ರಾಜಧಾನಿ ಬೆಂಗಳೂರಿನಲ್ಲಿ ವರ್ಷದ ಮೊದಲ ವರ್ಷಧಾರೆ ಅವಾಂತರ ..!

ಈ ಸುದ್ದಿಯನ್ನು ಶೇರ್ ಮಾಡಿ

rain
ಬೆಂಗಳೂರು, ಮಾ.7-ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಸುರಿದ ಮೊದಲ ವರ್ಷಧಾರೆ ಅವಾಂತರವನ್ನೇ ಸೃಷ್ಟಿಸಿದೆ.  ನಗರದ ವಿವಿಧೆಡೆ ಕೆಲಕಾಲ ಧಾರಾಕಾರ ಮಳೆ ಸುರಿದ ಪರಿಣಾಮ ಭಾರೀ ಮರಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತವಾಗಿ ವಾಹನಗಳು ಜಖಂಗೊಂಡಿವೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಚಾಮರಾಜಪೇಟೆ, ವಿಜಯನಗರ, ನಾಗರಬಾವಿ, ಈಜಿಪುರ, ಇಂದಿರಾನಗರ ಮುಂತಾದ ಕಡೆ ಭಾರೀ ಗಾತ್ರದ ಮರಗಳು ಧರೆಗುರುಳಿದ ಪರಿಣಾಮ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರು, ವಾಹನ ಸವಾರರು ಪರದಾಡಬೇಕಾಯಿತು.  ಕಳೆದ ಒಂದು ವಾರದಿಂದ ಬಿಸಿಲಿನ ಧಗೆಯಿಂದ ಬೇಯುತ್ತಿದ್ದ ಜನಕ್ಕೆ ಮಳೆರಾಯ ತಂಪನ್ನೀಯುವುದರ ಜತೆಗೆ ಆದ ಅವಾಂತರಗಳಿಗೆ ಆತಂಕ ಸೃಷ್ಟಿಮಾಡಿದ್ದ. ನಿನ್ನೆ ರಾತ್ರಿ ಏಕಾಏಕಿ ಗುಡುಗು ಸಹಿತ ಬಿರುಗಾಳಿ, ಮಳೆ ಬಿದ್ದ ಪರಿಣಾಮ ಚಾಮರಾಜಪೇಟೆ 3ನೆ ಮುಖ್ಯ ರಸ್ತೆ ಯಲ್ಲಿ ಭಾರೀ ಗಾತ್ರದ ಮರ ಬಿದ್ದಿದ್ದು, ಈ ಪ್ರದೇಶದಲ್ಲೆಲ್ಲ ವಿದ್ಯುತ್ ವ್ಯತ್ಯಯವಾಯಿತು.

ಇಂದು ಮಧ್ಯಾಹ್ನದವರೆಗೂ ಅಕಾರಿಗಳು ಆ ಮರವನ್ನು ತೆರವುಗೊಳಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅದಲ್ಲದೆ, ಇದೇ ಪ್ರದೇಶದಲ್ಲಿ ಹಲವೆಡೆ ಮರದ ಕೊಂಬೆಗಳು ಕಾರುಗಳ ಮೇಲೆ ಬಿದ್ದು ವಾಹನಗಳು ಜಖಂಗೊಂಡಿವೆ. ನಾಗರಬಾವಿ, ವಿಜಯನಗರ ಮುಂತಾದೆಡೆಯೂ ಕೂಡ ಬೈಕ್ ಮತ್ತು ಕಾರುಗಳ ಮೇಲೆ ಮರ ಬಿದ್ದು ವಾಹನಗಳು ಜಖಂ ಆಗಿರುವುದು ವರದಿಯಾಗಿದೆ.  ಬಿಬಿಎಂಪಿ ಕಂಟ್ರೋಲ್ ರೂಂಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿ ಸಹಾಯಕ್ಕೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಬರಲು ವಿಳಂಬವಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಕಾರಿಗಳ ವಿರುದ್ಧ ಗರಂ ಆಗಿರುವ ಘಟನೆಗಳು ನಡೆದಿವೆ.
ಬೆಳಗ್ಗೆಯೇ ಮೇಯರ್ ಪದ್ಮಾವತಿ, ಆಯುಕ್ತ ಮಂಜುನಾಥ ಪ್ರಸಾದ್ ಎಲ್ಲ ಅಕಾರಿಗಳಿಗೆ ಸೂಚನೆ ನೀಡಿ ಎಲ್ಲೆಲ್ಲಿ ಮಳೆಯ ಅನಾಹುತಗಳು ಸಂಭವಿಸಿವೆಯೋ ಕೂಡಲೇ ಅಲ್ಲಿಗೆ ದಾವಿಸಿ ಸಾರ್ವಜನಿಕರಿಗೆ ನೆರವಾಗಬೇಕೆಂದು ಸಲಹೆ ಮಾಡಿದ್ದಾರೆ.

ಇಂದು ಕೂಡ ಮಳೆ ಬೀಳುವ ಸಂಭವವಿರುವುದರಿಂದ ತಗ್ಗು ಪ್ರದೇಶಗಳಲ್ಲಿರುವ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ವಿಜಯನಗರ, ಗೋವಿಂದರಾಜನಗರ, ರಾಜರಾಜೇಶ್ವರಿನಗರ, ಯಶವಂತಪುರ ಸೇರಿದಂತೆ ಹಲವೆಡೆ ಮಳೆ ಬಿದ್ದ ಪರಿಣಾಮ 2 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಕಡಿತಗೊಳಿಸಲಾಗಿತ್ತು.  ನಗರದ ಬಹುತೇಕ ಕಡೆ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಜನ ತೊಂದರೆ ಅನುಭವಿಸಿದರು. ಮಳೆಯ ಖುಷಿ ಒಂದೆಡೆಯಾದರೆ, ಮರ ಬಿದ್ದು ವಾಹನಗಳು ಜಖಂಗೊಂಡಿದ್ದು, ಹಳೆಯ ಮರಗಳು ಮತ್ತೆಲ್ಲಿ ಬೀಳುತ್ತವೆಯೋ ಎಂಬ ಆತಂಕ ಉಂಟಾಗಿದೆ. ಹಲವೆಡೆ ರಸ್ತೆಯಲ್ಲೆಲ್ಲ ನೀರು ಹರಿದು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿತ್ತು. ಬಿದ್ದ ಮರಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸುವುದು, ಶಿಥಿಲಗೊಂಡಿರುವ ಹಳೆಯ ಮರಗಳ ಕೊಂಬೆಗಳನ್ನು ಕೂಡ ಕತ್ತರಿಸಿ ತೆಗೆಯಲು ಬಿಬಿಎಂಪಿ ಸೂಚಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin