ರಾಜ್ಯದಲ್ಲಿ ಜಲಪ್ರಳಯ : ತಾಯಿ-ಮಗಳು ಸಾವು, ಯುವಕನ ರಕ್ಷಣೆ, ಮೊಸಳೆ ಪ್ರತ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

Rain--02

ಬೆಂಗಳೂರು/ನೆಲಮಂಗಲ, ಅ.11-ಹವಾಮಾನ ಇಲಾಖೆ ಮುನ್ಸೂಚನೆಗೂ ಮೀರಿ ರಾಜ್ಯದೆಲ್ಲೆಡೆ ಜೋರು ಮಳೆಯಾಗುತ್ತಿದ್ದು, ಸಾಕಷ್ಟು ಅನಾಹುತ ಸೃಷ್ಟಿಸಿದೆ. ವಿಜಯಪುರದಲ್ಲಿ ಮನೆ ಗೋಡೆ ಕುಸಿದು ತಾಯಿ-ಮಗಳು ಮೃತಪಟ್ಟಿದ್ದರೆ, ನೆಲಮಂಗಲ, ಕೊರಟಗೆರೆಗಳಲ್ಲಿ ಕೆರೆ ಕೋಡಿ ಒಡೆದು ಸುತ್ತಮುತ್ತಲ ಗ್ರಾಮ ಜಲಾವೃತಗೊಂಡಿದೆ. ವಿಜಯಪುರದ ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಂದು ನಸುಕಿನ ವೇಳೆ ಮನೆಯ ಗೋಡೆಯೊಂದು ಕುಸಿದು ಬಿದ್ದು ಶಂಕ್ರಮ್ಮ ಔರಾದಿ (60) ಮತ್ತು ಆಕೆಯ ಪುತ್ರಿ ಮಹದೇವಿ ಔರಾದಿ(31) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮನೆಯ ಆವರಣದಲ್ಲಿ ಮಲಗಿದ್ದ ಶಂಕ್ರಮ್ಮ ಅವರ ಮಗ ಶಿವಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಬಸವನಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

WhatsApp Image 2017-10-11 at 9.56.12 AM

ನೆಲಮಂಗಲದಲ್ಲಿ ಮಳೆ ಅವಾಂತರ:
ಬೆಂಗಳೂರು ಹೊರವಲಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ನಿನ್ನೆ ರಾತ್ರಿ ಸುರಿದ ಮಳೆಗೆ ನೆಲಮಂಗಲದಲ್ಲಿ ಕೆರೆ ಕೋಡಿ ಒಡೆದು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಕೆರೆ ಕೋಡಿ ಒಡೆದ ಪರಿಣಾಮ ಎಂ.ಜಿ.ರಸ್ತೆ, ಗಜಾರಿಯಾ ಲೇಔಟ್, ವಾಜರಹಳ್ಳಿ ರಸ್ತೆ, ಭೈರವೇಶ್ವರ ಲೇಔಟ್, ಜನಪ್ರಿಯ ಅಪಾರ್ಟ್‍ಮೆಂಟ್ ನೀರಿನಲ್ಲಿ ಮುಳುಗಿ ಹೋಗಿವೆ. ಅದೇ ರೀತಿ ಭಿನ್ನಮಂಗಲ ಕೆರೆ ಕೂಡ ಕೋಡಿ ತುಂಬಿ ಹರಿಯುತ್ತಿರುವುದರಿಂದ ಅಡಕಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸಂಚಾರ ಸ್ತಬ್ಧಗೊಂಡಿದೆ. ಸಮೀಪದ ಜೈನರ ದೇವಾಲಯ ಜಲಾವೃತಗೊಂಡಿದ್ದು, ತಗ್ಗು ಪ್ರದೇಶದ ಜನರು ರಾತ್ರಿಯಿಡೀ ಜಾಗರಣೆ ಮಾಡಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕಳೆದ ಐದು ವರ್ಷಗಳ ಹಿಂದೆ ಈ ಪ್ರಮಾಣದ ಮಳೆಯಾಗಿತ್ತು. ಮತ್ತೆ ಈಗ ನೆಲಮಂಗಲದಲ್ಲಿ ದಾಖಲೆಯ 120 ಮಿಲಿಮೀಟರ್ ಮಳೆಯಾಗಿರುವುದರಿಂದ ತಾಲೂಕಿನ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿವೆ.

 

WhatsApp Image 2017-10-11 at 9.56.15 AM

ಒತ್ತುವರಿ ಕಾರಣ:

ಮೂರು ವರ್ಷಗಳ ಹಿಂದೆ ನೆಲಮಂಗಲ ಕೆರೆ ಕೋಡಿ ಒಡೆದು ಅಪಾರ ಹಾನಿ ಸಂಭವಿಸಿದಾಗ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂದಿನ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಕೆರೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದರು. ಕೆರೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗುತ್ತಲೇ ಇದ್ದರೂ ಕಾಮಗಾರಿ ಮಾತ್ರ ನಡೆಯುತ್ತಿಲ್ಲ ಬಿಡುಗಡೆಯಾದ ಹಣ ಅಧಿಕಾರಿಗಳು ಗುಳುಂ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಈ ಭಾಗದ ಬಹುತೇಕ ರಾಜಕಾಲುವೆಗಳು ಒತ್ತುವರಿಯಾಗಿವೆ. ಕೆಲವು ಪ್ರಭಾವಿಗಳಂತೂ ರಾಜಕಾಲುವೆ ಮಾರ್ಗವನ್ನೇ ಬದಲಿಸಿದ್ದಾರೆ. ಜನಪ್ರಿಯ ಅಪಾರ್ಟ್‍ಮೆಂಟ್ ರಾಜಕಾಲುವೆ ಒತ್ತುವರಿ ಮಾಡಿದೆ ಎಂದು 2008ರಲ್ಲೇ ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್ ನೋಟಿಸ್ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಈ ಧೋರಣೆ ವಿರೋಧಿಸಿ ಸಾರ್ವಜನಿಕರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಶಾಸಕ ಶ್ರೀನಿವಾಸಮೂರ್ತಿ, ಜಿಲ್ಲಾಧಿಕಾರಿ ಪಾಲಯ್ಯ ಭೇಟಿ ನೀಡಿ ಸಾರ್ವಜನಿಕರನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು.

 

ಕೊರಟಗೆರೆ ವರದಿ:

ತಾಲೂಕಿನ ಸಾವಿರಾರು ಎಕರೆಗೆ ನೀರುಣಿಸುತ್ತಿದ್ದ 300 ವರ್ಷಗಳ ಪುರಾತನ ಗೌಡನಕೆರೆ ಕೋಡಿ ಒಡೆದು ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ಕೆರೆಯಿಂದ ಹರಿದ ನೀರಿನ ರಭಸಕ್ಕೆ ಕೆಲವು ಅಂಗಡಿ ಮುಗ್ಗಟ್ಟುಗಳು ಕೊಚ್ಚಿ ಹೋಗಿವೆ. ನಾಲ್ಕು ವರ್ಷಗಳ ಹಿಂದೆಯೇ ಕೆರೆ ಕೋಡಿ ಶಿಥಿಲಗೊಂಡಿತ್ತು. ಈ ಕುರಿತಂತೆ ಸಂಬಂಧಪಟ್ಟ ಶಾಸಕರು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆರೆ ಕೋಡಿ ಒಡೆದು ಅಂಗಡಿ ಮುಗ್ಗಟ್ಟುಗಳು ಕೊಚ್ಚಿ ಹೋಗಿರುವುದಲ್ಲದೆ, ಶಾದಿ ಮಹಲ್ ಕಲ್ಯಾಣ ಮಂಟಪ ಸಂಪೂರ್ಣ ಜಲಮಯವಾಗಿವೆ.

 

WhatsApp Image 2017-10-11 at 9.56.16 AM(1)

ಮೊಸಳೆ ಪ್ರತ್ಯಕ್ಷ:

ಸಾಂಸ್ಕøತಿಕ ನಗರಿ ಮೈಸೂರಿನಲ್ಲೂ ಮಳೆ ಸಾಕಷ್ಟು ಅನಾಹುತ ಸೃಷ್ಟಿಸಿದ್ದು, ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ಫಲಪುಷ್ಪ ಪ್ರದರ್ಶನ ನಡೆಯುವ ಕುಪ್ಪಣ್ಣ ಪಾರ್ಕ್‍ನಲ್ಲಿ ಮೊಸಳೆ ಪ್ರತ್ಯಕ್ಷವಾಗಿ ನಾಗರಿಕರಲ್ಲಿ ಆತಂಕ ಸೃಷ್ಟಿಸಿತ್ತು. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ಪ್ರಕಾಶ್ ನೇತೃತ್ವದ ತಂಡ ಹರಸಾಹಸ ಪಟ್ಟು ಮೊಸಳೆ ಹಿಡಿದು ನದಿಗೆ ಬಿಟ್ಟಿದ್ದರಿಂದ ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ರಸ್ತೆಗೆ ಉರುಳಿದ ಬಂಡೆಗಳು:

ತುಮಕೂರು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ ದೇವರಾಯನ ದುರ್ಗದ ಬೆಟ್ಟ ಪ್ರದೇಶದ ಬಂಡೆಗಳು ರಸ್ತೆಗೆ ಉರುಳಿ ಬಿದ್ದು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕೋಲಾರ/ಚಿಕ್ಕಬಳ್ಳಾಪುರದಲ್ಲಿ ಉರುಳಿ ಬಿದ್ದ ಮರಗಳು:

ಬರಪೀಡಿತ ಪ್ರದೇಶಗಳೆಂದೇ ಗುರುತಿಸಲ್ಪಟ್ಟಿರುವ ಕೋಲಾರ, ಚಿಕ್ಕಬಳ್ಳಾಪುರದಲ್ಲೂ ವರುಣ ಆರ್ಭಟ ಜೋರಾಗಿದ್ದು, ನಿನ್ನೆ ರಾತ್ರಿ ಮಳೆಯ ರಭಸಕ್ಕೆ ನೂರಾರು ವರ್ಷಗಳ ಪುರಾತನ ಮರಗಳು ನೆಲಕಚ್ಚಿವೆ. ವಿದ್ಯುತ್ ಕಂಬಗಳು ಧರೆಗುರುಳಿದ್ದು, ಜಿಲ್ಲೆಯ ಹಲವು ಪ್ರದೇಶಗಳಲ್ಲಿ ರಾತ್ರಿಯಿಡೀ ವಿದ್ಯುತ್ ಸರಬರಾಜಾಗದೆ ನಾಗರಿಕರು ಪರದಾಡುವಂತಾಗಿತ್ತು.

 

WhatsApp Image 2017-10-11 at 9.56.21 AM(1)

ತುಂಬಿ ಹರಿಯುತ್ತಿದ್ದಾಳೆ ಚಿತ್ರಾವತಿ:

ಬಾಗೇಪಲ್ಲಿಯಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಚಿತ್ರಾವತಿ ನದಿ ಉಕ್ಕಿ ಹರಿಯುತ್ತಿದೆ. ಡಾ.ಎಚ್ಚೆನ್ ವೃತ್ತ ಸೇರಿದಂತೆ ಪಟ್ಟಣದ ಬಹುತೇಕ ಪ್ರದೇಶಗಳು ನೀರುಗಾಲುವೆಗಳಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬಹುತೇಕ ಮನೆಗಳಿಗೆ ನೀರು ನುಗ್ಗಿ ನೀರನ್ನು ಹೊರಹಾಕಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಚರಂಡಿಗಳನ್ನು ಚಿಕ್ಕದಾಗಿ ನಿರ್ಮಿಸಿದ್ದರ ಹಿನ್ನಲೆಯಲ್ಲಿ ಪ್ರವಾಹದ ರೀತಿಯಲ್ಲಿ ಮಳೆ ನೀರು ನುಗ್ಗಿದ್ದರಿಂದ ಮನೆಗಳಲ್ಲಿ 2 ಅಡಿಗಳಷ್ಟು ನೀರು ನಿಲ್ಲುವಂತಾಯಿತು. ಅದೇ ರೀತಿಯಲ್ಲಿ ಎಸ್.ಬಿ.ಎಂ ರಸ್ತೆಯ ಉಪನೋಂದಣಾಧಿಕಾರಿಗಳ ಕಚೇರಿಯ ಮುಂಭಾಗ ಕೆರೆಯಂತಾಗಿದೆ.

ಪಟ್ಟಣಕ್ಕೆ ಸಮೀಪದ ಹೆದ್ದಾರಿ 7ರಲ್ಲಿ ಅಂಡರ್ ಪಾಸ್ ನಲ್ಲಿ ಹೆಚ್ಚಿನ ನೀರು ತುಂಬಿಕೊಂಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ವಾಹನಗಳು ನೀರಿನಲ್ಲಿ ಸಿಲುಕಿ ನಿಂತುಹೋಗಿದ್ದರಿಂದ ಇತರೆ ವಾಹನಗಳು ಸಂಚರಿಸಲು ಆಗದ ಕಾರಣ ಕಿಮೀ ಗಟ್ಟಲೆ ವಾಹನಗಳ ಸಾಲುಗಟ್ಟಿ ನಿಂತಿದ್ದವು.

 

WhatsApp Image 2017-10-11 at 9.56.22 AM

ಯುವಕನ ರಕ್ಷಣೆ:

ಚಾಮರಾಜನಗರ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಕೊಳ್ಳೇಗಾಲ ತಾಲೂಕಿನ ಲೊಕ್ಕನಹಳ್ಳಿ ಸಮೀಪದ ಉಡುತೊರೆ ಹಳ್ಳ ತುಂಬಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಯುವಕನೊಬ್ಬನನ್ನು ಸ್ಥಳೀಯರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಳೆ ಅವಾಂತರಕ್ಕೆ ರೈತರು ಬೆಳೆದಿದ್ದ ಸಾವಿರಾರು ಎಕರೆ ಪ್ರದೇಶದ ಬೆಳೆ ನೀರು ಪಾಲಾಗಿದೆ.

WhatsApp Image 2017-10-11 at 9.56.23 AM

ಕನಕಪುರ ವರದಿ:
ಕನಕಪುರ ಸುತ್ತಮುತ್ತಲೂ ಮಳೆಯಾಗುತ್ತಿದ್ದು, ಕೆರೆ ಕೋಡಿ ಒಡೆದು ಏಕಾಏಕಿ ಕೆರೆ ನೀರೆಲ್ಲಾ ರಸ್ತೆಗೆ ಹರಿದ ಪರಿಣಾಮ ರಸ್ತೆಗಳು ಜಲಾವೃತಗೊಂಡವು. ಏಕಾಏಕಿ ನುಗ್ಗಿದ ನೀರಿನಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದು ಮೂರ್ನಾಲ್ಕು ಬಸ್‍ಗಳು ಸ್ಥಳದಲ್ಲೇ ಕೆಟ್ಟು ನಿಂತಿವೆ. ಇವುಗಳ ತೆರವಿಗಾಗಿ ಹರಸಾಹಸಪಡುವಂತಾಗಿದೆ. ಮಳೆ ಹಾವಳಿಯಿಂದ ಕನಕಪುರ-ಬೆಂಗಳೂರು ನಡುವಿನ ಸಂಚಾರ ಸ್ಥಗಿತಗೊಂಡಿದೆ.

 

 

Facebook Comments

Sri Raghav

Admin