ರಾಜ್ಯದಲ್ಲಿ ಮತ್ತೆ ತಲೆ ಎತ್ತಿದೆ ರ‍್ಯಾಗಿಂಗ್ ಪಿಡುಗು

ಈ ಸುದ್ದಿಯನ್ನು ಶೇರ್ ಮಾಡಿ

Ragging

ರ್ಯಾಗಿಂಗ್ ಪಿಡುಗು ಮತ್ತೆ ತಲೆ ಎತ್ತಿದೆಯೇ..? ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ರ್ಯಾಗಿಂಗ್‍ನ ಕರಾಳ ಮುಖಗಳು ಅನಾವರಣಗೊಳ್ಳುತ್ತಿವೆ. ಕಾಲೇಜುಗಳಲ್ಲಿ ರ್ಯಾಗಿಂಗ್ ರಾಜಾರೋಷವಾಗಿ ನಡೆಯುತ್ತಿದ್ದರೂ ಬೆರೆಳೆಣಿಕೆಯಷ್ಟು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿವೆ. ಇಂಥ ಎಷ್ಟೋ ಪ್ರಕರಣಗಳು ಶಾಲಾ-ಕಾಲೇಜುಗಳಲ್ಲಿ ದಿನ ನಿತ್ಯ ನಡೆಯುತ್ತಲೇ ಇರುತ್ತವೆ.  ಇದಕ್ಕೆ ಪುಷ್ಠಿ ನೀಡುವಂತೆ ಮಂಗಳೂರಿನ ವಳಚ್ಚಿಲ್‍ನ ಶ್ರೀನಿವಾಸ ಫಾರ್ಮಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಫಾರ್ಮಾ ವಿದ್ಯಾರ್ಥಿಗಳ ಮೇಲೆ ರ್ಯಾಂಗಿಂಗ್ ಮತ್ತು ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ನಾಲ್ಕನೇ ವರ್ಷದ 23 ಬಿ.ಫಾರ್ಮಾ ವಿದ್ಯಾರ್ಥಿಗಳ ವಿರುದ್ಧ ನಿನ್ನೆ ದೂರು ದಾಖಲಾಗಿದೆ. ಈ ಘಟನೆಯೂ ವಿದ್ಯಾರ್ಥಿ ಸಮುದಾಯವನ್ನು ಬೆಚ್ಚಿ ಬೀಳುವಂತೆ ಮಾಡಿದೆ

ಕೆಲವು ತಿಂಗಳಿನಿಂದ ರಾಜ್ಯದ ಕೆಲವೆಡೆ ಇಂಥ ಘÀಟನೆಗಳು ಅಗಾಗ ಮರುಕಳಿಸುತ್ತಿವೆ. ಪಾನಮತ್ತ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ, ನೀಚ ರೀತಿಯ ರ್ಯಾಗಿಂಗ್ ನಡೆಸಿರುವ ಘಟನೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲೇ ನಡೆದಿತ್ತು. ಹಾಸ್ಟಲ್‍ನಲ್ಲಿದ್ದ ಜೂನಿಯರ್ಸ್ ಕೊಠಡಿಗೆ ನುಗ್ಗಿದ ಈ ದುರುಳರು ಹಲ್ಲೆ ನಡೆಸಿ ವಿವಸ್ತ್ರಗೊಳಿಸಿ ನೃತ್ಯ ಮಾಡುವಂತೆ ಒತ್ತಾಯಿಸಿ ಬೆದರಿಕೆಯೊಡ್ಡಿದರು. ಕಳೆದ ಕೆಲವು ತಿಂಗಳ ಹಿಂದೆ ದೇವಸಂದ್ರದ ಪ್ರತಿಷ್ಠಿತ ಎಂ.ಎಸ್.ರಾಮಯ್ಯ ಕಾಲೇಜಿನಲ್ಲೆ ನಡೆದ ರ್ಯಾಗಿಂಗ್ ಪ್ರಕರಣ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಇನ್ನೊಂದೆಡೆ ವಿವಾದ ಸೃಷ್ಟಿಸಿದ ಈ ರ್ಯಾಗಿಂಗ್ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿದ್ಯಾರ್ಥಿಯನ್ನು ಕಾಲೇಜು ಆಡಳಿತ ಮಂಡಳಿ ಸಸ್ಪೆಂಡ್ ಮಾಡಿರುವುದು ವಿದ್ಯಾರ್ಥಿ ಸಮುದಾಯದಲ್ಲಿ ಆತಂಕ ಮೂಡಿಸಿತು.

