ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಕೇಂದ್ರ ಅಧ್ಯಯನ ತಂಡಕ್ಕೆ ಬಿಜೆಪಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

BJP-000

ಬೆಂಗಳೂರು, ನ.5– ಶತಮಾನದಲ್ಲೇ ಕಂಡರಿಯದ ಭೀಕರ ಬರಗಾಲಕ್ಕೆ ತುತ್ತಾಗಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ನೀಡುವುದರ ಮೂಲಕ ಅನ್ನದಾತನ ನೆರವಿಗೆ ದಾವಿಸಬೇಕೆಂದು ಬಿಜೆಪಿ ನಿಯೋಗ ಕೇಂದ್ರ ಅಧ್ಯಯನ ತಂಡಕ್ಕೆ ಮನವಿ ಮಾಡಿದೆ. ಬೆಂಗಳೂರಿನಲ್ಲಿ ಇಂದು ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ನಿರಾಜ್ ಅದಿದಮ್ ಅವರ ನೇತೃತ್ವದ ಅಧಿಕಾರಿಗಳ ತಂಡವನ್ನು ಭೇಟಿ ಮಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ನಿಯೋಗ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್‍ಗೆ ನೀಡುವಂತೆ ಒತ್ತಾಯಿಸಿದೆ.
ರಾಜ್ಯದ 30 ಜಿಲ್ಲೆಗಳ 176 ತಾಲೂಕುಗಳ ಪೈಕಿ 139 ತಾಲೂಕುಗಳನ್ನು ರಾಜ್ಯ ಸರ್ಕಾರ ಈಗಾಗಲೇ ಬರ ಪೀಡಿತ ಎಂದು ಘೋಷಿಸಿದೆ. 747 ಹೋಬಳಿ, 5628 ಗ್ರಾಮ ಪಂಚಾಯಿತಿಗಳನ್ನೊಂದಿರುವ ರಾಜ್ಯದಲ್ಲಿ ಶೇ.76ರಷ್ಟು ಮಳೆ ಆಧಾರಿತ ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತದೆ.

ಪ್ರಮುಖ ಬೆಳೆಗಳಾದ ರಾಗಿ, ಭತ್ತ, ಶೇಂಗಾ, ಮೆಕ್ಕೆಜೋಳ, ತೊಗರಿ, ಅಡಿಕೆ, ಬಾಳೆ, ನೆಲಗಡಲೆ, ಈರುಳ್ಳಿ, ಕಬ್ಬು, ತಂಬಾಕು, ತೈಲ ಬೀಜಗಳು ಸೇರಿದಂತೆ ವಿವಿಧ ರೀತಿಯ ಬೆಳೆಗಳು ಮಳೆ ಇಲ್ಲದೆ ಸಂಪೂರ್ಣವಾಗಿ ಒಣಗಿ ಹೋಗಿವೆ. 2014-15ರಲ್ಲಿ ಹಾಗೂ 2015-16ರಲ್ಲೂ ರಾಜ್ಯವು ಹಿಂದೆಂದೂ ಕಾಣದ ಬರಗಾಲಕ್ಕೆ ತುತ್ತಾಗಿದೆ. ಬೆಳೆದು ನಿಂತ ಬೆಳೆ ನಷ್ಟವಾದ ಪರಿಣಾಮ ರಾಷ್ಟ್ರೀಯ ಮತ್ತು ಸಹಕಾರ ಬ್ಯಾಂಕ್‍ಗಳಿಂದ ರೈತನು ಪಡೆದ ಸಾಲವನ್ನು ಹಿಂದಿರುಗಿಸಲು ಸಾಧ್ಯವಾಗಿಲ್ಲ.  2013ರಿಂದ ಈವರೆಗೆ ರಾಜ್ಯದಲ್ಲಿ ಸರಿಸುಮಾರು 2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಶೇ.75ರಷ್ಟು ಪ್ರದೇಶವು ಬರಗಾಲಕ್ಕೆ ತುತ್ತಾಗಿರುವುದರಿಂದ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ.

