ರಾಜೀನಾಮೆ ನೀಡಲು ಸಿದ್ದ : ಸುಧಾಕರ್
ಚಿಕ್ಕಬಳ್ಳಾಪುರ,ಸೆ.22-ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ನ್ಯಾಯ ಸಿಗುತ್ತದೆ ಎನ್ನುವುದಾರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ತಾವು ಸಿದ್ಧ ಎಂದು ಶಾಸಕ ಡಾ ಕೆ.ಸುಧಾಕರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ಕುತಂತ್ರ ರಾಜಕಾರಣಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಅನುಭವಿಸುತ್ತಿರುವುದರ ನಡುವೆ ತಮಿಳುನಾಡಿನಲ್ಲಿ ಸಾಂಬಾ ಬೆಳೆಗೆ ನೀರನ್ನು ಹರಿಸಬೇಕೆನ್ನುವುದು ಯಾವ ನ್ಯಾಯ. ಸರ್ವೋಚ್ಛ ನ್ಯಾಯಾಲಯದ ತೀರ್ಪಿನಿಂದ ನಿಜವಾಗಲೂ ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುತಂತ್ರ ರಾಜಕಾರಣ ನೀತಿ ಅನುಸರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡಿಗರ ಹಿತದೃಷ್ಟಿಯಿಂದ ಮಧ್ಯಸ್ಥಿಕೆ ವಹಿಸಿ ಕಾವೇರಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬಹುದಾಗಿತ್ತು. ಆದರೆ ಅದು ಪ್ರಧಾನಿಗೆ ಬೇಕಾಗಿಲ್ಲ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದ ಪರವಾಗಿ ವಕೀಲ ನಾರೀಮನ್ ಉತ್ತಮವಾಗಿ ವಾದ ಮಂಡಿಸಿದ್ದಾರೆ. ಆದರೆ, ನಮ್ಮ ಮನವಿಗೆ ಸರಿಯಾಗಿ ಪುರಸ್ಕಾರ ಸಿಕ್ಕಿಲ್ಲ. ರಾಜ್ಯದ ಜನರು ನಿರೀಕ್ಷಿಸದ ತೀರ್ಪು ಬಂದಿದೆ ಎಂದು ಬೇಸರಪಟ್ಟರು.
ತಾ.ಪಂ.ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಹಾಪ್ ಕಾಮ್ಸ್ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಮುಖಂಡರಾದ ಸು.ಧಾ.ವೆಂಕಟೇಶ್, ಕಣಿತಹಳ್ಳಿ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.
► Follow us on – Facebook / Twitter / Google+