ರಾಜಕೀಯ ಪಕ್ಷಗಳು ಉತ್ತರಕ್ಕೆ ಮುಖ ಮಾಡಲು ಕಾರಣವಾದ ಲಿಂಗಾಯತ ವಿವಾದ

ಈ ಸುದ್ದಿಯನ್ನು ಶೇರ್ ಮಾಡಿ

Lingayat-Politics--01

ಬೆಂಗಳೂರು,ಸೆ.18- ಈ ಬಾರಿಯ 2018ರ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಎಲ್ಲಾ ರಾಜಕೀಯ ಪಕ್ಷಗಳಿಗೂ ನಿರ್ಣಾಯಕವಾಗಲಿದೆ. ಈವರೆಗೂ ಉತ್ತರ ಕರ್ನಾಟಕವೆಂದರೆ ಮೂಗು ಮುರಿಯುತ್ತಿದ್ದವರು ಕೆಲವು ಅನಿವಾರ್ಯ ಕಾರಣಗಳಿಂದ ಉತ್ತರದತ್ತ ವಲಸೆ ಹೋಗಬೇಕಾದ ಸಂದಿಗ್ಧ ಸ್ಥಿತಿಗೆ ತಂದಿಟ್ಟಿರುವುದು ಪ್ರತ್ಯೇಕ ಲಿಂಗಾಯಿತ ಧರ್ಮ ವಿವಾದ. ರಾಜ್ಯದಲ್ಲಿ ಯಾವುದೇ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಬೇಕೆಂದರೆ ಉತ್ತರ ಕರ್ನಾಟಕ ಗೆದ್ದರೆ ಮಾತ್ರ ಅದು ಸಾಧ್ಯ ಎಂಬ ನಂಬಿಕೆ ಎಲ್ಲ ರಾಷ್ಟ್ರೀಯ ಪಕ್ಷಗಳಲ್ಲಿದೆ.

ಅಭಿವೃದ್ಧಿ ವಿಷಯದಲ್ಲಿ ದಕ್ಷಿಣ ಕರ್ನಾಟಕ, ಕರಾವಳಿ ಮಧ್ಯ ಕರ್ನಾಟಕಕ್ಕೆ ಹೋಲಿಸಿದರೆ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಹಿನ್ನಡೆ ಅನುಭವಿಸಿರುವ ಈ ಭಾಗ ಸರ್ಕಾರ ರಚನೆಯಲ್ಲಿ ಮಾತ್ರ ಯಾವಾಗಲು ನಿರ್ಣಾಯಕ ಪಾತ್ರವನ್ನೇ ವಹಿಸುತ್ತಾ ಬಂದಿದೆ.  ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳ ಸೇರಿದಂತೆ ಯಾವುದೇ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕೆಂದರೆ ಗಂಡು ಮೆಟ್ಟಿದ ನಾಡು ಎಂದೇ ಖ್ಯಾತಿಯಾಗಿರುವ ಉತ್ತರ ಕರ್ನಾಟಕವನ್ನು ಗೆಲ್ಲಲೇಬೇಕು. ಹೀಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕಕ್ಕಿಂತಲೂ ಹೈವೋಲ್ಟೇಜ್ ಕ್ಷೇತ್ರವಾಗಲಿದೆ.

ಮುಂಬೈ-ಹೈದರಾಬಾದ್ ಕರ್ನಾಟಕದ ಕಲಬುರಗಿ, ಯಾದಗಿರಿ, ವಿಜಯಾಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳನ್ನು ಒಳಗೊಂಡಿರುವ ಈ ಭಾಗವು ಸುಮಾರು 80ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಸುಮಾರು 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವೀರಶೈವ ಮತಗಳೇ ನಿರ್ಣಾಯಕವಾಗಲಿದೆ.

ಗುಳೇ ಹೊರಟ ನಾಯಕರು:

ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯಿತ ಧರ್ಮ ವಿವಾದ ತಾರಕಕ್ಕೇರುತ್ತಿದ್ದಂತೆ ಬಿಜೆಪಿ ನಂಬಿಕೊಂಡಿದ್ದ ಲಿಂಗಾಯಿತ ಮತಗಳು ಕೈ ಕೊಡಬಹುದು ಎಂಬ ಭೀತಿ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಆದ್ದರಿಂದಲೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಸಲಹೆ ಮಾಡಿದ್ದಾರೆ.  ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ ಹಾಗೂ ಹಾವೇರಿ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಿಂದ ಬಿಎಸ್‍ವೈ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ಭಾಗದಿಂದ ಸ್ಪರ್ಧಿಸಿದರೆ ಪಕ್ಷಕ್ಕೆ ಹಿನ್ನಡೆಯಾಗಿರುವುದನ್ನು ಸಮತೋಲನ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದು.

ಸಿಎಂ ಚಿತ್ತವೂ ಉತ್ತರದತ್ತ:

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಉತ್ತರ ಕರ್ನಾಟಕದಿಂದಲೇ ಸ್ಪರ್ಧಿಸಬೇಕೆಂಬ ಒತ್ತಡ ಪಕ್ಷದಿಂದಲೇ ಹೆಚ್ಚಿದೆ. ಯಡಿಯುರಪ್ಪ ನಂಬಿಕೊಂಡಿರುವ ವೀರಶೈವ ಮತಗಳಿಗೆ ಸೆಡ್ಡು ಹೊಡೆಯಲು ಅಹಿಂದ ಮತಗಳ ಕ್ರೋಢೀಕರಣ ಸಿದ್ದರಾಮಯ್ಯನವರಿಂದ ಮಾತ್ರ ಸಾಧ್ಯ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ.  ಹೀಗಾಗಿ ಸಿದ್ದರಾಮಯ್ಯ ಬಾಗಲಕೋಟೆ, ಬೆಳಗಾವಿ ಇಲ್ಲವೇ ವಿಜಯಪುರದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಮಾತುಗಳು ಕೇಳಿಬರುತ್ತಿವೆ.

ಇದೇ ಹಾದಿಯಲ್ಲಿ ಕುಮಾರಸ್ವಾಮಿ:

ಇನ್ನು ಎರಡು ರಾಷ್ಟ್ರೀಯ ಪಕ್ಷಗಳಿಗೆ ಮುಂಚಿತವಾಗಿ ಸೆಡ್ಡು ಹೊಡೆದಿದ್ದ ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಪಕ್ಷ ಸಂಘಟನೆಗಾಗಿ ಶಾಶ್ವತ ಮನೆ ಮಾಡಿದ್ದರು.  ಉತ್ತರ ಭಾಗದಲ್ಲಿ ಜೆಡಿಎಸ್‍ಗೆ ಹೇಳಿಕೊಳ್ಳುವಂತಹ ನೆಲೆಯಿಲ್ಲ. ಆದರೆ ಇಲ್ಲಿ ಕುಮಾರಸ್ವಾಮಿಯವರ ಜನಪ್ರಿಯತೆ ಮಾತ್ರ ಯಾರಿಗಿಂತಲೂ ಕಡಿಮೆ ಇಲ್ಲ. ಈ ಜನಪ್ರಿಯತೆಯನ್ನೇ ಮತಗಳಾಗಿ ಪರಿವರ್ತಿಸಲು ತೆನೆಹೊತ್ತ ಮಹಿಳೆ ಸಾಕಷ್ಟು ಸರ್ಕಸ್ ನಡೆಸುತ್ತಿದ್ದಾಳೆ.  ವಿಜಾಪುರ ಜಿಲ್ಲೆಯ ಬಸವನಬಾಗೇವಾಡಿ, ಹುಬ್ಬಳ್ಳಿ ಗ್ರಾಮೀಣ, ಬೆಳಗಾವಿ ಜಿಲ್ಲೆ ಸೇರಿದಂತೆ ಅನೇಕ ಕಡೆ ಸ್ಪರ್ಧಿಸುವಂತೆ ಕುಮಾರಸ್ವಾಮಿಗೆ ಕಾರ್ಯಕರ್ತರು ದುಂಬಾಲು ಬಿದ್ದಿದ್ದಾರೆ.

ಚುನಾವಣೆ ನಡೆಯಲು ಇನ್ನು ಐದಾರು ತಿಂಗಳು ಬಾಕಿ ಇದೆ. ಈಗಾಗಲೇ ತಮ್ಮ ತಮ್ಮ ಕ್ಷೇತ್ರಗಳನ್ನು ಭದ್ರಪಡಿಸಿಕೊಳ್ಳುವತ್ತ ಕೆಲವರು ಮಗ್ನರಾಗಿದ್ದಾರೆ. ಇದರ ನಡುವೆ ಈ ಬಾರಿ ಉತ್ತರ ಕರ್ನಾಟಕ ಮಾತ್ರ ಪ್ರತ್ಯೇಕ ವೀರಶೈವ ಧರ್ಮ ವಿವಾದದಿಂದ ಪ್ರಮುಖ ಮೂರು ರಾಜಕೀಯ ಪಕ್ಷಗಳಿಗೂ ನಿರ್ಣಾಯಕವಾಗಲಿದೆ.

Facebook Comments

Sri Raghav

Admin