ನಿಯೋಗಕ್ಕೆ ಮನವಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಅಧಿಕಾರಿಗಳ ತಂಡಕ್ಕೆ ವಾಸ್ತವ ಸ್ಥಿತಿಯನ್ನು ಅಂಕಿ-ಸಂಖ್ಯೆಗಳ ಸಮೇತ ಮನವರಿಕೆ ಮಾಡಿಕೊಡಲಾಗಿದೆ. ಬರಗಾಲದಿಂದ ರಾಜ್ಯದ 13 ಪ್ರಮುಖ ಜಲಾಶಯಗಳಲ್ಲಿ ಶೇ.60ಕ್ಕಿಂತಲೂ ನೀರು ಕಡಿಮೆಯಾಗಿದೆ. ಲಿಂಗನಮಕ್ಕಿ, ಸೂಪಾ ಸೇರಿದಂತೆ ಮತ್ತಿತರ ಕಡೆ ವಿದ್ಯುತ್ ಉತ್ಪಾದನೆ ಮಾಡುವಷ್ಟು ನೀರು ಸಂಗ್ರಹವಾಗಿಲ್ಲ. 2016ರಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.31ರಷ್ಟು ಮಳೆಯ ಕೊರತೆ ಎದುರಾಗಿದೆ. ಜೂನ್‍ನಿಂದ ಅಕ್ಟೋಬರ್ ಅಂತ್ಯದವರೆಗೆ ರಾಜ್ಯದ ಯಾವುದೇ ಪ್ರಮುಖ ಜಲಾಶಯಗಳು ಭರ್ತಿಯಾಗಿಲ್ಲ. ಮಲೆನಾಡು ಭಾಗದಲ್ಲಿ ಶೇ.-29, ಕರಾವಳಿ ತೀರ ಪ್ರದೇಶದಲ್ಲಿ ಶೇ.-21ರಷ್ಟು ಮಳೆಯ ಕೊರತೆ ಉಂಟಾಗಿದೆ.
ಸೆಪ್ಟೆಂಬರ್ 31ಕ್ಕೆ ಕೊನೆಗೊಂಡಂತೆ ಜಲಾಶಯಗಳಲ್ಲಿ 825.35 ಟಿಎಂಸಿ ನೀರು ಸಂಗ್ರಹವಾಗಬೇಕಿತ್ತು. ಆದರೆ ಮಳೆ ಕೊರತೆ ಉಂಟಾಗಿರುವುದರಿಂದ ರಾಜ್ಯದ 13 ಪ್ರಮುಖ ಜಲಾಶಯಗಳಲ್ಲಿ ಕೇವಲ 434.14 ಟಿಎಂಸಿ ನೀರು ಸಂಗ್ರಹವಾಗಿದೆ. ಕುಡಿಯುವ ನೀರು, ನೀರಾವರಿ, ವಿದ್ಯುತ್ ಉತ್ಪಾದನೆಗೆ ತೀವ್ರ ಸಂಕಷ್ಟವಾಗಿದೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ 3557 ಸಣ್ಣ ಕೆರೆಗಳು ಖಾಲಿಯಾಗಿವೆ. ಕೇವಲ 284 ಕೆರೆಗಳು ಮಾತ್ರ ಭರ್ತಿಯಾಗಿದ್ದು, ಶೇ.901ರಷ್ಟು ಕೆರೆಗಳಲ್ಲಿ ನೀರು ಬರಿದಾಗಿದೆ. ಇದರ ಪರಿಣಾಮ ಜಾನುವಾರುಗಳು ಸಹ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದರು. 73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಾರಿಫ್ ಬೆಳೆ ನಷ್ಟವಾಗಿದೆ. ಪ್ರಮುಖ ಬೆಳೆಗಳಾದ ಕಾರಿಫ್, ತೊಗರಿ ಬೇಳೆ, ನೆಲಗಡಲೆ, ಜೋಳ, ಸೋಯಾಬೀನ್, ಹತ್ತಿ ಮತ್ತಿತರ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. 139 ತಾಲೂಕುಗಳ 25.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬೆಳೆ ನಷ್ಟವಾಗಿದೆ.

ಸುಮಾರು 11,051,33 ಕೋಟಿಯಷ್ಟು ಬೆಳೆ ನಷ್ಟವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇಸಿಗೆಯಲ್ಲಿ ಬೆಳೆಯಲಾಗುತ್ತಿದ್ದ ಮಾವು, ತೆಂಗು, ಅಡಿಕೆ ಸಹ ಒಣಗಿ ಹೋಗುತ್ತಿವೆ. 1.89 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿರುವುದರಿಂದ 1,094,46 ಕೋಟಿಯಷ್ಟು ಬೆಳೆ ನಷ್ಟವಾಗಿದೆ.  ಮುಂಗಾರು ಕೈಕೊಟ್ಟ ಪರಿಣಾಮ ಹಿಂಗಾರಿನಲ್ಲೂ ಮಳೆಯಾಗುವ ಸಾಧ್ಯತೆಗಳಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ. ಮಳೆಯಾಗದ ಪರಿಣಾಮ ಎಲ್ಲ ತಾಲೂಕುಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. 82.45 ಲಕ್ಷ ಟನ್ ಮೇವಿನ ಅಗತ್ಯವಿದೆ. ರಾ ಜ್ಯದ ವಾಸ್ತವ ಚಿತ್ರಣವನ್ನು ಮನವರಿಕೆ ಮಾಡಿಕೊಟ್ಟಿರುವುದರಿಂದ ಕೇಂದ್ರದಿಂದ ರಾಜ್ಯಕ್ಕೆ ವಿಶೇಷ ಅನುದಾನ ಸಿಗುವ ಸಂಭವವಿದೆ ಎಂಬ ವಿಶ್ವಾಸವನ್ನು ಜಗದೀಶ್ ಶೆಟ್ಟರ್ ವ್ಯಕ್ತಪಡಿಸಿದರು. ನಿಯೋಗದಲ್ಲಿ ಸಂಸದ ಸುರೇಶ್ ಅಂಗಡಿ, ಶಾಸಕ ಚಂದ್ರಕಾಂತ್ ಬೆಲ್ಲದ್, ತಿಪ್ಪಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin