ರಾಜರಾಜೇಶ್ವರಿ ನಗರದ ರಂಗೋಲಿ ಹಳ್ಳದಲ್ಲಿರುವ ನಟ ದರ್ಶನ್ ಮನೆ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

Dareshan

ಬೆಂಗಳೂರು, ಆ.19- ರಾಜರಾಜೇಶ್ವರಿ ನಗರದ ಐಡಿಯಲ್ ಹೋಂ ಸಮೀಪದ ರಂಗೋಲಿಹಳ್ಳದಲ್ಲಿರುವ ನಟ ದರ್ಶನ್ ಅವರ ಮನೆ ಒತ್ತುವರಿಯನ್ನು ಇದೇ 22ರಂದು ತೆರವುಗೊಳಿಸಲು ಬಿಬಿಎಂಪಿ ತೀರ್ಮಾನಿಸಿದೆ. ದರ್ಶನ್ ಅವರ ನಿವಾಸ ಒತ್ತುವರಿಯಾಗಿದೆಯೇ, ಇಲ್ಲವೇ ಎಂಬುದರ ಬಗ್ಗೆ ನಾವು ಸರ್ವೆ ಮಾಡಿದೆವು. ಸರ್ವೆಯಲ್ಲಿ ಒತ್ತುವರಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಆರ್.ಆರ್.ನಗರ ವಲಯ ಜಂಟಿ ಆಯುಕ್ತ ವೀರಭದ್ರಯ್ಯ ತಿಳಿಸಿದ್ದಾರೆ. ಈ ಸಂಬಂಧ ಈಗಾಗಲೇ ದರ್ಶನ್ ಕುಟುಂಬದವರಿಗೆ ನೋಟಿಸ್ ನೀಡಿ ತೆರವು ಕಾರ್ಯಾಚರಣೆಗೆ ಸಹಕರಿಸುವಂತೆ ಮನವಿ ಮಾಡಿದ್ದೇವೆ. ಅವರು ಸಹಕರಿಸುತ್ತಾರೆಂಬ ವಿಶ್ವಾಸವಿದೆ.

ಒಟ್ಟಾರೆ ಸೋಮವಾರ ತೆರವು ಕಾರ್ಯ ಪ್ರಾರಂಭಿಸುವ ಮೂಲಕ ಯಾರೇ ಪ್ರತಿಷ್ಠಿತ ವ್ಯಕ್ತಿಗಳು ಒತ್ತುವರಿ ಮಾಡಿದ್ದರೂ ಅದನ್ನು ಬಿಡುವುದಿಲ್ಲ ಎಂಬುದನ್ನು ಸಾಬೀತುಪಡಿಸುತ್ತೇವೆ ಎಂದು ಹೇಳಿದರು.  ಎಂತಹ ಪ್ರಭಾವಿಗಳೇ ಇದ್ದರೂ, ಯಾವುದೇ ಒತ್ತಡಕ್ಕೂ ಮಣಿಯದೆ ಯಾವುದೇ ರೀತಿಯ ಕಟ್ಟಡ ಕಟ್ಟಿದ್ದರೂ ಮುಲಾಜಿಲ್ಲದೆ ತೆರವುಗೊಳಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸರ್ವೆಯರ್ ಅಭಾವ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು, ಆ.19- ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸರ್ವೆಯರ್ಗಳ ಅಭಾವ. ಹಾಗಾಗಿ ಕೆಲ ವಲಯಗಳಲ್ಲಿ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದೆ.
ಮಹದೇವಪುರದಲ್ಲಿ ಕೂಡ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಕೆಲಸಗಾರರು, ಪೊಲೀಸರು, ಜೆಸಿಬಿ ಎಲ್ಲಾ ಸಿದ್ಧವಾಗಿದೆ. ಆದರೆ ಸರ್ವೆ ಕಾರ್ಯ ಮಾಡಲು ಸರ್ವೆಯರ್ಗಳೇ ಸಿಗುತ್ತಿಲ್ಲ. ಹಾಗಾಗಿ ಎರಡು ದಿನ ತೆರವು ಕಾರ್ಯ ಸ್ಥಗಿತಗೊಂಡಿದೆ.  ಕೆಲವು ಖಾಸಗಿ ಸರ್ವೆಯರ್, ಬಿಬಿಎಂಪಿ ಸರ್ವೆಯರ್ಗಳು ಸರ್ವೆ ಕಾರ್ಯ ಮಾಡುತ್ತಿದ್ದಾರೆ. ಏಕಕಾಲಕ್ಕೆ ಸರ್ವೆ ಮಾಡುವುದು ಅಸಾಧ್ಯವಾಗಿದೆ. ಹಾಗಾಗಿ ಕೆಲವು ವಲಯಗಳಲ್ಲಿ ಹಿನ್ನಡೆಯಾಗಿದೆ.

ಒತ್ತುವರಿ ತೆರವು ಮಾಡುವ ಸಿಬ್ಬಂದಿಗೆ ಸರ್ಕಾರ 4ಜಿ ವಿನಾಯಿತಿ ನೀಡಿದೆ. ಹಾಗಾಗಿ ತೆರವು ಮಾಡಲು ಗುತ್ತಿಗೆದಾರರೇ ಮುಂದೆ ಬಂದಿದ್ದಾರೆ. ಆದರೆ ಸರ್ವೆಯರ್ಗಳೇ ಸಿಗುತ್ತಾ ಇಲ್ಲ. ಹಾಗಾಗಿ ಇರುವ ಸರ್ವೆಯರ್ಗಳನ್ನೇ ಬಳಸಿಕೊಂಡು ಸರ್ವೆ ಕಾರ್ಯ ಮಾಡುತ್ತಿರುವುದರಿಂದ ಕೆಲವೆಡೆ ಸ್ವಲ್ಪ ಅಡೆತಡೆಯಾಗಿದೆ. ಸರ್ವೆ ಕಾರ್ಯದಲ್ಲಿ ಕೆಲವು ಗೊಂದಲ ಉಂಟಾಗಿರುವುದರಿಂದ ಎರಡು ದಿನಗಳ ಕಾಲ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮಹದೇವಪುರ ವಲಯದಲ್ಲಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಕಂದಾಯ ಅಧಿಕಾರಿಗಳೊಂದಿಗೆ ಚರ್ಚಿಸಿ ಗೊಂದಲ ಸರಿ ಹೋದ ನಂತರ ತೆರವು ಕಾರ್ಯ ಮುಂದುವರೆಸಲಾಗುವುದು ಎಂದು ಬಿಬಿಎಂಪಿ ಎಇಇ ಪಾಂಡುರಂಗಯ್ಯ ಹೇಳಿದ್ದಾರೆ.

ಯಲಹಂಕದಲ್ಲೂ ತೆರವು ಕಾರ್ಯ ನಡೆಯಲಿಲ್ಲ:

ಯಲಹಂಕದಲ್ಲಿ ಸ್ಥಳೀಯರು ಸರ್ವೇ ಕಾರ್ಯ ಸರಿಹೋಗಿಲ್ಲ, ನಕ್ಷೆ ತಿರುಚಲಾಗಿದೆ. ಹಳೇ ಸರ್ವೆಯಂತೆ ತೆರವು ಕಾರ್ಯ ಕೈಗೊಳ್ಳಿ ಎಂದು ಪಟ್ಟು ಹಿಡಿದಿದ್ದಾರೆ. ನಿನ್ನೆಯಷ್ಟೆ ಕನ್ನಡ ಪರ ಸಂಘಟನೆಗಳು ರೀ ಸರ್ವೆ ಮಾಡಬಾರದು, ನಕ್ಷೆ ತಿರುಚಬಾರದೆಂದು ಪ್ರತಿಭಟನೆ ಕೂಡ ಮಾಡಿದ್ದಾರೆ. ಹಾಗಾಗಿ ಇಂದೂ ಕೂಡ ಇಲ್ಲಿ ರಾಜಕಾಲುವೆ ಒತ್ತುವರಿ ಕಾರ್ಯ ನಡೆಯಲಿಲ್ಲ. ಸ್ಥಳೀಯರ ವಿರೋಧದ ನಡುವೆಯೂ ಮಾಫಿ ಕಾರ್ಯ ಮುಂದುವರೆದಿದೆ.  ರಾಜರಾಜೇಶ್ವರಿ ನಗರದಲ್ಲಿ ತೆರವು ಕಾರ್ಯ ಚುರುಕು: ಪದ್ಮಾವತಿ ಮತ್ತು ಮೀನಾಕ್ಷಿ ಕಲ್ಯಾಣ ಮಂಟಪಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಡೈನಿಂಗ್ ಹಾಲ್, ಶೌಚಾಲಯ ನಿರ್ಮಿಸಿಕೊಂಡಿದ್ದು, ಇದನ್ನು ತೆರವುಗೊಳಿಸಲಾಯಿತು. ಮಧ್ಯಾಹ್ನ ನಂತರ ಬಿಡಿಎ ಅನುಮೋದಿತ ಖಾಸಗಿ ಬಿಇಎಂಎಲ್ ಬಡಾವಣೆಯ 12 ಆಸ್ತಿಗಳನ್ನು ತೆರವುಗೊಳಿಸಲು ಮಾರ್ಕ್ ಮಾಡಲಾಗಿದ್ದು, ಇವೆಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಸಂಜೆಯೊಳಗೆ ತೆರವು ಕಾರ್ಯ ಮುಗಿಯಲಿದೆ.

Facebook Comments

Sri Raghav

Admin

Comments are closed.