ಬಚ್ಚನ್‍ನನ್ನೂ ಕಾಡಿತ್ತು ರ್ಯಾಗಿಂಗ್ ಭೂತ !
ರ್ಯಾಗಿಂಗ್ ಪಿಡುಗು ಇಂದು ನಿನ್ನೆಯದ್ದಲ್ಲ. ಇದು ಅನೇಕ ದಶಕಗಳಿಂದ ಶಿಕ್ಷಣ ರಂಗದಲ್ಲಿ ಪಿಡುಗಾಗಿ ಪರಿಣಮಿಸಿದೆ. ಅನೇಕ ಮಂದಿ ರ್ಯಾಗಿಂಗ್‍ನನ್ನು ಭಾರತದ ಅತ್ಯಂತ ಸಣ್ಣ ಸಮಸ್ಯೆ ಎಂದೇ ನಂಬಿದ್ದಾರೆ. ರ್ಯಾಗಿಂಗ್‍ನ ತೀವ್ರ ಕರಾಳ ಮತ್ತು ಅಮಾನುಷ ಕೃತ್ಯಕ್ಕೆ ಒಳಗಾದ ಮಂದಿ ಈ ಬಗ್ಗೆ ಸಾಮಾನ್ಯವಾಗಿ ಮಾತನಾಡಲು ಹಿಂಜರಿಯುತ್ತಾರೆ. ಅಷ್ಟೇ ಏಕೆ ಬಾಲಿವುಡ್ ಸೂಪರ್‍ಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ಕೂಡ ಈ ಭೂತ ಕಾಡಿದೆ. ಬಾಲಿವುಡ್ ದಂತಕಥೆ ಬಚ್ಚನ್ ವಿದ್ಯಾರ್ಥಿ ದಿಸೆಯಲ್ಲಿ ತಮ್ಮ ಮೇಲೂ ರ್ಯಾಗಿಂಗ್ ನಡೆದಿದ್ದ ಘಟನೆಯನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ನಾವು 60ರ ದಶಕದಲ್ಲಿ ನಾನು ಓದುತ್ತಿದ್ದಾಗ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಗಿಂಗ್ ನಡೆಯುತ್ತಿತ್ತು. ನನ್ನ ಮೇಲೂ ರ್ಯಾಗಿಂಗ್ ನಡೆದಿದೆ. ಕೆಲವೊಮ್ಮೆ ಇದು ಅತಿರೇಕಕ್ಕೂ ಹೋಗಿತ್ತು. ನಾನು ಯಾವ ರೀತಿ ರ್ಯಾಗಿಂಗ್‍ಗೆ ಒಳಗಾಗಿದ್ದೆ ಎಂಬುದನ್ನು ನಾನು ಹೇಳಲು ಬಯಸುವುದಿಲ್ಲ.. ಆ ಬಗ್ಗೆ ನನ್ನನ್ನು ದಯವಿಟ್ಟು ಕೇಳಬೇಡಿ ಎಂದು ಬಿಗ್ ಬಿ ತಮ್ಮ ನೆನಪಿನ ಸುರುಳಿಯನ್ನು ಸ್ಪಷ್ಟವಾಗಿ ಬಿಚ್ಚಿಟ್ಟಿದ್ದಾರೆ.

ಕ್ರಿಕೆಟ್ ತಾರೆ ಸುರೇಶ್ ರೈನಾ, ಬಾಲಿವುಡ್ ಜನಪ್ರಿಯ ನಟ ಅರ್ಜುನ್ ರಾಂಪಾಲ್, ವಿಲನ್‍ಪಾತ್ರಗಳಲ್ಲಿ ಪ್ರೇಕ್ಷಕರನ್ನು ಹೆದರಿಸಿದ್ದ ರಾಹುಲ್‍ದೇವ್, ಶಕ್ತಿಕಪೂರ್ ಅವರೂ ಕೂಡ ಕಾಲೇಜು ದಿನಗಳಲ್ಲಿ ರ್ಯಾಗಿಂಗ್‍ಗೆ ಬೆಚ್ಚಿಬಿದ್ದಿದ್ದರು.  ಕೆಲವು ವರ್ಷಗಳ ಹಿಂದೆ ಚೆನ್ನೈ ವಿಶ್ವವಿದ್ಯಾಲಯದ ಕುಲಾಧಿಪತಿಯವರ ಮಗನೇ ರ್ಯಾಗಿಂಗ್‍ನ ವಿಕೃತ ಕೃತ್ಯಕ್ಕೆ ಬಲಿಯಾದ ಎಂದರೆ ಪರಿಸ್ಥಿತಿಯ ತೀವ್ರತೆಯನ್ನು ನೀವೇ ಊಹಿಸಿ.
ರ್ಯಾಗಿಂಗ್‍ನ ಕರಾಳ ಮುಖಗಳು
ರ್ಯಾಗಿಂಗ್ ಭೂತ ರೂಪ ಹಲವು ಬಗೆಯದು. ಈ ಪಿಡುಗು ದೇಶದ ನಾನಾ ಭಾಗಗಳಲ್ಲಿ ಅಗಾಗ ವರದಿಯಾಗುತ್ತಲೇ ಇರುತ್ತವೆ. ಗುರ್‍ಗಾಂವ್‍ನಲ್ಲಿ ಎಂಜಿನಿಯರಿಂಗ್ ಕಾಲೇಜೊಂದರ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗೆ ಥಳಿಸಿ ವಿಷ ಕುಡಿಸಿದ ಘಟನೆ ವಿದ್ಯಾರ್ಥಿ ಮತ್ತು ಪೋಷಕರನ್ನು ಬೆಚ್ಚಿ ಬೀಳಿಸಿತು. ದೆಹಲಿಯ ನಿವಾಸಿಯಾದ ತುಲಾ ರಾಂ ಹಲ್ಲೆಗೆ ಒಳಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ನಡುವೆ ಹೋರಾಡಬೇಕಾಯಿತು. ರ್ಯಾಗಿಂಗ್ ಪಿಡುಗು ದೇಶದ ಉದ್ದಗಲಕ್ಕೂ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ಹಿರಿಯ ವಿದ್ಯಾರ್ಥಿಗಳ ರ್ಯಾಗಿಂಗ್ ಕೃತ್ಯದಿಂದ ಬೇಸತ್ತ ವಿದ್ಯಾರ್ಥಿಯೊಬ್ಬ ಚಲಿಸುವ ರೈಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ನಡೆದಿದೆ. ನವಿ ಮುಂಬೈನ ರಾಮರಾವ್ ಆದಿಕ್ ಇನ್ಸ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ನಿತಿನ್ ಪಡಲ್ಕರ್ ಅತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಾಲೇಜಿನಲ್ಲಿ ತನ್ನ ಗೆಳೆಯರು ಮತ್ತು ಹಿರಿಯ ವಿದ್ಯಾರ್ಥಿಗಳು ನೀಡುತ್ತಿದ್ದ ಮಾನಸಿಕ ಕಿರುಕುಳದಿಂದ ಬೇಸತ್ತು ನಿತಿನ್ ಈ ಅನಾಹುತಕ್ಕೆ ಬಲಿಯಾಗಿದ್ದಾನೆ.

ಇನ್ನು ಕೊಲ್ಕತಾದಲ್ಲಿ ನಡೆದ ಘಟನೆಯಂತೂ ಬೆಚ್ಚಿ ಬೀಳಿಸುವಂಥದ್ದು. 5ನೇ ತರಗತಿಯ ಪುಟ್ಟ ಬಾಲಕಿ ಐಂದ್ರಿಲಾ ದಾಸ್‍ಗೆ ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಣಕ್ಕಾಗಿ ಪೀಡಿಸಿ ಶಾಲೆಯ ಶೌಚಾಲಯದಲ್ಲಿ ಕೂಡಿ ಹಾಕಿದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಈ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದ ಬಾಲಕಿ ದುರಂತ ಸಾವಿಗೀಡಾದಳು. ಶಾಲೆಯನ್ನು ನಡೆದ ಈ ರ್ಯಾಗಿಂಗ್ ಪ್ರಕರಣದಿಂದ ಆಕ್ರೋಶಗೊಂಡ ಬಾಲಕಿಯ ಪೋಷಕರು ಶಾಲೆಯ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಪ್ರಸಂಗವೂ ನಡೆಯಿತು.  ಕೆಲವು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದಲ್ಲಿ ರ್ಯಾಗಿಂಗ್ ಪ್ರಕರಣದ ಭೀಕರ ಸಾವು ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿತು. ಇಂಥ ಪ್ರಕರಣಗಳು ಅಗಾಗ ಮರುಕಳಿಸುತ್ತಲೇ ಇರುತ್ತವೆ.

ಕರ್ನಾಟಕದಲ್ಲೂ ಆಗಾಗ ರ್ಯಾಗಿಂಗ್ ಪಿಡುಗು ವರದಿಯಾಗುತ್ತಲೇ ಇದೆ. ಮಂಗಳೂರಿನ ಎ.ಜೆ.ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗೆ ಅದೇ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಚೂರಿಯಿಂದ ಇರಿದ ಘಟನೆ ಇತ್ತೀಚೆಗೆ ನಡೆದಿದೆ. ಬಿಹಾರ ಮೂಲದ ವರುಣ್ ಸಿಂಗ್ ಚೂರಿ ಇರಿತಕ್ಕೆ ಒಳಗಾದ ವಿದ್ಯಾರ್ಥಿ. ಈತ ವಾಸವಿದ್ದ ಫ್ಲಾಟ್‍ನಲ್ಲಿ ಡ್ರಗ್ಸ್ ವ್ಯವಹಾರ ಮತ್ತು ವೇಶ್ಯಾವಾಟಿಕೆಗಳು ನಡೆಯುತ್ತಿತ್ತು. ಈ ವಿರುದ್ಧ ವರುಣ್ ಆಕ್ಷೇಪ ಎತ್ತಿದ್ದೇ ಈ ಘಟನೆಗೆ ಕಾರಣ.  1996ರಿಂದ 2010ರ ತನಕ ದೇಶದ ವಿವಿಧೆಡೆ ನಡೆದ ರ್ಯಾಗಿಂಗ್ ಪಿಡುಗಿನಿಂದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು. ಇನ್ನು 2007ರಿಂದ ವರದಿಯಾದಂತೆ ರ್ಯಾಗಿಂಗ್‍ನಿಂದ ದೇಹಕ್ಕೆ ಗಾಯವಾದ 42 ಪ್ರಕರಣಗಳು ಹಾಗೂ ಕಳೆದ 7 ವರ್ಷಗಳಲ್ಲಿ ಕನಿಷ್ಠ 30-31 ಸಾವುಗಳು ಸಂಭವಿಸಿದೆ. 2007ರಲ್ಲಿ ಏಳು ರ್ಯಾಗಿಂಗ್ ಸಾವುಗಳು ನಡೆದಿವೆ.

ಪ್ರತಿ ವರ್ಷವೂ ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಈ ಕೆಟ್ಟ ಸಂಪ್ರದಾಯದಲ್ಲಿ ನಲಗುತ್ತಾರೆ. ಅಪ್ಪ ಅಮ್ಮ, ಪೋಷಕರು, ಗುರು ಹಿರಿಯರ ಕಣ್ಣಿಂದ ದೂರದಲ್ಲಿ, ಮರೆಯಲ್ಲಿ, ಅಪ್ರಬುದ್ದರ ಲೋಕದಲ್ಲಿ ನಡೆಯುತ್ತದೆ. ಇಂಥ ಪ್ರಕರಣಗಳು ಅಗಾಗ ಮರುಕಳಿಸುತ್ತಲೇ ಇರುತ್ತವೆ. ರ್ಯಾಗಿಂಗ್ ಪಿಡುಗಿಗೆ ಕಡಿವಾಣ ಹಾಕಲು ಸುಪ್ರೀಂಕೋರ್ಟ್ ಹಾಗೂ ಸಂಬಂಧಪಟ್ಟ ಅಂಗಸಂಸ್ಥೆಗಳು ಕಾನೂನು ಬಿಗಿಯನ್ನು ಹೆಚ್ಚಿಸುತ್ತಿವೆ. ಕಾನೂನಿನ ಬಿಗಿ ಮಧ್ಯದ ನಡುವೆಯೇ ಅಲ್ಲೊಂದು ಇಲ್ಲೊಂದು ದುರ್ಘಟನೆಗಳು ನಡೆಯುತ್ತಿವೆ. ಇದರ ಪರಿಣಾಮ ವಿಪರೀತ ಮತ್ತು ಭೀಕರವಾದಾಗ ಮಾತ್ರ ಇವು ಬೆಳಕಿಗೆ ಬಂದು ಚರ್ಚೆ ನಡೆದು ಮತ್ತೆ ತಣ್ಣಗಾಗುತ್ತವೆ.

ಮನೆಯಿಂದ ಹೊರಗೆ ನಡೆಯುವ ಇಂಥ ಘಟನೆಗಳನ್ನು ಎದುರಿಸಲು ಕಾನೂನು ರಕ್ಷಣೆಯ ಜೊತೆಗೆ ಕಾಲೇಜು ಮತ್ತು ಪೋಷಕರ ನಡುವೆ ಸಂವಾದಗಳು ನಡೆಯುತ್ತಿರಬೇಕು. ಓದಿನ ಹೊಣೆಗಾರಿಕೆ ನೆನೆಪು ಮೂಡಿಸುವ ಜೊತೆಗೆ ವಿದ್ಯಾರ್ಥಿಗಳಲ್ಲಿ ವಿವೇಕಪೂರ್ಣ ಜವಾಬ್ದಾರಿಗಳ ಬಗ್ಗೆಯೂ ಎಚ್ಚರ ಮೂಡಿಸಬೇಕು. ಮನೆ, ಕಾಲೇಜು ಮತ್ತು ಕಾನೂನುಗಳು ಒಟ್ಟಿಗೆ ಕೈಜೋಡಿಸಿ ರ್ಯಾಗಿಂಗ್ ವಿರುದ್ಧ ಹೋರಾಟ ನಡೆಸಿ ಪರಿಹಾರ ಕಂಡುಕೊಳ್ಳಬೇಕು.

► Follow us on –  Facebook / Twitter  / Google+

Facebook Comments

Sri Raghav

Admin