದುವರೆಗೆ ಎಲೆಮರೆಯ ಕಾಯಿಯಂತಿದ್ದ ಡಾ.ಯತೀಂದ್ರ ಅವರು ಈಗ ಬಹಿರಂಗವಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.  ರಾಕೇಶ್ ಅವರು ಮಾಡುತ್ತಿದ್ದ ಎಲ್ಲ ಕೆಲಸಗಳನ್ನೂ ಯತೀಂದ್ರ ಅವರು ಮಾಡಲು ಪ್ರಾರಂಭಿಸಿದ್ದಾರೆ. ಕ್ಷೇತ್ರದ ಎಲ್ಲ ಜನರ ಪರಿಚಯ ಮಾಡಿಕೊಂಡು ಅವರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದಾರೆ.

ವಾರದಲ್ಲಿ ಮೂರು ದಿನ ಕ್ಷೇತ್ರಗಳಲ್ಲಿ ಸಂಚರಿಸಲು ತೀರ್ಮಾನಿಸಿದ್ದಾರೆ. ಮುಂದಿನ ಚುನಾವಣೆಗೆ ನಾನು ಅಭ್ಯರ್ಥಿಯಾಗುವುದು, ಬಿಡುವುದನ್ನು ಪಕ್ಷ ನಿರ್ಧರಿಸುತ್ತದೆ. ಒಟ್ಟಾರೆ ತಂದೆಯ ನಿರ್ಧಾರದಂತೆ ಜನರ ಜತೆ ಇರಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ನಿರ್ಧರಿಸಿದ್ದೇನೆ. ನನ್ನ ವೃತ್ತಿಯ ಜತೆಗೆ ಜನಸೇವೆಯನ್ನೂ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ವಾರದಲ್ಲಿ ಎರಡು-ಮೂರು ದಿನ ಮೈಸೂರಿನಲ್ಲಿದ್ದು, ಅಪ್ಪಾಜಿಯವರ ಹೊಣೆಗಾರಿಕೆಯನ್ನು ನಿಭಾಯಿಸುವುದಾಗಿ ತಿಳಿಸಿದ್ದಾರೆ. ಡಾ.ಯತೀಂದ್ರ ಅವರು ರಾಜಕೀಯಕ್ಕೆ ಬರುವ ಮುನ್ಸೂಚನೆ ಸಿಗುತ್ತಿದ್ದಂತೆ ಸಿದ್ದು ಅವರ ಅಭಿಮಾನಿಗಳು, ಅವರ ಕುಟುಂಬದ ಆಪ್ತರು, ಬೆಂಬಲಿಗರು, ಕ್ಷೇತ್ರದ ಮುಖಂಡರು, ಪಕ್ಷದ ಪ್ರಮುಖರು ನಿನ್ನೆಯಿಂದಲೇ ಅವರ ಮನೆಗೆ ಧಾವಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಕ್ಷೇತ್ರಕ್ಕೆ ಒಬ್ಬ ನಾಯಕ ಸಿಕ್ಕಿದ್ದಾನೆ. ಅವರಿಗೆ ತಾವೆಲ್ಲ ಬೆಂಬಲ ನೀಡುತ್ತೇವೆ ಎಂದು ಅಭಿಮಾನಿಗಳು ಘೋಷಿಸಿದ್ದಾರೆ. ರಾಕೇಶ್ ಅವರು ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ನಮ್ಮ ಕ್ಷೇತ್ರದ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದರು. ಅವರು ಅಕಾಲಿಕವಾಗಿ ಸಾವನ್ನಪ್ಪಿದರು. ಈಗ ಅವರ ಸ್ಥಾನದಲ್ಲಿ ನಿಂತು ಯತೀಂದ್ರ ಅವರು ಕೆಲಸ ನಿರ್ವಹಿಸಿಕೊಡುತ್ತಾರೆ ಎಂಬ ಭರವಸೆ ನಮಗಿದೆ ಎಂದು ಹಲವರು ತಿಳಿಸಿದ್ದಾರೆ. ಒಟ್ಟಾರೆ ಯಾವುದೇ ವಿವಾದಕ್ಕೊಳಗಾಗದೆ ಬಹಿರಂಗವಾಗಿ ಎಲ್ಲೂ ಗುರುತಿಸಿಕೊಳ್ಳದೆ ಇದ್ದ ಡಾ.ಯತೀಂದ್ರ ಅವರು ಅನಿವಾರ್ಯವಾಗಿ ಈಗ ರಾಜಕೀಯಕ್ಕೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಅವರು ನಿನ್ನೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಾನೇನು ರಾಜಕೀಯ ಕ್ಷೇತ್ರಕ್ಕೆ ಬಂದಿಲ್ಲ. ಅಪ್ಪನ ಆದೇಶದಂತೆ ಜನರ ಕೆಲಸ ಮಾಡುತ್ತೇನೆ. ಮುಂದೆ ಅಪ್ಪ ಹೇಗೆ ಹೇಳುತ್ತಾರೋ ಹಾಗೇ ಮಾಡುತ್ತೇನೆ. ಸದ್ಯ ನನಗೆ ಯಾವುದೇ ಪ್ರಚಾರ ಬೇಡ ಎಂದು ಅವರು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin