ರಾಜ್ಯದಲ್ಲಿ ಉಪ್ಪಿನ ಅಭಾವವಿಲ್ಲ ಸಾರ್ವಜನಿಕರಿಗೆ ಆಹಾರ ಸಚಿವ ಯು.ಟಿ.ಖಾದರ್ ಅಭಯ

ಈ ಸುದ್ದಿಯನ್ನು ಶೇರ್ ಮಾಡಿ

u-t--kadhar
ಬೆಂಗಳೂರು, ನ.13-ದೇಶದಲ್ಲಿ ಎಲ್ಲೂ ಸಹ ಉಪ್ಪಿನ ಅಭಾವ ಎದುರಾಗಿಲ್ಲ. ದುಪ್ಪಟ್ಟು ಬೆಲೆ ಕೊಟ್ಟು ಖರೀದಿಸುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.ಈ ಸಂಜೆಯೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಪ್ಯಾಕೆಟ್‍ಗಳಲ್ಲಿ ಉಪ್ಪು ಸರಬರಾಜು ಮಾಡಲಾಗುತ್ತಿದೆ. ಗರಿಷ್ಠ ಮಾರಾಟ ಬೆಲೆಯನ್ನು ಅದರ ಮೇಲೆ ನಮೂದಿಸಲಾಗಿದ್ದು, ಯಾರೂ ಅದಕ್ಕಿಂತ ಹೆಚ್ಚು ಹಣ ನೀಡುವ ಅಗತ್ಯವಿಲ್ಲ. ಹಲವೆಡೆ ಉಪ್ಪಿನ ಕೊರತೆ ಕುರಿತಂತೆ ಗೊಂದಲ ಸೃಷ್ಟಿಯಾಗಿದ್ದು, ಈ ಸಂಬಂಧ ಕಾನೂನು ಮತ್ತು ಮಾಪನ ಕೇಂದ್ರಕ್ಕೆ ತನಿಖೆ ನಡೆಸಲು ಆದೇಶಿಸಲಾಗಿದೆ  ಎಂದರು.ಗಡಿಬಿಡಿಯಲ್ಲಿ ವದಂತಿಗಳನ್ನು ನಂಬಿ ಜನ ಈ ರೀತಿ ಗೊಂದಲಕ್ಕೆ ಬೀಳುತ್ತಿದ್ದಾರೆ. ಸಕ್ಕರೆ ಅಥವಾ ಉಪ್ಪಿನ ಕೊರತೆ ಎದುರಾಗಿಲ್ಲ. ಸಾಕಷ್ಟು ದಾಸ್ತಾನು ಇದೆ. ಬಿಪಿಎಲ್ ಪಡಿತರ ಚೀಟಿದಾರರಿಗೆ ಸಕ್ಕರೆ ನೀಡಲಾಗುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ನಿನ್ನೆಯಿಂದ ರಾಷ್ಟ್ರಾದ್ಯಂತ ಹಲವೆಡೆ ಉಪ್ಪಿನ ಕೊರತೆ ಬಗ್ಗೆ ಗೊಂದಲ ಉಂಟಾಗಿ 500 ರೂ.ಗೆ ಮೂರು ಕೆಜಿ ಉಪ್ಪು ಖರೀದಿಸಿದ ನಿದರ್ಶನಗಳು ಇದೆ.ರಾಜ್ಯದ ಗದಗ, ಬೆಳಗಾವಿ, ರಾಯಚೂರು ಮತ್ತಿತರೆಡೆ ಉಪ್ಪಿನ ಕೊರತೆ ಕುರಿತಂತೆ ಎದುರಾದ ಸಮಸ್ಯೆಯಿಂದಾಗಿ ಜನ ಕಂಗಾಲಾಗಿ ಸಿಕ್ಕ ಸಿಕ್ಕ ಕಡೆ ಹೆಚ್ಚಿನ ಹಣ ನೀಡಿ ಉಪ್ಪು ಖರೀದಿಸಿದ್ದರು. ಇದರೊಂದಿಗೆ ಸಕ್ಕರೆ ಅಭಾವವೂ ಎದುರಾಗಲಿದೆ ಎಂಬ ವದಂತಿಗಳು ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿತ್ತು. ಈ ಗೊಂದಲವನ್ನೇ ಲಾಭ ಮಾಡಿಕೊಂಡ ವರ್ತಕರು ಸಾಕಷ್ಟು ಹಣ ಕಿತ್ತು ಉಪ್ಪು ನೀಡುತ್ತಿದ್ದರು. ಈ ಬಗ್ಗೆ ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದ್ದು, ಇಂದು ಆಹಾರ ಸಚಿವರು ಸಹ ರಾಜ್ಯದಲ್ಲಿ ಯಾವುದೇ ರೀತಿಯಲ್ಲೂ ಉಪ್ಪು ಹಾಗೂ ಸಕ್ಕರೆಗೆ ಅಭಾವವಿಲ್ಲ ಎಂದು ಪುನರುಚ್ಚರಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin