ರಾಜ್ಯಕ್ಕೆ ನ್ಯಾಯ ಸಿಗಲಿದೆ : ದೇವೇಗೌಡರ ವಿಶ್ವಾಸ
ಹಾಸನ,ಅ.3– ರಾಜ್ಯದ ಪರವಾಗಿ ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದು, ರಾಜ್ಯದ ಪರವಾಗಿ ನ್ಯಾಯ ದೊರಕುವ ವಿಶ್ವಾಸವಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಬಿಕ್ಕಟ್ಟು ಪರಿಹಾರಕ್ಕೆ ರಾಜ್ಯ ಸರ್ಕಾರ ತುರ್ತು ಅಧಿವೇಶನ ಕರೆದಿದೆ. ರಾಜ್ಯದ ಪರವಾಗಿ ಸುಪ್ರೀಂಗೆ ಪುನರ್ ಪರಿಶೀಲನಾ ಅರ್ಜಿ ಹಾಕಲಾಗಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸದಂತೆ ಕೇಂದ್ರ ಸರ್ಕಾರ ಆಕ್ಷೇಪಣಾ ಅರ್ಜಿ ಸಲ್ಲಿಸಿದೆ. ಇವೆಲ್ಲ ರಾಜ್ಯಕ್ಕೆ ಆಶಾದಾಯಕ ಬೆಳೆವಣಿಗೆಯಂತೆ ಕಂಡು ಬರುತ್ತಿವೆ ಎಂದರು.
ನಾನು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ರಾಜ್ಯದ ಪರವಾಗಿ ಮಾತನಾಡಿದ್ದೇನೆ. ನಿರಂತರ ಸಂಪರ್ಕದಲ್ಲಿ ಇದ್ದೇನೆ. ಯಾವುದೇ ಕಾರಣಕ್ಕೂ ಮಂಡಳಿ ರಚನೆ ಮಾಡಬಾರದು. 2007ರಲ್ಲಿ ನಾವು ಹಾಕಿರುವ ಎಸ್ಎಲ್ಪಿ ವಿಚಾರಣೆ ಅ.18ರಂದು ತ್ರಿಸದಸ್ಯ ಪೀಠದ ಮುಂದೆ ಬರಲಿದೆ ಎಂದು ಹೇಳಿದರು. ನಮ್ಮ ಸರ್ಕಾರ ಬಿದ್ದು ಹೋಗಬಹುದು. ಚುನಾವಣೆಗೆ ಸಿದ್ಧರಾಗಿ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಯಾವ ಹಿನ್ನೆಲೆಯಲ್ಲಿ ಅವರು ಹೇಳಿದ್ದಾರೋ ಗೊತ್ತಿಲ್ಲ. ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದ ಅವರು, ರಾಜ್ಯದ ಪರವಾಗಿ ಹೋರಾಡಲು ನನಗೆ ಶಕ್ತಿ ಕೊಡು ಎಂದು ಕುಲದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.
► Follow us on – Facebook / Twitter / Google+