ರಾಜ್ಯದಲ್ಲಿ ಚುನಾವಣಾ ದ್ವೇಷಕ್ಕೆ ಮೊದಲ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Ramareddy-JDS

ಗೌರಿಬಿದನೂರು, ಏ.27- ಚುನಾವಣಾ ದ್ವೇಷಕ್ಕೆ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ತಾಲ್ಲೂಕಿನ ಕೋಟಾಲದಿನ್ನೆ ಬಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ರಾಜಕೀಯ ಘರ್ಷಣೆಗೆ ಬಲಿಯಾದ ವ್ಯಕ್ತಿಯನ್ನು ಜೆಡಿಎಸ್ ಕಾರ್ಯಕರ್ತ ರಾಮರೆಡ್ಡಿ (27) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನರೇಂದ್ರ ಎಂಬ ಮತ್ತೊಬ್ಬ ವ್ಯಕ್ತಿಯು ತೀವ್ರವಾಗಿ ಗಾಯಗೊಂಡಿದ್ದು , ಆತನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘರ್ಷಣೆಯಲ್ಲಿ ಮೃತಪಟ್ಟಿರುವ ರಾಮರೆಡ್ಡಿಗೆ ಮದುವೆ ನಿಶ್ಚಯವಾಗಿದ್ದು , ಮುಂದಿನ ವಾರವೇ ವಿವಾಹ ನೆರವೇರಬೇಕಿತ್ತು.

ಘಟನೆ ವಿವರ:
ಹಿಪ್ಪಾರ ಹಳ್ಳಿಯ ಕಾಂಗ್ರೆಸ್ ಬೆಂಬಲಿತ ರೌಡಿ ಶೀಟರ್ ರಮೇಶ್ ಮತ್ತು ಜೆಡಿಎಸ್ ಕಾರ್ಯಕರ್ತ ರಾಮರೆಡ್ಡಿ ನಡುವೆ ಕೋಟಾಲ ದಿನ್ನೆ ಸಮೀಪದ ಬಾರ್ ಸಮೀಪ ಕ್ಷುಲ್ಲಕ ಕಾರಣಕ್ಕೆ ಜಗಳವಾಯಿತು. ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ವೈಯಕ್ತಿಕ ಜಗಳ ರಾಜಕೀಯ ವೈಷಮ್ಯಕ್ಕೆ ತಿರುಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರು ರಾಮರೆಡ್ಡಿ ಮತ್ತು ನರೇಂದ್ರ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು.  ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ರಾಮರೆಡ್ಡಿ ಮತ್ತು ನರೇಂದ್ರ ಎಂಬುವರನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ರಾಮರೆಡ್ಡಿ ಮೃತಪಟ್ಟಿದ್ದಾನೆ.

ನರೇಂದ್ರ ತೀವ್ರವಾಗಿ ಗಾಯಗೊಂಡಿದ್ದು , ಈತನ ಜತೆಗೆ ಮತ್ತಿಬ್ಬರು ಜೆಡಿಎಸ್ ಕಾರ್ಯಕರ್ತರು ಗೌರಿಬಿದನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಮೇಶ್ ಕೂಡ ಗಾಯಗೊಂಡಿದ್ದು , ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ. ರಾಜಕೀಯ ಘರ್ಷಣೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರಮೇಶ್ ದಾಖಲಾಗಿರುವ ಆಸ್ಪತ್ರೆ ಮುಂಭಾಗ ಜೆಡಿಎಸ್ ಕಾರ್ಯಕರ್ತರು ಜಮಾಯಿಸಿ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು.  ಈ ವೇಳೆ ಕೆಲ ಕಿಡಿಗೇಡಿಗಳು ಪೊಲೀಸ್ ಜೀಪಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಮನಗಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ನಡೆಸುತ್ತಿದ್ದಾರೆ.

Facebook Comments

Sri Raghav

Admin