ರಾಜಕೀಯ ದ್ವೇಷ ಶಂಕೆ : ಕಿತ್ತಗಾನಹಳ್ಳಿ ವಾಸು ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Vasu-Murder

ಬೆಂಗಳೂರು, ಮಾ.14- ಪುರಸಭಾ ಸದಸ್ಯ ಕಿತ್ತಗಾನಹಳ್ಳಿ ವಾಸು ಕೊಲೆ ಹಿಂದೆ ರಾಜಕೀಯ ದ್ವೇಷವಿದ್ದು, ಘಟನೆಯನ್ನು ಸಿಐಡಿ ತನಿಖೆಗೆ ವಹಿಸಬೇಕೆಂದು ಮಾಜಿ ಸಚಿವ ಎ.ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.  ಬೆಂಗಳೂರಿನ ಹೊರವಲಯದ ಹೊಸೂರು ಮುಖ್ಯರಸ್ತೆಯ ಬಿಟಿಎಲ್ ಕಾಲೇಜು ಬಳಿ ಪುರಸಭೆ ಸದಸ್ಯರಾದ ವಾಸು ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿರೋಧಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬೆಂಬಲಿಗರೊಂದಿಗೆ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೊಲೆ ಹಿಂದೆ ರಾಜಕೀಯ ದ್ವೇಷವಿರುವುದು ಸ್ಪಷ್ಟವಾಗಿದೆ. ಸರ್ಕಾರ ಕೂಡಲೇ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು. ಆರೋಪಿಗಳನ್ನು ಬಂಧಿಸಿ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಹೇಳಿದರು.

ಡಾ.ಜಿ.ಪರಮೇಶ್ವರ್ ಅವರು ಗೃಹ ಸಚಿವರಾದ ಮೇಲೆಯೇ ಕೊಲೆ, ದರೋಡೆಯಂತಹ ಘಟನೆಗಳು ಹೆಚ್ಚುತ್ತಿದ್ದು, ಕಾನೂನುಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.  ಸಂವಿಧಾನಬದ್ಧ ಆಡಳಿತದ ಬದಲಾಗಿ ಕಾಂಗ್ರೆಸ್‍ನ ಕೈಗೊಂಬೆ ಆಡಳಿತ ನಡೆಯುತ್ತಿದೆ ಎಂದು ದೂರಿದರು.
ಹಲವೆಡೆ ಬಿಜೆಪಿ ಮುಖಂಡರ, ಕಾರ್ಯಕರ್ತರ ಹತ್ಯೆಯಾಗುತ್ತಿದೆ. ವಾಸು ಎಲ್ಲರೊಂದಿಗೂ ವಿಶ್ವಾಸದಿಂದಿದ್ದರು. ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಸರ್ಕಾರ ಕೂಡಲೇ ಅವರನ್ನು ಬಂಧಿಸಬೇಕು. ಘಟನೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಕಾರ್ಯಕರ್ತರು ಬೆಂಬಲಿಗರು, ಸಾರ್ವಜನಿಕರು ಹತ್ಯೆ ಘಟನೆ ವಿರೋಧಿಸಿ ಹೊಸೂರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಹಲವು ಸಮಯ ಟ್ರಾಫಿಕ್ ಜಾಮ್ ಉಂಟಾಯಿತು. ಉದ್ವಿಗ್ನಗೊಂಡ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು.

ವಾಸು ಕೊಲೆ ಆರೋಪಿಗಳ ಬಂಧನಕ್ಕೆ ಅಶೋಕ್ ಆಗ್ರಹ : 

ಬೆಂಗಳೂರು, ಮಾ.14-ಪುರಸಭಾ ಸದಸ್ಯ ಕಿತ್ತಗಾನಹಳ್ಳಿ ವಾಸು ಕೊಲೆ ಆರೋಪಿಗಳನ್ನು 24 ಗಂಟೆಯೊಳಗಾಗಿ ಬಂಧಿಸಿ ಕ್ರಮಕೈಗೊಳ್ಳದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಮಾಜಿ ಗೃಹ ಸಚಿವ ಆರ್.ಅಶೋಕ್ ಎಚ್ಚರಿಸಿದ್ದಾರೆ. ಇಂದು ಬೆಳಗ್ಗೆ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಮುಖಂಡ, ಪುರಸಭಾ ಸದಸ್ಯ ವಾಸು ಅವರ ಮೃತದೇಹವಿದ್ದ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೊಲೆ ರಾಜಕೀಯ ಹಿನ್ನೆಲೆಯಲ್ಲಿ ನಡೆದಿರುವಂತೆ ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರ ಕೂಡಲೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ತಕ್ಷಣ ತಪ್ಪಿತಸ್ಥರನ್ನು ಬಂಧಿಸದಿದ್ದರೆ ತಕ್ಷಣವೇ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin