ರಾಜಧಾನಿ ಬೆಂಗಳೂರು ಸಂಪೂರ್ಣ ಸ್ತಬ್ಧ

ಈ ಸುದ್ದಿಯನ್ನು ಶೇರ್ ಮಾಡಿ

BEngalu

ಬೆಂಗಳೂರು, ಸೆ.9- ರಾಜಧಾನಿ ಬೆಂಗಳೂರು ಸಂಪೂರ್ಣ ಸ್ತಬ್ಧವಾಗಿದೆ. ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಕಾರ್ಪೊರೇಟ್ ವಲಯಗಳವರೆಗೆ ಯಾವುದೇ ವಹಿವಾಟು ನಡೆಯಲಿಲ್ಲ. ಎಲ್ಲರೂ ಜೀವಜಲ ಕಾವೇರಿಗಾಗಿ ಸಂಪೂರ್ಣ ಬೆಂಬಲ ನೀಡಿ ಒಗ್ಗಟ್ಟು-ಏಕತೆ ಪ್ರದರ್ಶಿಸಿದರು.  ಕಾವೇರಿಗಾಗಿ ನೂರಾರು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ ಸುಪ್ರೀಂಕೋರ್ಟ್ ತೀರ್ಪು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದವು. ಮಾಲ್ಗಳು ತೆರೆಯಲಿಲ್ಲ, ಚಿತ್ರಮಂದಿರಗಳಲ್ಲಿ ಚಲನಚಿತ್ರಗಳು ಪ್ರದರ್ಶನವಾಗಲಿಲ್ಲ, ಐಟಿ-ಬಿಟಿಯವರು ಬಂದ್ಗೆ ಬೆಂಬಲ ಘೋಷಿಸಿ ಕರ್ತವ್ಯ ನಿರ್ವಹಿಸಲಿಲ್ಲ, ಪೆಟ್ರೋಲ್ ಬಂಕ್ಗಳು, ಹೊಟೇಲ್ಗಳು ತೆರೆದಿರಲಿಲ್ಲ. ಆಟೋ, ಟ್ಯಾಕ್ಸಿಗಳು ರಸ್ತೆಗಿಳಿಯದ ಪರಿಣಾಮ ಪ್ರಯಾಣಿಕರಿಗೆ ತೊಂದರೆಯಾಯಿತು.

ಕಾವೇರಿಗೂ ಬೆಂಗಳೂರು ಮಂದಿಗೂ ಅವಿನಾಭಾವ ಸಂಬಂಧವಿದೆ. ಕಾವೇರಿ ವಿಷಯದಲ್ಲಿ ಏನಾದರೂ ಆದರೆ ಜನ ಸಿಡಿದೇಳುತ್ತಾರೆ. ಸುಪ್ರೀಂಕೋರ್ಟ್ ತೀರ್ಪು ನೀಡಿ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸುತ್ತಿದ್ದಂತೆ ಇಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ಬೆಂಗಳೂರಿನ ನೂರಾರು ಕನ್ನಡಪರ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳು, ನಾಗರಿಕ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಸಾರ್ವಜನಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾವೇರಿಗಾಗಿ ಒಕ್ಕೊರಲ ಒಗ್ಗಟ್ಟು ಪ್ರದರ್ಶಿಸಿದವು.

ಒಂಟಿ ಕಾಲಿನಲ್ಲಿ ನಿಂತು ಕೆಲವರು ಪ್ರತಿಭಟನೆ ನಡೆಸಿದರೆ, ತಲೆಕೆಳಗಾಗಿ ನಿಂತು ಹಲವರು ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿ ದಹಿಸಿದ ಹಲವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭೂತದಹನ ಮಾಡಿ ಕೆಲವರು ತಮ್ಮ ಕೋಪ ಪ್ರದರ್ಶಿಸಿದರು. ಒಟ್ಟಾರೆ ರಾಜಧಾನಿ ಬೆಂಗಳೂರಿನಲ್ಲಿ ಕಾವೇರಿ ಕಿಚ್ಚು ಭುಗಿಲೆದ್ದಿತ್ತು. ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಮೆಜಸ್ಟಿಕ್ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದವು. ವಿಕಾಸಸೌಧ, ವಿಧಾನಸೌಧ, ಬಹುಮಹಡಿ ಕಟ್ಟಡ, ವಿಶ್ವೇಶ್ವರಯ್ಯ ಗೋಪುರ, ಸಿಟಿ ಸಿವಿಲ್ ಕೋರ್ಟ್ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಿಗೆ ನೌಕರರು ಗೈರು ಹಾಜರಾಗುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಿದರು.

ಮೈಸೂರು ಬ್ಯಾಂಕ್ ವೃತ್ತ ಇಂದು ಹಲವು ಸಂಘಟನೆಗಳ ಹೋರಾಟದ ಕೇಂದ್ರಬಿಂದುವಾಗಿತ್ತು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಸುಪ್ರೀಂಕೋರ್ಟ್ ನಿಲುವು ಖಂಡಿಸಿ ಟೌನ್ಹಾಲ್ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಬೃಹತ್ ಬೈಕ್ ರ್ಯಾ ಲಿ ನಡೆಸಿತು. ಸಮಾಜವಾದಿ ಪಾರ್ಟಿ ರಾಜ್ಯಾಧ್ಯಕ್ಷ ಮ್ಯಾಥ್ಯೂಸ್ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದ ಬಳಿ ಧರಣಿ ನಡೆಸಿ ಸುಪ್ರೀಂಕೋರ್ಟ್ ತೀರ್ಪನ್ನು ಖಂಡಿಸಿದರಲ್ಲದೆ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿದರು.  ಕರ್ನಾಟಕ ಪ್ರಜಾತಂತ್ರ ವೇದಿಕೆಯವರು ಬಂದ್ಗೆ ಬೆಂಬಲ ವ್ಯಕ್ತಪಡಿಸಿ ರ್ಯಾ ಲಿ ನಡೆಸಿದರು. ಕರ್ನಾಟಕ ಜನಸೇನೆ ವತಿಯಿಂದ ತುಮಕೂರು ಮಾರ್ಗದಲ್ಲಿರುವ ನವಯುಗ ಟೋಲ್ ಬಳಿ ಹೆದ್ದಾರಿ ರಸ್ತೆ ತಡೆ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ಹಲವರನ್ನು ಬಂಧಿಸಿದರು.

ಕೆಂಪೇಗೌಡ ಸಗಟು ತರಕಾರಿ ಮಂಡಿ ವರ್ತಕರ ಸಂಘ ಬಂದ್ಗೆ ಬೆಂಬಲ ಸೂಚಿಸಿ ತರಕಾರಿ, ಹಣ್ಣು ಮಾರುಕಟ್ಟೆ ವಹಿವಾಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು.  ಅಧ್ಯಕ್ಷ ಗೋವಿಂದು ಮಾತನಾಡಿ, ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ತರಕಾರಿ ಸಗಟು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.  ಆರ್ಎಂಸಿ ಯಾರ್ಡ್ನಿಂದ ಯಶವಂತಪುರ ಸರ್ಕಲ್ವರೆಗೆ ಬೃಹತ್ ಜಾಥಾ ನಡೆಸಿ ಕಾವೇರಿ ನಮ್ಮದು ಎಂಬ ಘೋಷಣೆಗಳನ್ನು ಕೂಗಿದರು.  ಕರುನಾಡ ಸೇನೆ ವತಿಯಿಂದ ಟೌನ್ಹಾಲ್ನಿಂದ ಮೈಸೂರು ಬ್ಯಾಂಕ್ವರೆಗೆ ಎಲ್ಲ ಕಾರ್ಯಕರ್ತರು ಕಾಲ್ನಡಿಗೆ ಜಾಥಾ ಮಾಡಿದರು.

ರಾಜ್ಯಾಧ್ಯಕ್ಷ ಅಗ್ನಿ ಶ್ರೀಧರ್ ನೇತೃತ್ವದಲ್ಲಿ ಸುನಿಲ್ಕುಮಾರ್, ಮಂಜುನಾಥ್ ಅದ್ದೆ, ರೋಹಿತ್, ಇಂದೂಧರ್ ಹೊನ್ನಾಪುರ್, ನಾಗರಾಜ್ ಮುಂತಾದವರು ಜಾಥಾ ನಡೆಸಿ ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಆದ ಅನ್ಯಾಯ ಖಂಡಿಸಿದರು. ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಾವೇರಿ ವಿಷಯದಲ್ಲಿ ಸುಪ್ರೀಂಕೋರ್ಟ್ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.  ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ನೀಡಿರುವ ತೀರ್ಪು ಖಂಡಿಸಿ ಗಜ ದಲಿತ ಸೇನೆ ಕಾರ್ಯಕರ್ತರು ಬನಶಂಕರಿ 2ನೆ ಹಂತದ ಕದರೇನಹಳ್ಳಿಯಿಂದ ರಾಜಭವನದವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.

ಕರ್ನಾಟಕ ರೈತ ಯುವಸೇನೆ ಜಯಲಲಿತಾ ಪ್ರತಿಕೃತಿ ದಹಿಸಿದರೆ ಕನ್ನಡ ಚಳವಳಿ ಕೇಂದ್ರ ಸಮಿತಿ ಖಾಲಿ ಕೊಡಗಳ ಪ್ರದರ್ಶನ ನಡೆಸಿತು.  ರಾಷ್ಟ್ರೀಯ ಚಾಲಕರ ಒಕ್ಕೂಟ, ಬೆಂಗಳೂರು ಟ್ಯಾಕ್ಸಿ ಡ್ರೈವರ್ ಯೂನಿಯನ್ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಮಾವೇಶಗೊಂಡು ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕಾಗುತ್ತಿರುವ ಅನ್ಯಾಯ ಖಂಡಿಸಿದರು. ಭಾರತ ಕಮ್ಯುನಿಸ್ಟ್ ಪಕ್ಷ ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ರಾಜಾಜಿನಗರದ ನವರಂಗ್ ಚಿತ್ರಮಂದಿರದ ಬಳಿ ಪ್ರತಿಭಟನೆ ನಡೆಸಿತು. ಕಾರ್ಯದರ್ಶಿ ಕೆ.ವೀರಮಣಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಾಜ್ಯದಲ್ಲಿ ಬರಗಾಲವಿದ್ದು, ಪ್ರಧಾನಮಂತ್ರಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು. ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಕ್ಷದವರು ಪ್ರತಿಭಟನೆ ನಡೆಸಿ ಅನ್ಯಾಯವನ್ನು ಖಂಡಿಸಿದರು. ಕರ್ನಾಟಕ ವಿಧಾನ ಪರಿಷತ್ನ ಸಚಿವಾಲಯದ ನೌಕರರ ಸಂಘದವರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಬಂದ್ನಲ್ಲಿ ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin