ರಾಜ್ಯದಲ್ಲಿ ಶೀಘ್ರವೇ ಎರಡು ರಸಗೊಬ್ಬರ ಕಾರ್ಖಾನೆಗಳ ಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

fertilizerdsxs

ಬೆಂಗಳೂರು, ಆ.12- ಬಹುದಿನಗಳ ಬೇಡಿಕೆಯಂತೆ ರಾಜ್ಯದಲ್ಲಿ ಕೇಂದ್ರ ಸರ್ಕಾರ ಎರಡು ರಾಸಯನಿಕ ರಸಗೊಬ್ಬರ ಕಾರ್ಖಾನೆಗಳನ್ನು ಸ್ಥಾಪಿಸಲು ತೀರ್ಮಾನಿಸಿದೆ. ಉತ್ತರ ಕರ್ನಾಟಕದ ಮಧ್ಯಭಾಗವಾದ ರಾಯಚೂರು ಮತ್ತು ರಾಜ್ಯದ ಎರಡನೇ ರಾಜದಾನಿ ಎನಿಸಿಕೊಂಡಿರುವ ಮ್ಯಾಚೆಂಸ್ಟಾರ್ ಖ್ಯಾತಿಯ ದಾವಣಗೆರೆಯಲ್ಲಿ ಈ ಎರಡೂ ಕಾರ್ಖಾನೆಗಳು ಆರಂಭವಾಗಲಿವೆ. ಮೊದಲ ಹಂತದಲ್ಲಿ ರಾಯಚೂರು, ದಾವಣಗೆರೆ ಹಾಗೂ ಎರಡನೇ ಹಂತದಲ್ಲಿ ವಿಜಯಪುರ ಹಾಗೂ ಮೈಸೂರು ಭಾಗದಲ್ಲಿ ರಾಸಯನಿಕ ರಸಗೊಬ್ಬರ ಕಾರ್ಖಾನೆ ಆರಂಭವಾಗಲಿದೆ.  ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದಲ್ಲಿ ಈ ಕಾರ್ಖಾನೆಗಳು ಪ್ರಾರಂಭವಾಗಲಿದ್ದು, ಎರಡು ವರ್ಷದ ಅವಧಿಯಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರಸಾಯನಗೊಬ್ಬರ ಸಚಿವ ಅನಂತ್‍ಕುಮಾರ್ ವಿಶೇಷ ಕಾಳಜಿ ವಹಿಸಿದ ಪರಿಣಾಮ ರಾಜ್ಯಕ್ಕೆ ಎರಡು ಕಾರ್ಖಾನೆಗಳು ಲಭ್ಯವಾಗಿವೆ.  ಸುಮಾರು 10ಸಾವಿರ ಕೋಟಿ ಬಂಡವಾಳ ಹೂಡಿಕೆಯಲ್ಲಿ ವಾರ್ಷಿಕ ನೂರು ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಉತ್ಪಾದನೆ ಮಾಡುವ ಈ ಕಾರ್ಖಾನೆಗಳಿಗೆ ದಾಬೋಲ್‍ನಿಂದ ಬಿಡದಿಗೆ ಸರಬರಾಜಾಗುವ ಗ್ಯಾಸ್ ಪಡೆಯಲು ತೀರ್ಮಾನಿಸಲಾಗಿದೆ.  ಈ ಹಿಂದೆ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಬಾಗಲಕೋಟೆ, ವಿಜಯಪುರ, ದಾವಣಗೆರೆ ಹಾಗೂ ರಾಯಚೂರಿನಲ್ಲಿ ರಾಸಯನಿಕ ಕಾರ್ಖಾನೆ ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಕಾರ್ಖಾನೆ ಆರಂಭಿಸಲು ಮುಂದೆ ಬಂದರೆ ಸರ್ಕಾರದ ವತಿಯಿಂದ ಭೂಮಿ, ನೀರು, ವಿದ್ಯುತ್ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಒದಗಿಸುವುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಶ್ವಾಸನೆ ಕೊಟ್ಟಿದ್ದರು.
ಎಚ್ಚೆತ್ತುಕೊಂಡ ಅನಂತ್‍ಕುಮಾರ್:
ಪ್ರಧಾನಿ ನರೇಂದ್ರಮೋದಿ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಅನಂತ್‍ಕುಮಾರ್ ರಾಜ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಬೇಕೆಂಬುದು ಅವರ ಬಹುದಿನದ ಕನಸಾಗಿತ್ತು.  ಇದೀಗ ಸರ್ಕಾರವೇ ಮೂಲಭೂತ ಸೌಕರ್ಯ ಒದಗಿಸಲು ಮುಂದೆ ಬಂದಿದ್ದರಿಂದ ಅನಂತ್‍ಕುಮಾರ್ ರಾಜ್ಯಕ್ಕೆ ಎರಡು ಕಾರ್ಖಾನೆಗಳನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಹಿಂದೆ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ರಾಯಚೂರಿಗೆ ಕೈ ತಪ್ಪಿದ್ದು, ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಧಾರವಾಡಕ್ಕೆ ಮಂಜೂರಾಗಿದ್ದ ಐಐಟಿಯನ್ನು ರಾಯಚೂರಿಗೆ ನೀಡಬೇಕೆಂದು ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಲಾಗಿತ್ತು. ಅಂತಿಮವಾಗಿ ಐಐಟಿ ಇದೀಗ ಧಾರವಾಡದಲ್ಲಿಯೇ ಪ್ರಾರಂಭವಾಗಿದೆ.

ಈ ಸಮತೋಲವನ್ನು ಸರಿದೂಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮೊದಲ ಹಂತದಲ್ಲೇ ರಾಯಚೂರು ಹಾಗೂ ದಾವಣಗೆರೆ ಕಾರ್ಖಾನೆಗಳನ್ನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.  ರಾಯಚೂರು ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ಸೇರಿದ 7ಸಾವಿರ ಎಕರೆ ಜಮೀನು ಲಭ್ಯವಿರುವ ಕಾರಣ ಇಲ್ಲಿ ಕಾರ್ಖಾನೆ ಪ್ರಾರಂಭವಾಗಲಿದೆ. ಇನ್ನು ದಾವಣಗೆರೆಯಲ್ಲೂ ಕೂಡ ಸಾಕಷ್ಟು ಪ್ರಮಾಣದ ಜಮೀನು ಇರುವ ಹಿನ್ನೆಲೆಯಲ್ಲಿ ಹೊರ ಭಾಗದಲ್ಲಿ ಕಾರ್ಖಾನೆ ಆರಂಭವಾಗಲಿದೆ.  ಮುಂದಿನ ದಿನಗಳಲ್ಲಿ ವಿಜಯಪುರ ಹಾಗೂ ಮೈಸೂರು ಇಲ್ಲವೇ ಚಾಮರಾಜನಗರದಲ್ಲಿ ಈ ಕಾರ್ಖಾನೆಗಳು ಪ್ರಾರಂಭವಾಗಲಿವೆ ಎಂದು ತಿಳಿದು ಬಂದಿದೆ.

Facebook Comments

Sri Raghav

Admin