ರಾಜ್ಯದಲ್ಲಿರುವ 69.39ಲಕ್ಷ ವಸತಿ ರಹಿತರಿಗೆ ಮನೆ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

Dream-Home--01

ಬೆಳಗಾವಿ(ಸುವರ್ಣಸೌಧ), ನ.20- ರಾಜ್ಯದಲ್ಲಿ 69.39ಲಕ್ಷ ವಸತಿ ರಹಿತರಿದ್ದು, ಅವರಿಗೆ ಮನೆ ನಿರ್ಮಿಸಿ ಕೊಡುವ ಗುರಿ ಸಾಧಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರ ಪ್ರಶ್ನೆಗೆ ವಸತಿ ಸಚಿವ ಕೃಷ್ಣಪ್ಪ ಅವರ ಪರವಾಗಿ ಉತ್ತರ ನೀಡಿದ ಜಲಸಂಪನ್ಮೂ ಸಚಿವ ಎಂ.ಬಿ.ಪಾಟೀಲ್ ಅವರು, 2011ರ ಸಾಮಾಜಿಕ ಮತ್ತು ಆರ್ಥಿಕ ಜನಗಣತಿಯ ಪ್ರಕಾರ ಎಪಿಎಲ್, ಬಿಪಿಎಲ್ ಸೇರಿದ ಗ್ರಾಮೀಣ ಭಾಗದಲ್ಲಿ 39,07,782 ಹಾಗೂ ನಗರ ಪ್ರದೇಶದಲ್ಲಿ 30,32,079 ಸೇರಿ ಒಟ್ಟು 69,39,861 ಮಂದಿ ವಸತಿ ರಹಿತರಿದ್ದಾರೆ ಎಂದರು.

ರಾಜ್ಯವನ್ನು ಗುಡಿಸಲು ಮುಕ್ತಗೊಳಿಸಲು ಸರ್ಕಾರ ರಾಜೀವ್‍ಗಾಂಧಿ ಗ್ರಾಮೀಣ ವಸತಿ ನಿಗಮ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಸವ ವಸತಿ, ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ, ವಾಜಪೇಯಿ ನಗರಾಭಿವೃದ್ಧಿ ಯೋಜನೆ, ದೇವರಾಜ್ ಅರಸು ವಸತಿ ಯೋಜನೆ, ಪ್ರಧಾನಮಂತ್ರಿ ಅವಾಸ್ ಯೋಜನೆ, ಇಂದಿರಾ ಆವಾಸ್/ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ವರ್ಷಕ್ಕೆ 3ಲಕ್ಷ ಮನೆ ನಿರ್ಮಿಸುವ ಗುರಿ ಇದೆ. ಒಟ್ಟು 15 ಲಕ್ಷ ಮನೆ ನಿರ್ಮಿಸುವ ಗುರಿಯಲ್ಲಿ ಅ.17ರ ಅಂತ್ಯಕ್ಕೆ 12,61,742 ಮನೆಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ 9,792.92ಕೋಟಿ ನಿಗದಿ ಮಾಡಲಾಗಿದ್ದು, 9,079.80 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 8,723.79 ಕೋಟಿ ವೆಚ್ಚ ಮಾಡಲಾಗಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದಲೂ ಹಣ ಖರ್ಚು ಮಾಡಿ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.

ಇದಕ್ಕೆ ಉಪ ಪ್ರಶ್ನೆ ಕೇಳಿದ ಸಿ.ಟಿ.ರವಿ ಅವರು, ನಿವೇಶನ ರಹಿತರ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿದರು. 2011ರ ಜನಗಣತಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ವಸತಿ ರಹಿತರನ್ನು ಮಾತ್ರ ಸಮೀಕ್ಷೆ ಮಾಡಲಾಗಿದೆ. ಅದರಲ್ಲಿ ನಿವೇಶನ ರಹಿತರನ್ನು ಪ್ರತ್ಯೇಕವಾಗಿ ಗುರುತಿಸಲಾಗಿಲ್ಲ ಎಂದು ಸಚಿವರು ತಿಳಿಸಿದರು.  ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿ.ಟಿ.ರವಿ ಅವರು, ಪ್ರಧಾನಮಂತ್ರಿಯವರು 2022ರ ವೇಳೆಗೆ ಎಲ್ಲರಿಗೂ ಮನೆ ಎಂಬ ಯೋಜನೆ ಘೋಷಿಸಿದ್ದಾರೆ. ಕೇಂದ್ರ ಸರ್ಕಾರದ ಪ್ರಕಾರ ದೇಶದಲ್ಲಿ 5.5 ಕೋಟಿ ಜನರಿಗೆ ಮನೆ ಇಲ್ಲ. ಅವರಿಗೆ ಮನೆ ಒದಗಿಸಲು ಕೇಂದ್ರ ಸರ್ಕಾರ ಸ್ಪಷ್ಟ ಯೋಜನೆ ರೂಪಿಸಿದೆ. ರಾಜ್ಯ ಸರ್ಕಾರದ ಬಳಿ ಅಂತಹ ಯಾವ ಯೋಜನೆಗಳಿವೆ ? ವಸತಿ ರಹಿತರಿಗೆ ನಿವೇಶನ ಇರುವುದನ್ನು ಗುರುತಿಸಿದರೆ ಕೇಂದ್ರದ ಅನುದಾನ ಪಡೆದು ಮನೆ ನಿರ್ಮಿಸಿ ಕೊಡಲು ಅನುಕೂಲವಾಗಲಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು.

Facebook Comments

Sri Raghav

Admin