ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿವೆ ಡೆಂಗ್ಯೂ ಪ್ರಕರಣಗಳು

ಈ ಸುದ್ದಿಯನ್ನು ಶೇರ್ ಮಾಡಿ

Delgue-01

ಬೆಂಗಳೂರು, ಅ.18– ನಗರದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದೆ. ಪ್ರತಿ ದಿನ ಕನಿಷ್ಠ ಮೂರು ಪ್ರಕರಣಗಳಲ್ಲಿ ಡೆಂಗ್ಯೂ ಜ್ವರ ಇರುವುದು ಪತ್ತೆಯಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಕಳೆದ 30 ದಿನಗಳಲ್ಲಿ ಡೆಂಗ್ಯೂ ಇರುವ ಹೊಸ 82 ಪ್ರಕರಣಗಳು ದಾಖಲಾಗಿವೆ. ಮೇ 23 ರ ವೇಳೆಗೆ ಕೇವಲ 44 ಡೆಂಘೀ ಜ್ವರ ಪ್ರಕರಣಗಳು ದಾಖಲಾಗಿದ್ದರೆ, ಜೂನ್ 22 ರ ವೇಳೆಗೆ ಈ ಸಂಖ್ಯೆ 126ಕ್ಕೆ ಏರಿಕೆ ಆಗಿದೆ. ಪ್ರತಿ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆಯೇ ಬಿಬಿಎಂಪಿಯ ಆರೋಗ್ಯ ಇಲಾಖೆ ಸಿಬ್ಬಂದಿ ರೋಗಿಗಳ ಮನೆಗಳಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

24 ವರ್ಷದ ಯುವತಿ ನಾಲ್ಕು ದಿನಗಳಿಂದ ಅತಿಯಾದ ಜ್ವರ, ಮೈಕೈ ನೋವು ಮತ್ತು ವಾಂತಿಯಿಂದ ಬಳಲಿ ವೈದ್ಯರ ಬಳಿಗೆ ಚಿಕಿತ್ಸೆಗೆಂದು ಬರುತ್ತಾಳೆ. ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಡಬ್ಲ್ಯೂಬಿಸಿ ಮತ್ತು ಪ್ಲೇಟ್ಲೇಟ್ ಪ್ರಮಾಣದಲ್ಲಿ ಗಣನೀಯ ಕುಸಿತ ಉಂಟಾಗಿರುವುದು ಪತ್ತೆಯಾಗುತ್ತದೆ. ಮತ್ತಷ್ಟು ತಪಾಸಣೆ ನಡೆಸಿದಾಗ ಆಕೆಯಲ್ಲಿ ಎನ್‍ಎಸ್1 ಡೆಂಗ್ಯೂ ಸೋಂಕು ತಗುಲಿರುವುದು ಗೊತ್ತಾಗುತ್ತದೆ.  ಅದೇ ರೀತಿ 3 ದಿನಗಳಿಂದ ಜ್ವರ ಮತ್ತು ವಾಂತಿಯಿಂದ ಬಳಲುತ್ತಿದ್ದ 18 ವರ್ಷದ ಯುವಕನ ತಪಾಸಣೆ ನಡೆಸಿದಾಗ ಆತನಲ್ಲಿಯೂ ಪ್ಲೇಟ್ಲೇಟ್ ಸಂಖ್ಯೆ ಕಡಿಮೆಯಾಗಿರುವುದು ಕಂಡುಬರುತ್ತದೆ. ಇದೊಂದು ವೈರಲ್ ಫೀವರ್ ಆಗಿದ್ದು, ಡೆಂಗ್ಯೂ ನೆಗೆಟಿವ್ ಎಂದು ಗೊತ್ತಾಯಿತು ಎಂದು ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಫಿಸಿಶಿಯನ್ ಡಾ.ಅಶೋಕ್ ಹೇಳುತ್ತಾರೆ.

ಮೂರು ತಿಂಗಳ ಬಿರು ಬೇಸಿಗೆ ನಂತರ ಸುಮಾರು ಎರಡು ವಾರಗಳಿಂದ 28 ವರ್ಷದ ಆರ್.ಶ್ರೀಕಾಂತ್ ಎಂಬ ಯುವಕ ಜ್ವರದಿಂದ ಬಳಲಿದ. ನಂತರ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡರು. ಡೆಂಗ್ಯೂ ಪತ್ತೆಗಾಗಿ ಮಾಡುವ ಎನ್‍ಎಸ್1 ಪರೀಕ್ಷೆ ನಡೆಸಿದ್ದು, ರಕ್ತದೊತ್ತಡದಲ್ಲಿ ಇಳಿಮುಖವಾಗಿರುವುದು ಮತ್ತು ಪ್ಲೇಟ್ಲೆಟ್ಸ್ ಪ್ರಮಾಣದಲ್ಲಿ ಭಾರೀ ಇಳಿಮುಖವಾಗಿರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಆತನಿಗೆ ಸತತ ಐದು ದಿನಗಳ ಕಾಲ ಪ್ಲೇಟ್ಲೇಟ್‍ಗಳನ್ನು ಹಾಕಲಾಯಿತು. ಆದರೆ, ನ್ಯುಮೋನಿಯಾ, ಶ್ವಾಸಕೋಶದ ತೊಂದರೆ ಮತ್ತು ಇತರೆ ಗಂಭೀರ ಸ್ವರೂಪದ ತೊಂದರೆ ಎದುರಿಸುವಂತಾಯಿತು. ಶ್ವಾಸನಾಳ ಮತ್ತು ಮೂತ್ರಕೋಶದಲ್ಲಿ ಊತ ಕಾಣಿಸಿಕೊಳ್ಳಲಾರಂಭಿಸಿತು. ಇದರ ಪರಿಣಾಮ ಶ್ರೀಕಾಂತ್‍ಗೆ ಮೂರು ದಿನಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ ನಂತರ 2 ವಾರಗಳ ಕಾಲ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಆದರೆ, ಇದು ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು. ಅತಿಯಾದ ಜ್ವರ ಬಂದು ಲಿಂಪ್ ಮತ್ತು ರಕ್ತ ನಾಳಗಳನ್ನು ಹಾನಿಗೊಳಿಸಬಹುದು, ಮೂಗಿನಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳಬಹುದು, ಲಿವರ್‍ನ ಗಾತ್ರವನ್ನು ಹಿಗ್ಗಿಸುತ್ತದೆ ಮತ್ತು ರಕ್ತನಾಳ ವ್ಯವಸ್ಥೆಯಲ್ಲಿ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದರ ಪರಿಣಾಮ ಅತಿಯಾದ ರಕ್ತಸ್ರಾವ ಮತ್ತು ಸಾವಿನಂಚಿಗೂ ಕೊಂಡೊಯ್ಯುವ ಸಾಧ್ಯತೆಗಳಿವೆ. ಇದಕ್ಕೆ ಡಂಗ್ಯೂ ಶಾಕ್ ಸಿಂಡ್ರೋಮ್(ಡಿಎಸ್‍ಎಸ್) ಎಂದು ಕರೆಯಲಾಗುತ್ತದೆ. ಬೇವು ಮತ್ತು ತುಳಸಿ ಎಲೆಗಳನ್ನು ಸೇವಿಸುವುದರಿಂದ ಮಾನ್‍ಸೂನ್ ವೇಳೆ ಕಾಣಿಸಿಕೊಳ್ಳಲಿರುವ ಇನ್‍ಫೆಕ್ಷನ್‍ಗಳನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ. ತುಳಸಿ ಕೇವಲ ವೈರಲ್ ಇನ್‍ಫೆಕ್ಷನ್‍ಗೆ ಪರಿಹಾರ ಮಾತ್ರವಲ್ಲ, ಇದರ ಜತೆಗೆ ಶುಂಠಿಯನ್ನು ಸೇರಿಸಿ ಸೇವಿಸಿದಾಗ ಉಸಿರಾಟದಂತಹ ತೊಂದರೆಗಳೂ ಪರಿಹಾರವಾಗುತ್ತವೆ.

ಕರಾವಳಿ ಪ್ರದೇಶಗಳಲ್ಲಿ ಬೆಳೆಯುವ ಗೂಸ್‍ಬೆರ್ರಿ, ಮೆಣಸು ಮತ್ತು ಶುಂಠಿ ಅತ್ಯುತ್ತಮವಾದ ಕ್ಷಾರಕ ನಿವಾರಣಾ ಪದಾರ್ಥಗಳಾಗಿವೆ. ಈ ನೈಸರ್ಗಿಕ ಉತ್ಪನ್ನಗಳು ಶ್ವಾಸನಾಳಗಳ ಇನ್‍ಫೆಕ್ಷನ್, ವೈರಲ್ ರೋಗಾಣುಗಳನ್ನು ಹೊಡೆದೋಡಿಸುವ ಶಕ್ತಿ ಹೊಂದಿವೆ ಎನ್ನುತ್ತಾರೆ ತಜ್ಞರು. 1000 ಕ್ಕಿಂತಲೂ ಅಧಿಕ ಯೋಗ ಕೇಂದ್ರಗಳನ್ನು ಹೊಂದಿರುವ ಯೋಗ ತಜ್ಞರಾದ ಕಲಾ ನೆಹೆತೆ ಅವರು ಹೇಳುವಂತೆ, ಪ್ರತಿದಿನ ಯೋಗವನ್ನು ಮಾಡುತ್ತಾ ನಿಗದಿತ ಪ್ರಮಾಣದಲ್ಲಿ ನಿಂಬೆ ಎಲೆ, ತುಳಸಿ ಮತ್ತು ಶುಂಠಿಯನ್ನು ಸೇವಿಸಿದರೆ ಡೆಂಗ್ಯೂ ಸೇರಿದಂತೆ ಎಲ್ಲಾ ಬಗೆಯ ವೈರಲ್ ಫೀವರ್‍ನಂತಹ ರೋಗಗಳು ಬರುವುದಿಲ್ಲ.

ಡೇಂಘಿ-ಚಿಕುನ್‍ಗುನ್ಯಾ ಹರಡದಂತೆ ಮುನ್ನೆಚ್ಚರಿಕೆ ಕ್ರಮ, ನಾಗರಿಕರು ಆತಂಕಪಡದಿರಿ

ಬೆಂಗಳೂರು, ಅ.18-ಡೇಂಘಿ, ಚಿಕುನ್‍ಗುನ್ಯಾ, ಎಚ್1ಎನ್1 ರೋಗಗಳು ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾಗರಿಕರು ಗಾಬರಿ ಪಡಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರಮೇಶ್‍ಬಾಬು ಹೇಳಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವರ್ಷದ ಜನವರಿಯಿಂದ ಅಕ್ಟೋಬರ್‍ವರೆಗೆ 5515ಶಂಕಿತ ಡೇಂಘಿ ಪ್ರಕರಣಗಳನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ 156 ಪ್ರಕರಣಗಳು ಮೇಲ್ನೋಟಕ್ಕೆ ಖಚಿತವಾಗಿದ್ದವು. ಎರಡು ಡೇಂಘಿ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿರುವುದು ಮಾತ್ರ ದೃಢಪಟ್ಟಿದೆ ಎಂದು ತಿಳಿಸಿದರು.

ಡೇಂಘಿ ಈಡೀಸ್ ಲಾರ್ವಾ ಸೊಳ್ಳೆಯಿಂದ ಹರಡುತ್ತದೆ. ಇದಕ್ಕೆ ಸ್ವಚ್ಛತೆಯೇ ಮೂಲ ಮಂತ್ರ. ಚರಂಡಿ ಕಟ್ಟಿಕೊಂಡಿದ್ದರೆ, ನೀರು ನಿಂತರ ಸೊಳ್ಳೆ ಉತ್ಪತ್ತಿಯಾಗಿ ಆ ಮೂಲಕ ಡೇಂಘಿ ಹರಡುತ್ತದೆ ಎಂದು ಜನರು ತಿಳಿದುಕೊಂಡಿದ್ದಾರೆ. ಆದರೆ ಸ್ವಚ್ಛ ನೀರಿನಲ್ಲೇ ಡೇಂಘಿ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗುತ್ತವೆ ಎಂದು ತಿಳಿಸಿದರು. ಸ್ವಚ್ಛ ನೀರನ್ನು ಕಾಯಿಸಿ, ಶೋಧಿಸಿ, ಮುಚ್ಚಿಟ್ಟು ಉಪಯೋಗಿಸಬೇಕು ಎಂದು ಸಲಹೆ ನೀಡಿದರು.  ಜನವರಿಯಿಂದ ಸೆಪ್ಟೆಂಬರ್ ವರೆಗೆ 3112159 ಮನೆಗಳಿಗೆ ಭೇಟಿ ಕೊಟ್ಟೆವು. ಇದರಲ್ಲಿ 810318ಮನೆಗಳಲ್ಲಿ ನೀರಿನ ಸಂಗ್ರಹವನ್ನು ಪರಿಶೀಲಿಸಿ ಸೊಳ್ಳೆ ಉತ್ಪತ್ತಿಯಾಗಿದ್ದುದನ್ನು ಅದನ್ನು ನಾಶಪಡಿಸಿದ್ದೇವೆ ಎಂದು ಹೇಳಿದರು.

ಡೇಂಘಿ ಕುರಿತು ಜಾಗೃತ ಅಭಿಯಾನ ಮಾಡಿದ್ದೇವೆ. 220 ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. 52 ಕಾರ್ಯಕ್ರಮ ರೂಪಿಸಿದ್ದೆವು. 150 ಶಾಲೆಗಳಲ್ಲಿ ಭಾಷಣ, ರಸಪ್ರಶ್ನೆ ಸ್ಪರ್ಧೆ ಹಾಗೂ 72 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದೇವೆ. ಜಿ.ಪಂ., ಗ್ರಾ.ಪಂ., ತಾ.ಪಂ. ಎನ್‍ಜಿಒ ಹಾಗೂ ಕಾಪೆರ್Çೀರೇಟ್ ಮಟ್ಟದಲ್ಲಿ ಈ ಕುರಿತು ಅರಿವು ಮೂಡಿಸಿದ್ದೇವೆ ಎಂದು ಹೇಳಿದರು. ಇದುವರೆಗೆ 10 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು, ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಈ ತನಕ ಒಂದೂ ಮಿದುಳು ಜ್ವರ ಪ್ರಕರಣ ಪತ್ತೆಯಾಗಿಲ್ಲ ಎಂದು ಡಾ.ರಮೇಶ್‍ಬಾಬು ಸ್ಪಷ್ಟಪಡಿಸಿದರು.

ಕೆಲವು ಖಾಸಗಿ ಆಸ್ಪತ್ರೆಗಳು ಚಿಕುನ್‍ಗುನ್ಯಾ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳುತ್ತಾ ಜನರಲ್ಲಿ ಆತಂಕ ಮೂಡಿಸುತ್ತಿವೆ. ನಾವು ಇದುವರೆಗೆ ಯಾವುದನ್ನೂ ದೃಢಪಡಿಸಿಲ್ಲ. ಸರ್ಕಾರಿ ಆಸ್ಪತ್ರೆಗಳು ದೃಢಪಡಿಸಿದರೆ ಮಾತ್ರ ಚಿಕುನ್‍ಗುನ್ಯಾ ಹರಡುತ್ತಿದೆ ಎಂಬುದನ್ನು ಜನರು ನಂಬಬೇಕು. ಈ ಬಗ್ಗೆ ಯಾರೂ ಭಯಪಡಬೇಕಿಲ್ಲ. ಈ ಎಲ್ಲಾ ರೋಗಗಳ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin