ರಾಜಧಾನಿ ದೆಹಲಿಯಲ್ಲಿ ದೇಶದ ಸೇನಾ ಸಾಮರ್ಥ್ಯದ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

DUbxcxNVMAEH-9y
ನವದೆಹಲಿ, ಜ.26-ಭಾರತದ ಗಡಿ ಭಾಗದಲ್ಲಿ ಪಾಕಿಸ್ತಾನ ಮತ್ತು ಚೀನಾ ತಂದೊಡ್ಡಿರುವ ಆತಂಕದ ವಾತಾವರಣಕ್ಕೆ ತಿರುಗೇಟು ನೀಡುವ ನಿಟ್ಟಿನಲ್ಲಿ 69ನೇ ಗಣರಾಜ್ಯೋತ್ಸವ ದಿನವಾದ ಇಂದು ರಾಜಧಾನಿ ನವದೆಹಲಿಯಲ್ಲಿ ನಡೆದ ಅತ್ಯಾಕರ್ಷಕ ಪಥಸಂಚಲನದಲ್ಲಿ ದೇಶದ ಅದ್ಭುತ ಸೇನಾ ಸಾಮಥ್ರ್ಯದ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಭಾರತದ ಅಗಾಧ ಶಕ್ತಿ ಸಾಮಥ್ರ್ಯದ ವಾಯುಪಡೆ, ನೌಕಾದಳ ಮತ್ತು ಭೂಸೇನೆಯ ಸಮರ ಶಸ್ತ್ರಾಸ್ತ್ರಗಳು ವಿವಿಧ ವಿಭಾಗಗಳ ತುಕಡಿಗಳು ಪರೇಡ್‍ನಲ್ಲಿ ಭಾಗವಹಿಸಿ ದೇಶದ ಸೇನಾ ಬಲವನ್ನು ಅನಾವರಣಗೊಳಿಸಿದವು.

ಎಂಐ-17 ಮತ್ತು ರುದ್ರ, ಯುದ್ಧ ಹೆಲಿಕಾಪ್ಟರ್‍ಗಳು, ಟಿ-90 ಟ್ಯಾಂಕ್‍ಗಳು, ಬ್ರಹ್ಮೋಸ್ ಮತ್ತು ಆಕಾಶ್ ಕ್ಷಿಪಣಿಗಳು ಸೇರಿದಂತೆ ರಾಷ್ಟ್ರದ ಬತ್ತಳಿಕೆಯಲ್ಲಿರುವ ಅತ್ಯಂತ ಪ್ರಬಲ ಶಸ್ತ್ರಾಸ್ತ್ರಗಳು ಪಥಸಂಚಲನದಲ್ಲಿ ಪ್ರದರ್ಶನಗೊಂಡವು. ಅಲ್ಲದೆ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 23 ಸ್ತಬ್ಧ ಚಿತ್ರಗಳು ಪರೇಡ್‍ನಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು. ಆಕಾಶವಾಣಿ (ಆಲ್ ಇಂಡಿಯಾ ರೇಡಿಯೋ) ಪಥಸಂಚಲನದ ಮುಂಚೂಣಿಯಲ್ಲಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಪ್ರಸಿದ್ಧ ಮಾಸಿಕ ಬಾನುಲಿ ಕಾರ್ಯಕ್ರಮವಾದ ಮನ್ ಕೀ ಬಾತ್ ಅನ್ನು ಬಿಂಬಿಸುವ ಸ್ತಬ್ಧ ಚಿತ್ರ ಸಹ ಗಮನ ಸೆಳೆಯಿತು.
ಕರ್ನಾಟಕದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕರ್ನಾಟಕದ ವನ್ಯಜೀವಿಗಳು (ವೈಲ್ಡ್ ಲೈಫ್ ಆಫ್ ಕರ್ನಾಟಕ) ಸ್ತಬ್ಧ ಚಿತ್ರ ವಿಶೇಷ ಆಕರ್ಷಣೆಗೆ ಪಾತ್ರವಾಯಿತು.

ಯುವಸಬಲೀಕರಣ, ಕೃಷಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ವಿಭಾಗಗಳ ಸ್ತಬ್ಧ ಚಿತ್ರಗಳು ಮತ್ತು ಕ್ಲೀನ್‍ಮನಿ ಸಂದೇಶ ಸಾರುವ ಪ್ರತಿರೂಪದ ಮೆರವಣಿಗೆಯೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಶೌರ್ಯ ಪ್ರಶಸ್ತಿ ಪಡೆದ ಮಕ್ಕಳೂ ಸಹ ಮೆರವಣಿಗೆಯಲ್ಲಿ ಪಾಲ್ಗೊಂಡರು. ಪಥಸಂಚಲನ ಆರಂಭವಾಗುವ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.

ನಂತರ ಅವರು 10 ಸದಸ್ಯ ಆಸಿಯಾನ್ ರಾಷ್ಟ್ರಗಳಾದ ಮ್ಯಾನ್ಮರ್, ವಿಯೆಟ್ನಾಂ, ಫಿಲಿಫೈನ್ಸ್, ಥೈಲ್ಯಾಂಡ್, ಸಿಂಗಪೂರ್, ಬ್ರುನೈ, ಇಂಡೋನೇಷ್ಯಾ, ಮಲೇಷ್ಯಾ, ಲಾವೋಸ್ ಮತ್ತು ಕಾಂಬೋಡಿಯಾ ದೇಶಗಳ ಮುಖ್ಯಸ್ಥರೊಂದಿಗೆ ರಾಜ್‍ಪಥ್ ಮಾರ್ಗದ ಗಣರಾಜ್ಯೋತ್ಸವ ಕಾರ್ಯಕ್ರಮದ ಪ್ರಧಾನ ವೇದಿಕೆಗೆ ಆಗಮಿಸಿದರು. ಆ ದೇಶಗಳ ಅಧಿಪತಿಗಳೊಂದಿಗೆ ಮೋದಿ ಪರೇಡ್ ಅನ್ನು ವೀಕ್ಷಿಸಿದರು.   ಬಳಿಕ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದಾಗ ಪ್ರಧಾನಮಂತ್ರಿ ಮತ್ತು ಭಾರತೀಯ ರಕ್ಷಣಾ ಪಡೆಯ ಮೂರು ವಿಭಾಗಗಳ ಮುಖ್ಯಸ್ಥರು ಸ್ವಾಗತಿಸಿದರು.  ರಾಷ್ಟ್ರಪತಿಯಾದ ನಂತರ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ರಾಮ್‍ನಾಥ್‍ಕೋವಿಂದ್ ಅವರು ವೀರಾಗ್ರಣಿಗಳಿಗೆ ಅಶೋಕ ಚಕ್ರ, ಶೌರ್ಯ ಚಕ್ರ ಸೇರಿದಂತೆ ವಿವಿಧ ಪುರಸ್ಕಾರಗಳನ್ನು ಪ್ರದಾನ ಮಾಡಿದರು. ನಂತರ ಪಥಸಂಚಲನವನ್ನು ವೀಕ್ಷಿಸಿ ಸೇನಾಪಡೆಗಳ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸಚಿವರಾದ ರಾಜ್‍ನಾಥ್‍ಸಿಂಗ್, ಅರುಣ್ ಜೇಟ್ಲಿ, ಜೆ.ಡಿ.ನಡ್ಡಾ, ಸ್ಮೃತಿ ಇರಾನಿ, ರವಿಶಂಕರ್‍ಪ್ರಸಾದ್, ಹರ್ಷವರ್ಧನ, ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಸಹಸ್ರಾರು ಮಂದಿ 69ನೇ ಗಣರಾಜ್ಯೋತ್ಸವದ ಅತ್ಯಾಕರ್ಷಕ ಪರೇಡ್ ಅನ್ನು ವೀಕ್ಷಿಸಿದರು. ಗಣರಾಜ್ಯೋತ್ಸವ ಮತ್ತು ಆಸಿಯಾನ್ ರಾಷ್ಟ್ರಗಳ 10 ಮುಖ್ಯಸ್ಥರು ಸಮಾರಂಭದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin