ರಾಜ್ಯದಲ್ಲಿ ಸದ್ಯ ಪಾನ ನಿಷೇಧ ಜಾರಿ ಇಲ್ಲ : ಸಚಿವರ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

Drunker

ಬೆಂಗಳೂರು, ಅ.7- ರಾಜ್ಯದಲ್ಲಿ ಸದ್ಯ ಪಾನ ನಿಷೇಧ ಜಾರಿ ಮಾಡುವುದಿಲ್ಲ. ಜನರಿಗೆ ಕುಡಿಯುವುದು ಬೇಡ ಎಂದು ಹೇಳುತ್ತೇವೆ ಅಷ್ಟೆ ಎಂದು ಇಂದಿಲ್ಲಿ ಹೇಳಿದ ಅಬಕಾರಿ ಸಚಿವ ಎಚ್.ವೈ.ಮೇಟಿ ಅವರು ಪಾನ ನಿಷೇಧ ಮಾಡುವುದಾದರೆ ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು ಎಂದು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಹಾರ ಮಾದರಿಯಲ್ಲಿ ಪಾನ ನಿಷೇಧ ಮಾಡುವ ಚಿಂತನೆ ಸರ್ಕಾರಕ್ಕೆ ಸದ್ಯಕ್ಕಿಲ್ಲ ಎಂದು ಹೇಳಿದರು. ಹೊಸ ಮದ್ಯದಂಗಡಿಗಳನ್ನು ತೆರೆಯಲು ಸಾಕಷ್ಟು ಬೇಡಿಕೆ ಇದ್ದು, ಅನುಮತಿ ಕೊಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದರು. ಅಬಕಾರಿ ಶುಲ್ಕ ಸಂಗ್ರಹದ ಸ್ಪಷ್ಟ ಗುರಿ ಇಲ್ಲ. ಆದರೆ, ಸಂಗ್ರಹದ ಅಂದಾಜು ಇದೆ. ಈ ವರ್ಷ 16,500 ಕೋಟಿ ಸಂಗ್ರಹಿಸಬೇಕೆಂಬ ಗುರಿ ಹೊಂದಲಾಗಿದೆ. ಕಳೆದ ವರ್ಷ 110 ಕೋಟಿ ರೂ.ಗಳ ಹೆಚ್ಚುವರಿ ಅಬಕಾರಿ ಶುಲ್ಕ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಆಗಸ್ಟ್‍ವರೆಗೆ ನಿರೀಕ್ಷೆಯಂತೆ ಅಬಕಾರಿ ವಹಿವಾಟು ನಡೆದಿದೆ. ಸೆಪ್ಟೆಂಬರ್‍ನಲ್ಲಿ ಕಾವೇರಿ ಗಲಭೆ ಹಿನ್ನೆಲೆಯಲ್ಲಿ ಅಬಕಾರಿ ವಹಿವಾಟಿನಲ್ಲಿ ಏರುಪೇರಾಯಿತು ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವುದರಿಂದ ದೇಶ-ವಿದೇಶಗಳಿಂದ ಜನ ಇಲ್ಲಿಗೆ ಬರುತ್ತಾರೆ. ಹಾಗಾಗಿ ಮಧ್ಯರಾತ್ರಿ 1 ಗಂಟೆವರೆಗೆ ಬಾರ್‍ಗಳನ್ನು ತೆರೆಯಲಾಗಿದೆ. ಬೇರೆ ಜಿಲ್ಲೆಗಳಿಗೆ ಇದನ್ನು ವಿಸ್ತರಿಸಿರುವುದಿಲ್ಲ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶಗಳ ಗೂಡಂಗಡಿಗಳು, ಸೈಕಲ್‍ಶಾಪ್ ಹಾಗೂ ಇನ್ನಿತರ ಕಡೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲ. ಆ ರೀತಿ ಮದ್ಯ ಮಾರಾಟವಾಗುತ್ತಿರುವುದು ಕಂಡುಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ವಿದ್ಯಾರ್ಥಿಗಳು, ರೈತ ಮುಖಂಡರು, ಮಹದಾಯಿ ಮತ್ತು ಕಾವೇರಿ ಉಳಿವಿಗಾಗಿ ಆಗ್ರಹಿಸಿ ಬಾಗಲಕೋಟೆಯಿಂದ ವಿಧಾನಸೌಧದವರೆಗೆ ಸೈಕಲ್ ಜಾಥಾದಲ್ಲಿ ಬಂದು ಸಚಿವರಿಗೆ ಮನವಿ ಸಲ್ಲಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin