ರಾಜ್ಯದಲ್ಲಿ ಹೊಸ ವರ್ಷಕ್ಕೆ ರಕ್ತದೋಕುಳಿ : ಜೆಡಿಎಸ್ ಮುಖಂಡ ಸೇರಿ ನಾಲ್ವರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

JDS-Murder-Worker

ಬೆಂಗಳೂರು, ಜ.1-ಹೊಸ ವರ್ಷದ ಆರಂಭಕ್ಕೂ ಮುನ್ನ ಮೋಜು ಮಸ್ತಿ ಮಾಡಿ ಹಳೇ ವೈಷಮ್ಯ ಮರೆಯುವುದು ವಾಡಿಕೆ. ಆದರೆ ಡಿ.31ರ ಮಧ್ಯರಾತ್ರಿ ಜೆಡಿಎಸ್ ಮುಖಂಡ ಸೇರಿದಂತೆ ನಾಲ್ಕು ಮಂದಿಯನ್ನು ದುಷ್ಕರ್ಮಿಗಳು ಕೊಲೆ ಮಾಡುವ ಮೂಲಕ ವರ್ಷಾರಂಭಕ್ಕೆ ರಕ್ತದೋಕುಳಿಯ ಮುನ್ನುಡಿ ಬರೆದಿದ್ದಾರೆ. ಮಂಡ್ಯ ಮತ್ತು ತುಮಕೂರು, ಗೌರಿಬಿದನೂರು, ಮಂಗಳೂರಿನಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಐದು ಮಂದಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಜೆಡಿಎಸ್ ಮುಖಂಡನ ಹತ್ಯೆ:

ಮಂಡ್ಯ ರಾಜಕೀಯ ವೈಷಮ್ಯಕ್ಕೆ ಮತ್ತೊಂದು ತಲೆ ಉರುಳಿದೆ. ಮುರುಕನಹಳ್ಳಿಯ ಹರೀಶ್ ಅಲಿಯಾಸ್ ಗುಂಡಾ ಎದುರಾಳಿಗಳ ಕೃತ್ಯಕ್ಕೆ ಬಲಿಯಾದ ಜೆಡಿಎಸ್ ಮುಖಂಡ.ಮುರುಕನಹಳ್ಳಿಯಲ್ಲಿ ಹಿಂದಿನಿಂದಲೂ ರಾಜಕೀಯ ದ್ವೇಷದ ಕಿಚ್ಚು ಹೆಚ್ಚಿದ್ದು, ನಿನ್ನೆ ಮನೆಗೆ ತೆರಳುತ್ತಿದ್ದ ಹರೀಶ್‍ನ ಮೇಲೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳ ಗುಂಪು ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ವಿಚಾರ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಮತ್ತು ಸ್ಥಳೀಯರು ಕೃತ್ಯದ ಹಿಂದೆ ಮಾಜಿ ಶಾಸಕರ ಪುತ್ರನ ಕೈವಾಡವಿದೆ ಎಂದು ಆರೋಪಿಸಿ ನಾಲ್ಕು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಸ್ನೇಹಿತನ ಕೊಲೆ:

ಮಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಸ್ನೇಹಿತರಿಬ್ಬರ ನಡುವೆ ಆರಂಭವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉಲ್ಲಾಳ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಬಳ್ಳಾರಿಯ ರುದ್ರಮಣಿ ಸಂತೋಷ್ (25) ಕೊಲೆಯಾದವ. ಕುತ್ತಾರಿ ಗ್ರಾಮದಲ್ಲಿ ನಡೆದ ಹೊಸ ವರ್ಷದ ಸಂಭ್ರಮ ಆಚರಣೆಯ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಸ್ನೇಹಿತರಾದ ಪ್ರದೀಪ್ ಮತ್ತು ರುದ್ರಮಣಿ ಸಂತೋಷ್ ನಡುವೆ ಕುಡಿದ ಮತ್ತಿನಲ್ಲಿ ಮಾತಿನ ಚಕಮಕಿ ನಡೆದಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪ್ರದೀಪ್ ಚೂರಿಯಿಂದ ಸ್ನೇಹಿತ ರುದ್ರಮಣಿಯನ್ನು ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮೀನು ವಿವಾದಕ್ಕೆ ಬಿತ್ತು ಹೆಣ :

ಜಮೀನು ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊರ್ವನನ್ನು ಮಚ್ಚಿನಿಂದ ಕುತ್ತಿಗೆ ಮತ್ತು ತಲೆÉ ಕೊಚ್ಚಿ ಕೊಲೆ ಮಾಡಿರುವ ಘಟನೆ ಗೌರಿಬಿದನೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದಿದೆ.
ಪಟ್ಟಣದ ವಿನಾಯಕ ನಗರ ಬಡಾವಣೆಯ ವಾಸಿ ಮದನಗೋಪಾಲ್ (45) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಚಾಂದ್‍ಪಾಷ ಪೊಲೀಸರಿಗೆ ಶರಣಾಗಿದ್ದಾನೆ.
ನಡೆದಿದ್ದೇನು?
ಕೊಲೆಯಾದ ಮದನ್‍ಗೋಪಾಲ್ ಮತ್ತು ಚಾಂದ್‍ಪಾಷ ನಡುವೆ ಬಾದಮರಳೂರು ಗ್ರಾಮದ ಜಮೀನು ಕುರಿತಂತೆ ವಿವಾದವಿತ್ತು. ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಕಳೆದ ವರ್ಷ ಮೃತ ಸಹೋದರ ತಿಮ್ಮಯ್ಯ ಎಂಬುವರ ಮೇಲೆ ಹಲ್ಲೆ ಕೂಡ ನಡೆದಿತ್ತು. ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮದನ್‍ಗೋಪಾಲ್ ಪರ ತೀರ್ಪು ಬಂದಿದ್ದು, ಇದನ್ನು ಸಹಿಸದ ಚಾಂದ್‍ಪಾಷ ನನ್ನ ಪತಿಯನ್ನು ಹತ್ಯೆ ಮಾಡಿದ್ದಾನೆ ಎಂದು ಮೃತನ ಪತ್ನಿ ಭಾರತಿ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ಸಂಜೆ ತಾಲೂಕು ಪಂಚಾಯ್ತಿ ಆವರಣದಲ್ಲಿ ಒಂಟಿಯಾಗಿ ಹೋಗುತ್ತಿದ್ದ ಮದನ್‍ಗೋಪಾಲ್ ಮೇಲೆ ಏಕಾಏಕಿ ದಾಳಿ ನಡೆಸಿದ ಚಾಂದ್‍ಪಾಷ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಡಿವೈಎಸ್ಪಿ ಪುರುಷೋತ್ತಮ್ , ವೃತ್ತನಿರೀಕ್ಷಕ ಎಂ.ವಿ.ಶೇಷಾದ್ರಿ ಎಸ್‍ಐಗಳಾದ ನಯಾಜ್‍ಬೇಗ್, ಅವಿನಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಆಟೋ ಚಾಲಕನ ಬರ್ಬರ ಹತ್ಯೆ:

ತುಮಕೂರು ಜಿಲ್ಲೆಯ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋ ಚಾಲಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಅರಣ್ಯ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾರೆ. ಕುಣಿಗಲ್ ತಾಲೂಕಿನ ಬ್ಯಾಡಿಗೆರೆ ನಿವಾಸಿ ದಯಾನಂದ (35) ಕೊಲೆಯಾದ ನತದೃಷ್ಟ. ಈತ ಬೆಂಗಳೂರಿನ ಲಗ್ಗೆರೆಯಲ್ಲಿ ಆಟೋ ಚಾಲಕನಾಗಿದ್ದು, ಸಣ್ಣಪುಟ್ಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಹೊಸ ವರ್ಷಾಚರಣೆ ಆಚರಿಸುವ ಸಂಬಂಧ ತಮ್ಮ ಊರಾದ ಬ್ಯಾಡಿಗೆರೆಗೆ ಬಂದಿದ್ದ ದಯಾನಂದನನ್ನು ಅಪಹರಿಸಿರುವ ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಕೊಲೆ ಮಾಡಿದ್ದಾರೆ.  ಹಳೇ ದ್ವೇಷದ ಹಿನ್ನೆಲೆಯಲ್ಲಿ ದಯಾನಂದನ ಹತ್ಯೆ ನಡೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ವೃತ್ತ ನಿರೀಕ್ಷಕ ಬಾಳೇಗೌಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin