ರಾಜ್ಯದಲ್ಲಿ ಕಾಂಗ್ರೆಸ್‍ಗೆ ಎದುರಾಳಿಗಳೆ ಇಲ್ಲ, ಬಿಜೆಪಿ ಲೆಕ್ಕಕ್ಕೆ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--01

ಬೆಂಗಳೂರು, ಸೆ.22- ರಾಜ್ಯದಲ್ಲಿ ನಮಗೆ ಎದುರಾಳಿ ಪಕ್ಷಗಳೇ ಇಲ್ಲ. ಮೈಸೂರು ಭಾಗದಲ್ಲಿ ಜೆಡಿಎಸ್, ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಬಿಜೆಪಿ ಸ್ಪರ್ಧೆ ನೀಡುತ್ತಿದೆ. ಸರಾಸಗಟಾಗಿ ಪ್ರಮುಖ ಎದುರಾಳಿ ಎಂದು ಪರಿಗಣಿಸಬಹುದಾದ ಯಾವ ಪಕ್ಷಗಳು ರಾಜ್ಯದಲ್ಲಿ ಸದ್ಯಕ್ಕೆ ಇಲ್ಲ. ಬಿಜೆಪಿಯನ್ನು ನಾವು ಗಂಭೀರವಾಗಿ ತೆಗೆದುಕೊಂಡೇ ಇಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲಮನ್ನಾ, ಕೇಂದ್ರದಿಂದ ಅನುದಾನ ಮಂಜೂರಾತಿ, ಕಳಸಾ ಬಂಡೂರಿ ಸೇರಿದಂತೆ ಹಲವಾರು ವಿಷಯಗಳಲ್ಲಿ ಬಿಜೆಪಿ ವೈಫಲ್ಯ ಅನುಭವಿಸಿದೆ. ಜನರ ವಿಶ್ವಾಸ ಕಳೆದುಕೊಂಡಿದೆ ಹಾಗಾಗಿ ಮುಂದಿನ ಬಾರಿಯೂ ನಮ್ಮ ಪಕ್ಷ ಅತ್ಯಧಿಕ ಬಹುಮತದಿಂದ ಗೆದ್ದು ಬರಲಿದೆ ಎಂದರು. ಸಾಲಮನ್ನಾ ವಿಷಯದಲ್ಲಿ ಕೇಂದ್ರ ಸರ್ಕಾರ ರೈತರನ್ನು ನಿರ್ಲಕ್ಷಿಸಿದೆ. ಕರ್ನಾಟಕ ಸರ್ಕಾರ ಸಾಲ ಮನ್ನಾ ಮಾಡಿರುವುದನ್ನು ಕೇಂದ್ರ ಸಚಿವರು ಲಾಲಿಪಪ್‍ನಷ್ಟು ಎಂದು ಲೇವಡಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಲಾಲಿಪಪ್‍ನಷ್ಟು ಕೊಟ್ಟಿಲ್ಲ, ಖಾಲಿ ಕಪ್ ಎಂದರೆ ಚಿಕ್ಕನಾಯಕನಹಳ್ಳಿ ಚಿಪ್ಪು ಕೊಟ್ಟಿದೆ ಎಂದು ತಿರುಗೇಟು ನೀಡಿದರು.

ಹಾಲಿ ಶಾಸಕರು, ಸಚಿವರ ಮಕ್ಕಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ ಎಂದು ಹೈಕಮಾಂಡ್ ನಿರ್ಧರಿಸಿದರೆ ನನ್ನ ಮಗಳು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಶಾಸಕರು, ಸಚಿವರ ಮಕ್ಕಳಿಗೆ ಟಿಕೆಟ್ ನೀಡುವುದಿಲ್ಲ ಎಂದು ವರದಿಯಾಗಿರುವುದನ್ನು ಇತ್ತೀಚೆಗೆ ನಾನು ಪತ್ರಿಕೆಯಲ್ಲಿ ಗಮನಿಸಿದ್ದೇನೆ. ಏಳೆಂಟು ಜನ ಪ್ರಮುಖರ ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ನನ್ನ ಮಗಳೂ ಸಹ ಜಯನಗರದಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದಾಳೆ. ಹೈಕಮಾಂಡ್ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಯಾರಿಗೂ ಟಿಕೆಟ್ ನೀಡುವುದಿಲ್ಲ ಎಂದರೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದರು. ನನ್ನ ಮಗಳು ರಾಜಕೀಯ ಬರುವುದು ಬೇಡ. ಪರಿಸರ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರಲಿ ಎಂದು ಬಯಸಿದ್ದೆ. ಆದರೆ ಆಕೆ ರಾಜಕೀಯಕ್ಕೆ ಬಂದಿದ್ದಾಳೆ. ಟಿಕೆಟ್ ಕೊಟ್ಟರೆ ಸ್ಪರ್ಧಿಸಲಿ, ಇಲ್ಲವಾದರೆ ಇಲ್ಲ ಎಂದು ಹೇಳಿದರು.
ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರಬಹುದು. ಆದರೆ ನಿರಪರಾಧಿ ಎಂದು ತೀಪು ನೀಡಿಲ್ಲ. ತನಿಖೆಗೆ ತಡೆ ಕೋರಿ ಯಾರೇ ಅರ್ಜಿ ಹಾಕಿದರೂ ಕೋರ್ಟ್‍ನಲ್ಲಿ ತಡೆಯಾಜ್ಞೆ ಸಿಗುತ್ತದೆ. ಮುಂದಿನ ದಿನಗಳಲ್ಲಿ ಈಗ ಸಿಕ್ಕಿರುವ ತಡೆಯಾಜ್ಞೆ ತೆರವುಗೊಳ್ಳಲಿದೆ, ಎಸಿಬಿಯ ತನಿಖೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸಲು ಮಾತುಕತೆ ನಡೆದಿದೆ. ಜೆಡಿಎಸ್‍ಗೆ ಉಪಮೇಯರ್, ಕಾಂಗ್ರೆಸ್‍ಗೆ ಮೇಯರ್ ಸ್ಥಾನಗಳನ್ನು ಹಂಚಿಕೆಯಾಗಿವೆ. ಜೆಡಿಎಸ್‍ನವರು ನಾಲ್ಕು ಸ್ಥಾಯಿ ಸಮಿತಿಗಳನ್ನು ಕೇಳಿದ್ದಾರೆ. ಇರುವ ಸ್ಥಾಯಿ ಸಮಿತಿಗಳಲ್ಲಿ ಒಂದನ್ನು ಬದಲಾವಣೆ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ನಮ್ಮ ಪಕ್ಷದಶಾಸಕರು, ಸಚಿವರು, ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಡಿ.ಕೆ.ಸುರೇಶ್ ಅವರ ಅಸಮಾಧಾನಕ್ಕೆ ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಮಾತನಾಡುತ್ತಾರೆ. ಕಾಂಗ್ರೆಸ್‍ಗೆ 100 ಸ್ಥಾನಗಳು ಬಂದಿದ್ದರೆ, ನಾವು ಯಾರ ಮಾತು ಕೇಳಬೇಕಾಗಿರಲಿಲ್ಲ. ಮೈತ್ರಿ ವಿಷಯದಲ್ಲಿ ಸಹಜವಾಗಿ ಇಂತಹ ತೊಂದರೆಗಳು ಎದುರಾಗುತ್ತವೆ ಎಂದು ಹೇಳಿದರು. ಮೇಯರ್ ಸ್ಥಾನದ ಆಕಾಂಕ್ಷಿ ಸಂಪತ್‍ರಾಜ್ ಇದೇ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

Facebook Comments

Sri Raghav

Admin