ರಾಜ್ಯದಲ್ಲಿ ತಲೆ ಎತ್ತಲಿರುವ ಫ್ಲೈಯಿಂಗ್ ಸ್ಕೂಲ್

ಈ ಸುದ್ದಿಯನ್ನು ಶೇರ್ ಮಾಡಿ

Flying

ಬೆಂಗಳೂರು, ಆ.11- ರಾಜ್ಯ ಸರ್ಕಾರ ಶೀಘ್ರದಲ್ಲೇ ಫ್ಲೈಯಿಂಗ್ ಸ್ಕೂಲ್ ತೆರೆಯಲು ನಿರ್ಧರಿಸಿದ್ದು, ಇದು ವೈಮಾನಿಕ ಕ್ಷೇತ್ರಕ್ಕೆ ಕಾಲಿರಿಸಲು ಬಯಸುತ್ತಿರುವ ಗ್ರಾಮೀಣ ಪ್ರತಿಭೆಗಳಲ್ಲಿ ಆಸೆ ಗರಿಗೆದರಿಸಿದೆ.  ಪೈಲಟ್‍ಗಳಾಗಬೇಕೆಂಬ ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳ ಹಾಗೂ ಆರ್ಥಿಕವಾಗಿ ಹಿಂದುಳಿದವರ ಕನಸು ಇದುವರೆಗೂ ಖಾಸಗಿ ಹಿಡಿತದಲ್ಲಿದ್ದ ಕಲಿಕಾ ಕೇಂದ್ರಗಳ ದುಬಾರಿ ಶುಲ್ಕದಿಂದ ಕನಸಾಗಿಯೇ ಉಳಿದಿತ್ತು. ಆದರೆ, ಇದನ್ನು ನನಸು ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಬೆಂಗಳೂರು ಅಥವಾ ಬಳ್ಳಾರಿಯಲ್ಲಿ ಫ್ಲೈಯಿಂಗ್ ಸ್ಕೂಲ್ ತೆರೆಯಲು ತೀರ್ಮಾನಿಸಿದೆ. ಈ ಸಂಬಂಧ ಎಚ್‍ಎಎಲ್ ಜತೆಗೆ ಪ್ರಸ್ತಾಪ ಕೂಡ ಮಾಡಿದ್ದು, ಅವರಿಂದ ಒಪ್ಪಿಗೆ ಸಿಕ್ಕರೆ ರಾಜ್ಯ ಸರ್ಕಾರವೇ ಸ್ವಂತವಾಗಿ ಕಡಿಮೆ ಶುಲ್ಕದಲ್ಲಿ ಫ್ಲೈಯಿಂಗ್ ಶಾಲೆ ಆರಂಭಿಸಲಿದೆ.

ದಿಲ್ಲಿಗೆ ತೆರಳುವ ಸಚಿವರು:
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಈ ತಿಂಗಳು ನವದೆಹಲಿಗೆ ತೆರಳಿ ಈ ಸಂಬಂಧ ನಾಗರಿಕ ವಿಮಾನಯಾನ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮಹಾರಾಷ್ಟ್ರದ ಗೊಂದಿಯಾದಲ್ಲಿರುವ ಫ್ಲೈಯಿಂಗ್ ಸ್ಕೂಲ್ ಮಾದರಿಯಲ್ಲೇ ರಾಜ್ಯದಲ್ಲೂ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಸದ್ಯ ಜಕ್ಕೂರಿನಲ್ಲಿರುವ ತರಬೇತಿ ಕೇಂದ್ರದಲ್ಲಿ ಹೆಚ್ಚಿನ ಸೌಲಭ್ಯಗಳು ಇಲ್ಲದಿರುವುದರಿಂದ ಈ ಶಾಲೆ ಪ್ರಾರಂಭಕ್ಕೆ ಸರ್ಕಾರ ಮುಂದಾಗಿದೆ.
ಎರಡು ತರಬೇತಿ ಆರಂಭ:
ಸದ್ಯ ಖಾಸಗಿ ಶಾಲೆಗಳಲ್ಲಿ ಮಾತ್ರ ಲಭ್ಯವಿರುವ ಏರೋಸ್ಪೇಸ್ ಎಂಜಿನಿಯರಿಂಗ್ ಹಾಗೂ ರೈಲ್ವೆ ಎಂಜಿನಿಯರಿಂಗ್ ಕೋರ್ಸ್‍ಗಳನ್ನು ಸರ್ಕಾರಿ ಎಂಜಿನಿಯರಿಂಗ್ ತರಬೇತಿಗೆ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಒಂದು ಕಡಿವಾಣ ಬೀಳುವ ದಿನಗಳು ಹತ್ತಿರವಾದಂತೆ ಭಾಸವಾಗುತ್ತಿದೆ.
ಸದ್ಯ ಈ ಕಲಿಕೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು 50 ಲಕ್ಷ ರೂ. ಶುಲ್ಕ ವಿಧಿಸುತ್ತಿವೆ. ಆದರೆ, ಸರ್ಕಾರವೇ ಈ ತರಬೇತಿ ಆರಂಭಿಸಿದರೆ ಶುಲ್ಕ ಕಡಿಮೆಯಾಗಲಿದೆ. ಹೆಚ್ಚಿನ ವಿದ್ಯಾರ್ಥಿಗಳಿಗೆ ಈ ಕ್ಷೇತ್ರ ಪ್ರವೇಶಿಸಲು ಅನುಕೂಲವಾಗಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin