ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಶುರುವಾಗಿದೆ ರಾಜಕೀಯ ಪಕ್ಷಗಳ ಅಸಲಿ ಆಟ

ಈ ಸುದ್ದಿಯನ್ನು ಶೇರ್ ಮಾಡಿ

Politics-Parties

ಬೆಂಗಳೂರು,ಅ.30-ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ನಂತರ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ತಯಾರಿ ಆರಂಭಿಸಿವೆ. ೨೦೧೩ರ ಮೇ 5ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡರು. ವಿವಿಧ ಭಾಗ್ಯಗಳ ಯೋಜನೆಗಳನ್ನು ಜಾರಿಗೆ ತಂದರು. 2018ರ ಚುನಾವಣೆ ಮೇ ತಿಂಗಳ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.

ಕಾಂಗ್ರೆಸ್ ನಮ್ಮ ಸರ್ಕಾರದ ಕಾರ್ಯಕ್ರಮಗಳು, ಪಾರದರ್ಶಕವಾದ ಆಡಳಿತದಿಂದಾಗಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. 2018ರಲ್ಲಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದೆ. ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ತಂತ್ರ ರೂಪಿಸಿದ್ದು, ಮಿಷನ್ 150 ಎಂಬ ಕಾರ್ಯಕ್ರಮವನ್ನು ಆರಂಭಿಸಿದೆ.
ಚುನಾವಣೆಗಿಂತ ಮೊದಲು ನಡೆಯುವ ಸಮೀಕ್ಷೆಯಲ್ಲಿ ಜನರು ರಾಜ್ಯದ ಜ್ವಲಂತ ಸಮಸ್ಯೆ ಯಾವುದು? ಚುನಾವಣೆಯಲ್ಲಿ ಪಕ್ಷಗಳು ಯಾವ ವಿಷಯಕ್ಕೆ ಗಮನ ಕೊಡಬೇಕು ಎಂದು ಅಭಿಪ್ರಾಯಪಡುತ್ತಾರೆ. ಈಗ ಕರ್ನಾಟಕದಲ್ಲಿ ಸಮೀಕ್ಷೆ ನಡೆಸಿದರೆ ಯಾವ ವಿಚಾರವನ್ನು ಜನರ ಮುಂದಿಡಬಹುದು ಎಂಬ ಜಿಜ್ಞಾಸೆ ಸಾರ್ವಜನಿಕರಲ್ಲಿದೆ.

2013ರ ಮೇ 13ರಂದು ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಾಲ್ಕು ವರ್ಷಗಳಲ್ಲಿ ಸಿದ್ದರಾಮಯ್ಯ ಜನಪ್ರಿಯತೆ ಹೆಚ್ಚಿದೆ. ವಿವಿಧ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಅವರು ಸರ್ಕಾರವ ವರ್ಚಸ್ಸನ್ನು ಹೆಚ್ಚಿಸಿದ್ದಾರೆ. ಚುನಾವಣೆ ಸಮೀಕ್ಷೆಗಳಲ್ಲಿ ಸಿದ್ದರಾಮಯ್ಯ ಜನಪ್ರಿಯತೆ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆಯೇ? ಎಂದು ಪ್ರಶ್ನಿಸಬಹುದು. ಮುಂದಿನ ಚುನಾವಣೆಗೆ ಇದೇ ಪ್ರಮುಖ ಅಂಶವೂ ಆಗಲಿದೆ.
ಕರ್ನಾಟಕ ಬಿಜೆಪಿ ಅಧಿಕಾರ ಪಡೆಯಲು ಈಗಾಗಲೇ ಮಿಷನ್ 150 ಕಾರ್ಯಕ್ರಮ ರೂಪಿಸಿದೆ. ಕರ್ನಾಟಕ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸಿ, ಕರ್ನಾಟಕವನ್ನು ಕಾಂಗ್ರೆಸ್ ಮುಕ್ತವಾಗಿ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಅಲೆ ಕೆಲಸ ಮಾಡುತ್ತದೆಯೇ? ಕಾದು ನೋಡಬೇಕಾಗಿದೆ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಅನ್ನಭಾಗ್ಯ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾದ ಬಳಿಕ ಮೊದಲು ಪ್ರಕಟಿಸಿದ ಯೋಜನೆ ಇದು. ಬಿಪಿಎಲ್ ಕುಟುಂಬಗಳಿಗೆ 1 ರೂ.ಗೆ 1 ಕೆಜಿ ಅಕ್ಕಿ ನೀಡುವ ಮೂಲಕ ಹಸಿವು ನೀಗಿಸುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇದೇ ಯೋಜನೆ ಮುಂದಿನ ಚುನಾವಣೆಯಲ್ಲಿಯೂ ಅಧಿಕಾರ ಹಿಡಿಯಲು ನೆರವಿಗೆ ಬರುತ್ತದೆ ಎಂಬ ನಂಬಿಕೆಯಲ್ಲಿ ಪಕ್ಷವಿದೆ. ಆದರೆ ಅನ್ನಭಾಗ್ಯ ಯೋಜನೆ ಮತಗಳನ್ನು ತರುತ್ತದೆಯೇ? ಕಾದು ನೋಡಬೇಕು.

ಸ್ವಚ್ಚ, ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿವೆ. ಸಿದ್ದರಾಮಯ್ಯ ಮತ್ತು ಸಚಿವರ ವಿರುದ್ಧ ಹಲವು ದಾಖಲೆಗಳನ್ನು ಬಿಡುಗಡೆ ಮಾಡುತ್ತಿವೆ. ಭ್ರಷ್ಟಾಚಾರದ ಆರೋಪಗಳು ಮತಗಳನ್ನು ಕಸಿದುಕೊಳ್ಳುತ್ತವೆಯೇ? ಎಂದು ಜನರನ್ನು ಪ್ರಶ್ನಿಸಬಹುದು. ಕರ್ನಾಟಕದಲ್ಲಿ ಪ್ರತಿಪಕ್ಷಗಳ ವಿಫಲವಾಗಿದೆಯೇ? ಎಂದು ಜನರನ್ನು ಪ್ರಶ್ನಿಸಬಹುದು. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಲು ಪ್ರತಿಪಕ್ಷಗಳು ವಿಫಲವಾಗಿದೆ ಎಂಬ ಆರೋಪಗಳು ಇವೆ. ಇದು ಚುನಾವಣೆಯ ಸಮೀಕ್ಷೆಯ ಪ್ರಮುಖ ಅಂಶವಾಗಲಿದೆಯೇ? ಇದಕ್ಕೆ ಜನರೇ ಉತ್ತರ ನೀಡಬೇಕು.

Facebook Comments

Sri Raghav

Admin