ರಾಜ್ಯದಲ್ಲಿ ಹೊಸ ತಾಲ್ಲೂಕುಗಳ ರಚನೆ ಅನುಮಾನ : ಕಾಗೋಡು ತಿಮ್ಮಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Kagodu-thimmappa
ಬೆಂಗಳೂರು, ಮಾ.5- ಹೊಸ ತಾಲೂಕು ರಚನೆಗೆ ಹಣಕಾಸು ಹೊರೆಯಾಗುತ್ತದೆ ಎಂಬ ಅಭಿಪ್ರಾಯವನ್ನು ಆರ್ಥಿಕ ಇಲಾಖೆ ನೀಡಿದೆ. ಈ ನಡುವೆ ಹೊಸ ತಾಲೂಕುಗಳಿಗೆ ಸಾಕಷ್ಟು ಬೇಡಿಕೆಯಿದ್ದು, ಇದನ್ನು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಗಿದೆ ಎನ್ನುವುದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಅಭಿಪ್ರಾಯವಾಗಿದೆ.  ಈ ಮೂಲಕ ಹೊಸ ತಾಲೂಕು ರಚನೆಯಾಗಬಹುದೆಂದು ಕನಸು ಕಾಣುತ್ತಿದ್ದ ರಾಜ್ಯದ ಕೆಲ ಭಾಗದ ನಾಗರಿಕರಿಗೆ ಈ ಬಾರಿ ಬಜೆಟ್ ಸಂದರ್ಭದಲ್ಲೂ ನಿರಾಸೆ ಆಗುವುದು ಕಟ್ಟಿಟ್ಟ ಬುತ್ತಿ. ತಾಲೂಕು ಮಾತ್ರವಲ್ಲ, ವಿವಿಧ ಉಪ ವಿಭಾಗ, ಹೋಬಳಿಗಳ ರಚನೆಯ ಕನಸನ್ನು ಕೂಡ ಜನ ಕಾಣುತ್ತಿದ್ದಾರೆ . ಆದರೆ, ಈ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಶೆಟ್ಟರ್ ಘೋಷಣೆ:

ಈ ಹಿಂದೆ 43 ತಾಲೂಕು, 144 ಹೋಬಳಿ ಹಾಗೂ 11 ಉಪ ವಿಭಾಗಗಳನ್ನು ರಚಿಸುವ ಘೋಷಣೆ ಆಗಿತ್ತು. 2012-13ರಲ್ಲಿ ಜಗದೀಶ್ ಶೆಟ್ಟರ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಈ ಘೋಷಣೆ ಮಾಡಿದ್ದರು. ಆದರೆ, ಹಣ ಬಿಡುಗಡೆ ಮಾಡದ ಕಾರಣ ಘೋಷಣೆ ಮಾತ್ರ ಉಳಿದುಕೊಂಡಿದೆ. ನಂತರ ಅಧಿಕಾರಕ್ಕೆ ಬಂದವರು ಈ ಬಗ್ಗೆ ನಿರ್ಲಕ್ಷ್ಯ ತೋರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಡಿಸಿದ ಎಲ್ಲಾ  ಬಜೆಟ್‍ಗಳಲ್ಲೂ ಈ ಬಗ್ಗೆ ಪ್ರಸ್ತಾಪವೇ ಆಗಿಲ್ಲ. ಈ ಬಾರಿಯ ಬಜೆಟ್‍ನಲ್ಲೂ ಇದು ಮುಂದುವರಿಯಲಿದೆ ಎನ್ನುವ ಸೂಚನೆಯೂ ಸಿಕ್ಕಿದೆ.

ಆರ್ಥಿಕ ಲೆಕ್ಕಾಚಾರ:

ಹೊಸ ತಾಲೂಕು ರಚನೆ ಬಗ್ಗೆ ಮೂರು ಸಮಿತಿಗಳು ಸರ್ಕಾರಕ್ಕೆ ಶಿಫಾರಸು ಮಾಡಿದ್ದವು. ಅವೆಲ್ಲವೂ ಕಡತದಲ್ಲೇ ಕೊಳೆಯುತ್ತಿವೆ. ರಾಜ್ಯ ಹಣಕಾಸು ಇಲಾಖೆ ಈಗ ಲೆಕ್ಕ ಹಾಕಿರುವ ಪ್ರಕಾರ, ರಚನೆಗೆ ಸುಮಾರು 1000 ಕೋಟಿ ರೂ. ಅಗತ್ಯ ಬೀಳಲಿದೆ. ಅದರ ಜತೆಗೆ ಪ್ರತಿ ವರ್ಷ ಸುಮಾರು 1400 ಕೋಟಿ ರೂ. ಹೊರೆ ಬೀಳುತ್ತದೆ. ರಾಜ್ಯ ಬರದಿಂದ ಕಂಗೆಟ್ಟಿರುವಾಗ ಇದು ಅಸಾಧ್ಯ ಎಂದು ಹಣಕಾಸು ಇಲಾಖೆ ಹೇಳಿದೆ ಎನ್ನಲಾಗಿದೆ.  ತಾಲೂಕು ರಚನೆಗೆ ಒಂದಕ್ಕೆ ಈಗಿನ ಲೆಕ್ಕದಲ್ಲಿ ತಕ್ಷಣಕ್ಕೆ ತಲಾ 25 ಕೋಟಿ ರೂ. ಬೇಕಾದರೆ, ಹೋಬಳಿಗೆ ಒಂದಕ್ಕೆ 1 ಕೋಟಿ ರೂ. ಹಾಗೂ ಉಪ ವಿಭಾಗ ಒಂದಕ್ಕೆ 8 ರಿಂದ 10 ಕೋಟಿ ರೂ. ಬೇಕಾಗುತ್ತದೆ ಎಂಬ ಅಂದಾಜನ್ನು ಆರ್ಥಿಕ ಇಲಾಖೆ ಮಾಡಿದೆ. ಹೋಬಳಿ ಹಾಗೂ ಉಪ ವಿಭಾಗಗಳಿಗೂ ವಾರ್ಷಿಕ ವೆಚ್ಚ ಬೀಳುತ್ತದೆ. ಇದೆಲ್ಲಾ ಆಗುವ ಮಾತಲ್ಲ ಎಂದು ಹೇಳಲಾಗಿದೆ.

ತಾಲೂಕು ಘೋಷಣೆಯಾಗಿದ್ದ ಪ್ರದೇಶ:

ಗುಳೇದಗುಡ್ಡ, ರಬಕವಿ -ಬನಹಟ್ಟಿ, ಇಳಕಲ್, ನಿಪ್ಪಾಣಿ, ಮೂಡಲಗಿ, ಕಾಗವಾಡ, ಹನೂರು, ನ್ಯಾಮತಿ, ಚಿಟಗುಪ್ಪ, ಹುಲಸೂರು, ಕಮಲಾನಗರ, ಕುರುಗೋಡು, ಕೊಟ್ಟೂರು, ಕಂಪ್ಲಿ, ಹುಬ್ಬಳ್ಳಿ ನಗರ, ಅಣ್ಣಿಗೇರಿ, ಅಳ್ನಾವರ, ಗಜೇಂದ್ರಗಡ, ಲಕ್ಷ್ಮೇಶ್ವರ, ಕಾಳಗಿ, ಕಮಲಾಪುರ, ಶಹಾಬಾದï, ಹುಣಸಗಿ, ಯಡ್ರಾಮಿ, ವಡಗೇರ, ಗುರುಮಿಟ್ಕಲï, ಕುಕನೂರು, ಕನಕಗಿರಿ, ಕಾರಟಗಿ, ಮಸ್ಕಿ, ಸಿರವಾರ, ಬ್ರಹ್ಮಾವರ, ಬೈಂದೂರು, ಮೂಡಬಿದರೆ, ಕಡಬ, ಯಲಹಂಕ, ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ, ಕೊಲ್ಹಾರ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin