ರಾಜ್ಯದಾದ್ಯಂತ ಜೋರಾಗಿದೆ ಬೆಟ್ಟಿಂಗ್ ಭರಾಟೆ, ಸೋಲು-ಗೆಲುವಿನ ಲೆಕ್ಕಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

Betting--01

ಬೆಂಗಳೂರು, ಮೇ 13- ಮತದಾನ ಮುಗಿದು ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದೆ. ರೇಸ್, ಕ್ರಿಕೆಟ್ ಬೆಟ್ಟಿಂಗ್‍ಅನ್ನು ಮೀರಿಸುವಂತಿರುವ ರಾಜಕೀಯ ಜೂಜಾಟದಲ್ಲಿ ತಮ್ಮ ನೆಚ್ಚಿನ ಅಭ್ಯರ್ಥಿ ಗೆಲ್ಲುತ್ತಾರೆ ಅಥವಾ ನಮ್ಮ ಪಕ್ಷವೇ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ನೂರಾರು ಮಂದಿ ಕೋಟಿ ಕೋಟಿ ಹಣ ಬಾಜಿ ಕಟ್ಟುತ್ತಿದ್ದಾರೆ. ತುಮಕೂರು, ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಮಂಡ್ಯ, ರಾಮನಗರ ಮತ್ತಿತರ ಜಿಲ್ಲೆಗಳಲ್ಲಿ ಬೆಟ್ಟಿಂಗ್ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.

ಮತದಾನೋತ್ತರ ಸಮೀಕ್ಷೆಯಲ್ಲಿ ಕೆಲವು ಸಂಸ್ಥೆಗಳು ಕಾಂಗ್ರೆಸ್‍ಗೆ ಸರಳ ಮತ ಬರಲಿದೆ ಎಂದರೆ, ಇನ್ನೂ ಕೆಲ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನೂ ಕೆಲವರು ಜೆಡಿಎಸ್ ಬಿಟ್ಟು ಯಾರೂ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬ ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ಮೂರೂ ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲೇ ಬೆಟ್ಟಿಂಗ್ ದಂಧೆ ಆರಂಭಗೊಂಡಿದೆ. ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಗರು ಕೋಟ್ಯಂತರ ರೂ. ಬಾಜಿ ಕಟ್ಟುತ್ತಿದ್ದಾರೆ.

ಇನ್ನು ಹೈ ವೋಲ್ಟೇಜ್ ಕ್ಷೇತ್ರಗಳಾದ ಚನ್ನಪಟ್ಟಣ, ಚಾಮುಂಡೇಶ್ವರಿ, ಹುಣಸೂರು, ಬಾದಾಮಿ ಕ್ಷೇತ್ರಗಳಲ್ಲಂತೂ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದು ಜೂಜುಕೋರರು ಜಮೀನು, ಮನೆ-ಮಠಗಳನ್ನೇ ಪಣವಾಗಿಟ್ಟಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಪ್ಪ ಅವರು ಈ ಬಾರಿ ನಿಚ್ಚಳ ಬಹುಮತ ಪಡೆದು ಮತ್ತೆ ಶಾಸಕರಾಗಿ ಆರಿಸಿ ಬರಲಿದ್ದಾರೆ ಎಂದು ವ್ಯಕ್ತಿಯೊಬ್ಬರು ತಮ್ಮ ಒಡೆತನದ ಜಲ್ಲಿ ಕ್ರಷರ್‍ಅನ್ನೇ ಪಣವಾಗಿಟ್ಟಿದ್ದಾರಂತೆ.  ಅದೇ ರೀತಿ ಮಧುಗಿರಿಯಲ್ಲಿ ಕೆ.ಎನ್.ರಾಜಣ್ಣ ಗೆಲುವು ಸಾಧಿಸಲಿದ್ದಾರೆ ಎಂದು ಎರಡು ಬಸ್‍ಗಳನ್ನು ಪಣವಾಗಿಟ್ಟಿದ್ದರೆ, ಶಿರಾ, ಕೊರಟಗೆರೆ, ತಿಪಟೂರು ಮತ್ತಿತರ ಕ್ಷೇತ್ರಗಳಲ್ಲಿ ಕೆಲವರು ಇಂತಹ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದು ಜಮೀನು, ಮನೆ-ಮಠಗಳನ್ನು ಜೂಜಿಗಿಟ್ಟಿದ್ದಾರೆ ಎಂದು ವರದಿಯಾಗಿದೆ.

ಇನ್ನು ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರ ನಡುವೆ ಭಾರೀ ಬೆಟ್ಟಿಂಗ್ ನಡೆದಿದೆ. ಕಾಂಗ್ರೆಸಿಗರು ಸಿದ್ದರಾಮಯ್ಯ ಗೆಲ್ಲಲಿದ್ದಾರೆ ಎಂದು, ಜೆಡಿಎಸ್‍ನವರು ಜಿ.ಟಿ.ದೇವೇಗೌಡ ಗೆಲುವು ನಿಶ್ಚಿತ ಎಂದು ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಉಲ್ಲೇಖಿಸಿವೆ.

ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಮತ್ತು ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಅಭ್ಯರ್ಥಿಯಾಗಿರುವ ಎಚ್.ವಿಶ್ವನಾಥ್ ನಡುವೆ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಈ ಇಬ್ಬರಲ್ಲಿ ನಮ್ಮ ಅಭ್ಯರ್ಥಿಯೇ ಗೆಲ್ಲಲಿದ್ದಾರೆ ಎಂದು ಭಾವಿಸಿರುವ ಆಸ್ವಾಳು ಗ್ರಾಮದ ಗ್ರಾಮಸ್ಥರು ಸಾವಿರಾರು ರೂಪಾಯಿಗಳ ಬಾಜಿ ಕಟ್ಟಿರುವುದು ವರದಿಯಾಗಿದೆ.

ಅದೇ ರೀತಿ ಕೆಆರ್ ನಗರ, ಟಿ.ನರಸೀಪುರ ಮತ್ತಿತರ ಕ್ಷೇತ್ರಗಳ ಫಲಿತಾಂಶದ ಮೇಲೂ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿರುವ ಮತ್ತೊಂದು ಕ್ಷೇತ್ರವಾದ ಬಾದಾಮಿಯಲ್ಲೂ ಬೆಟ್ಟಿಂಗ್ ದಂಧೆ ಬಿರುಸುಗೊಂಡಿದ್ದು, ಈ ಕ್ಷೇತ್ರದಲ್ಲಿ ಶ್ರೀರಾಮುಲು ಮತ್ತು ಸಿದ್ದರಾಮಯ್ಯ ವಿರುದ್ಧ ಕೋಟ್ಯಂತರ ರೂಪಾಯಿ ಹಣ ಪಣಕ್ಕಿಡಲಾಗುತ್ತಿದೆ. ಹೈ ವೋಲ್ಟೇಜ್ ಕ್ಷೇತ್ರವಾದ ಬಾದಾಮಿಯಲ್ಲಿ ಸಿದ್ದು ಮತ್ತು ಶ್ರೀರಾಮುಲು ಪರ ಕೋಟ್ಯಂತರ ರೂಪಾಯಿ ಹಣ ಬಾಜಿ ಕಟ್ಟಲಾಗುತ್ತಿದ್ದು, ಇಲ್ಲಿ ಯಾರೇ ವಿಜೇತರಾದರೂ ನೂರಾರು ಮಂದಿ ಹಣ ಕಳೆದುಕೊಳ್ಳುವುದಂತೂ ಗ್ಯಾರಂಟಿ ಎನ್ನುವಂತಾಗಿದೆ.

ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರ ಕೂಡ ಹೈ ವೋಲ್ಟೇಜ್ ಕಣವಾಗಿದ್ದು, ಇಲ್ಲಿ ಎಚ್‍ಡಿಕೆ ಮತ್ತು ಬಿಜೆಪಿಯ ಸಿ.ಪಿ.ಯೋಗೇಶ್ವರ್ ಪರ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ಕಟ್ಟಲಾಗುತ್ತಿದೆ.
ಮಂಗಳೂರಿನ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ವಸಂತ ಬಂಗೇರಾ ವಿರುದ್ಧ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹರೀಶ್ ಪೂಂಜಾ ನಡುವೆ ಬೆಟ್ಟಿಂಗ್ ದಂಧೆ ಉಲ್ಬಣಗೊಂಡಿದೆ.

ಬೆಳ್ತಂಗಡಿಯಲ್ಲಿ ಹೆಸರು ಮಾಡಿರುವ ಹರೀಶ್ ಪೂಂಜಾ ಈ ಬಾರಿ ಗೆಲುವು ಸಾಧಿಸುವುದು ಶತಸಿದ್ಧ ಎಂದು ಸ್ವಯಂ ಘೋಷಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತರು ಬಂಗೇರಾ ಸೋಲಲಿದ್ದಾರೆ ಎಂದು ಕೋಟ್ಯಂತರ ರೂ.ಗಳನ್ನು ಪಣಕ್ಕಿಟ್ಟು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರಂತೆ. ಒಟ್ಟಾರೆ ಮತದಾನ ಮುಗಿದು ಫಲಿತಾಂಶಕ್ಕೆ ಕ್ಷಣಗಣನೆ ಆರಂಭಗೊಂಡಿರುವ ಬೆನ್ನಲ್ಲೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 222 ವಿಧಾನಸಭಾ ಕ್ಷೇತ್ರಗಳಲ್ಲೂ ಬೆಟ್ಟಿಂಗ್ ದಂಧೆ ಜೋರಾಗಿದ್ದು, ಒಂದು ಅಂದಾಜಿನ ಪ್ರಕಾರ ಸಾವಿರಾರು ಕೋಟಿ ರೂ.ಗಳನ್ನು ಜೂಜುಕೋರರು ಪಣಕ್ಕಿಟ್ಟಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳು ಪತ್ರಿಕೆಗೆ ಖಚಿತಪಡಿಸಿವೆ.

ಬೆಳಗಾವಿಯಲ್ಲಿ ಜೋರಾಯ್ತು ಬೆಟ್ಟಿಂಗ್!

ಬೆಳಗಾವಿ,ಮೇ.13- ವಿಧಾನಸಭೆ ಚುನಾವಣೆ ಮತದಾನ ಮುಗಿಯುತ್ತಿದ್ದಂತೆಯೇ ಚಿಕ್ಕೋಡಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ-ಸದಲಗಾ, ನಿಪ್ಪಾಣಿ, ಕಾಗವಾಡ, ಅಥಣಿ, ರಾಯಭಾಗ, ಕುಡಚಿ, ಹುಕ್ಕೇರಿ ಹಾಗೂ ಯಮಕನಮರಡಿ ಭಾಗದಲ್ಲಿ ಚುನಾವಣಾ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದ್ದು, ಸೋಲು ಗೆಲುವಿನ ಬಗ್ಗೆ ಲೆಕ್ಕಾಚಾರ ಆರಂಭವಾಗಿದೆ. ನಿನ್ನೆಯಷ್ಟೇ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆದಿದ್ದು, ಇದೀಗ ತೀವ್ರ ಜಿದ್ದಾ ಜಿದ್ದಿನ ಸ್ಪರ್ಧೆ ನಡೆದಿದ್ದ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಗೆಲ್ಲುತ್ತೆ ಎರಡು ಪಕ್ಷಗಳ ಪರ ವಿರುದ್ಧವಾಗಿ ಲಕ್ಷಾಂತರ ರೂ. ಗಳ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

ಇನ್ನು ಮದಗಜಗಳ ಕಾದಾಟವಾದ ಹುಕ್ಕೇರಿ ಕ್ಷೇತ್ರದಲ್ಲಿ ಹಾಲಿ ಶಾಸಕ ಉಮೇಶ್ ಕತ್ತಿ ಗೆಲ್ಲುತ್ತಾರೋ ಕಾಂಗ್ರೆಸ್‍ನ ಹಿರಿಯ ರಾಜಕಾರಣಿ ಎ.ಬಿ. ಪಾಟೀಲ ಗೆಲ್ಲುತ್ತಾರೋ ಎಂಬ ಕುತೂಹಲ ಜನರಲ್ಲಿ ಮೂಡಿದೆ. ಈ ಸಂಬಂಧ ಫಲಿತಾಂಶಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಬಾಜಿ ಕಟ್ಟುವ ದಂಧೆ ಜೋರಾಗಿ ಸಾಗಿದೆ.  ಹಾಗೆಯೇ ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹ್ಯಾಟ್ರಿಕ್ ಗೆಲವು ಸಾಧಿಸುತ್ತಾರೆಯೇ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಚುನಾವಣೆಗೆ ಸ್ಫರ್ಧಿಸಿದ ನಂತರ ಅವರು ಕ್ಷೇತ್ರದಲ್ಲಿ ಪ್ರಚಾರ ಮಾಡಿಲ್ಲ. ತಾವು ಕಳೆದ 10 ವರ್ಷದಿಂದ ಕ್ಷೇತ್ರದಲ್ಲಿ ಮಾಡಿದ ಕಾರ್ಯಗಳೇ ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸದಿಂದ ಅವರು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿಲ್ಲ. ಇದೀಗ ಪ್ರಚಾರವಿಲ್ಲದೆ ಸತೀಶ್ ಜಾರಕಿಹೊಳಿ ಹ್ಯಾಟ್ರಿಕ್ ಗೆಲವು ಸಾಧಿಸುತ್ತಾರಾ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಸತೀಶ್ ಜಾರಕಿಹೊಳಿ ಅವರ ಪರವಾಗಿ ಅಲ್ಲಿನ ಕಾರ್ಯಕರ್ತರೇ ಪ್ರಚಾರ ಕೈಗೊಂಡಿದ್ದರು. ಬಿಜೆಪಿ ಇದರ ಸದುಪಯೋಗ ಪಡಿಸಿಕೊಳ್ಳಲು, ವಿವಿಧ ನಾಯಕರು ಕ್ಷೇತ್ರಕ್ಕೆ ಆಗಮಿಸಿ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ಪರವಾಗಿ ಪ್ರಚಾರ ಕೈಗೊಂಡಿದ್ದರು.

Facebook Comments

Sri Raghav

Admin