ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರಕ್ಕಾಗಮಿಸಲಿದ್ದಾರೆ ಸುಷ್ಮಾ, ನಿರ್ಮಲಾ, ಸ್ಮೃತಿ, ಮೀನಾಕ್ಷಿ..!

ಈ ಸುದ್ದಿಯನ್ನು ಶೇರ್ ಮಾಡಿ

BJP-Womens--02

ಬೆಂಗಳೂರು, ಜ.29- ಒಂದೆಡೆ ಕಾಂಗ್ರೆಸ್ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ತಾರಾ ಪ್ರಚಾರಕರನ್ನು ಸಜ್ಜುಗೊಳಿಸುತ್ತಿದ್ದರೆ ಇತ್ತ ಬಿಜೆಪಿಯು ಖ್ಯಾತನಾಮ ಮಹಿಳಾ ಪ್ರಚಾರಕಿಯರನ್ನು ಕರೆ ತರಲು ಮುಂದಾಗಿದೆ. ಕೇಂದ್ರದ ಸಚಿವರಾಗಿರುವ ಸುಷ್ಮಾ ಸ್ವರಾಜ್ , ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಸಂಸದೆ ಮೀನಾಕ್ಷಿ ಲೇಖಿ ಸೇರಿದಂತೆ ರಾಷ್ಟ್ರೀಯ ಮಹಿಳಾ ನಾಯಕರನ್ನು ಕರೆ ತಂದು ಮತದಾರರನ್ನು ಸೆಳೆಯುವುದು ಬಿಜೆಪಿ ಉದ್ದೇಶ.

ಕರ್ನಾಟಕದಲ್ಲಿ ಸತತ ಒಂದು ತಿಂಗಳ ಕಾಲ ಬಿಜೆಪಿ ಪರ ಇವರು ಪ್ರಚಾರ ಮಾಡಿದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ರಾಜ್ಯ ನಾಯಕರು ರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.ಈಗಾಗಲೇ ರಾಜ್ಯದಲ್ಲಿ ಪ್ರಚಾರ ಮಾಡುವ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಈ ನಾಲ್ವರು ಮಹಿಳೆಯರಿಗೆ ಆದ್ಯತೆ ಸಿಗುವ ಲಕ್ಷಣಗಳಿವೆ. ಅವಿನಾಭಾವ ಸಂಬಂಧ ಉಂಟು: ಕೇಂದ್ರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿರುವ ಸುಷ್ಮಾ ಸ್ವರಾಜ್ ಅವರಿಗೂ ಕರ್ನಾಟಕಕ್ಕೂ ಹಳೆಯ ನಂಟಿದೆ. ಈ ಹಿಂದೆ ಎಐಸಿಸಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಲೋಕಸಭೆ ಚುನಾವಣೆ ವೇಳೆ ಸ್ಪರ್ಧಿಸಿದಾಗ ಬಿಜೆಪಿ ಅಭ್ಯರ್ಥಿಯಾಗಿ ಸುಷ್ಮಾ ಸ್ವರಾಜ್ ಅಖಾಡಕ್ಕಿಳಿದಿದ್ದರು.
ಚುನಾವಣೆಯಲ್ಲಿ ಪರಾಭವಗೊಂಡರೂ ಸುಷ್ಮಾ ಸ್ವರಾಜ್ ಬಳ್ಳಾರಿಗೆ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ತಪ್ಪದೆ ಹಾಜರಾಗಿ ಪೂಜೆ ಸಲ್ಲಿಸುತ್ತಿದ್ದರು. ಅಕ್ರಮ ಗಣಿಗಾರಿಕೆಯಲ್ಲಿ ಜನಾರ್ದನ ರೆಡ್ಡಿ ಕಾನೂನು ಕುಣಿಕೆಗೆ ಸಿಲುಕಿದ ನಂತರ ಸುಷ್ಮಾ ಹಾಗೂ ರೆಡ್ಡಿ ಸಂಬಂಧ ಹಳಸಿದ ನಂತರ ಕರ್ನಾಟಕಕ್ಕೆ ಬರುವುದನ್ನು ನಿಲ್ಲಿಸಿದ್ದರು. ಆದರೂ ಈಗಲೂ ಸುಷ್ಮಾ ಸ್ವರಾಜ್‍ಗೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿಗಳ ಸಂಖ್ಯೆ ಇದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಖಾತೆಯನ್ನು ಹೊಂದಿರುವ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ಬಾರಿ ಕರ್ನಾಟಕದಲ್ಲಿ ತಾರಾ ಪ್ರಚಾರಕಿಯಾಗಲಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾದ ನಂತರ ಅವರ ನಡವಳಿಕೆಗಳು ಎಲ್ಲರ ಪ್ರೀತಿಗೆ ಪಾತ್ರವಾಗಿವೆ. ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ, ಸರಳತೆ, ಹರಳು ಹುರಿದಂತೆ ಮಾತನಾಡುವ ಇಂಗ್ಲಿಷ್, ಹಿಂದಿ ಎಲ್ಲರನ್ನೂ ಆಕರ್ಷಿಸುತ್ತಿದೆ.

ತಾವೊಬ್ಬ ಪ್ರಭಾವಿ ಸಚಿವರಾಗಿದ್ದರೂ ಅದರ ಹಮ್ಮು ಬಿಮ್ಮು ಇಲ್ಲದೆ ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುವ ಅವರ ಗುಣ ಮತದಾರರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ. ಇದೇ ರೀತಿ ಕೇಂದ್ರದ ಮತ್ತೊಬ್ಬ ತಾರಾ ಆಕರ್ಷಣೆಯ ಸಚಿವೆ ಸ್ಮೃತಿ ಇರಾನಿ ಬಿಜೆಪಿ ಪರ ಕರ್ನಾಟಕಕ್ಕೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿಂದಿ ಭಾಷೆ ಮೇಲೆ ಸಾಕಷ್ಟು ಹಿಡಿತ ಹೊಂದಿರುವ ಅವರು ತಮ್ಮ ಮಾತಿನ ಮೂಲಕವೇ ಎಂತಹ ಎದುರಾಳಿಗಳನ್ನು ಬಗ್ಗು ಬಡಿಯುವ ಚಾಕಚಕ್ಯತೆ ಹೊಂದಿದ್ದಾರೆ.

ಈ ಮೂವರೂ ತ್ರಿಮೂರ್ತಿ ಮಹಿಳಾ ಮಣಿಗಳನ್ನು ಕರೆ ತರುವುದರ ಜತೆಗೆ ಸಾಮಾಜಿಕ ಮಾಧ್ಯಮಗಳನ್ನು ನಿರ್ವಹಿಸಲು ಬಿಜೆಪಿಯ ದೆಹಲಿ ಸಂಸದೆ ಮೀನಾಕ್ಷಿ ಲೇಖಿ ಆಗಮಿಸಲಿದ್ದಾರೆ. ಸಾಮಾಜಿಕ ಜಾಲ ತಾಣ ಮತದಾರರ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಇದನ್ನು ಅವರೇ ನಿರ್ವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿಯೇ ಪ್ರಚಾರದಲ್ಲಿ ಪ್ರಮುಖ ಆಕರ್ಷಣೆಯಾಗಿರುವುದರಿಂದ ಜತೆಗೆ ಬೇರೆ ಸ್ಥಳಗಳಲ್ಲಿ ಎರಡನೆ ಹಂತದ ನಾಯಕರು ಪ್ರಚಾರ ನಡೆಸಿದರೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಅನುಕೂಲವಾಗುತ್ತದೆ ಎಂದು ಕಮಲ ನಾಯಕರ ತಂತ್ರವಾಗಿದೆ.

Facebook Comments

Sri Raghav

Admin