ರಾಜ್ಯದ ಒಳನಾಡಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬೀಳದ ಮುಂಗಾರು, ಆತಂಕದಲ್ಲಿ ರೈತರು

ಈ ಸುದ್ದಿಯನ್ನು ಶೇರ್ ಮಾಡಿ

Weather-report

ಬೆಂಗಳೂರು, ಜೂ.11- ನೈಋತ್ಯ ಮುಂಗಾರು ಮಳೆ ವಿಳಂಬವಾಗಿದ್ದಲ್ಲದೆ ಪ್ರಾರಂಭದಲ್ಲಿಯೇ ದುರ್ಬಲಗೊಂಡಿರುವುದರಿಂದ ರಾಜ್ಯದ ಒಳನಾಡಿನಲ್ಲಿ ಉತ್ತಮ ಹಾಗೂ ವ್ಯಾಪಕ ಮಳೆಯಾಗುತ್ತಿಲ್ಲ. ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ಒಳನಾಡಿನಲ್ಲಿ ಚದುರಿದಂತೆ ಮಳೆಯಾಗುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರಿನ ಆರಂಭವಾಗಿಲ್ಲ. ಇದರಿಂದ ರೈತ ಸಮುದಾಯದಲ್ಲಿ ಆತಂಕದ ಛಾಯೆ ಮುಂದುವರೆದಿದೆ.  ಪ್ರಮುಖ ಜಲಾಶಯಗಳಿಗೂ ಒಳ ಹರಿವಿನ ಪ್ರಮಾಣ ಇನ್ನೂ ಗಣನೀಯವಾಗಿ ಏರಿಕೆಯಾಗದೆ ಕುಡಿಯುವ ನೀರಿನ ಸಮಸ್ಯೆ ಯಥಾರೀತಿ ಮುಂದುವರಿಯತೊಡಗಿದೆ.

ಮುಂಗಾರು ಮಳೆಗಾಲದ ಎರಡನೆ ವಾರ ಮುಗಿಯುತ್ತಿದ್ದರೂ ರಾಜ್ಯವ್ಯಾಪಿ ಮಳೆ ಆವರಿಸಿಲ್ಲ. ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯದ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗತೊಡಗಿದೆ. ರಾಜ್ಯದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಸೂಪಾ, ವರಾಹಿ, ಭದ್ರಾ, ತುಂಗಭದ್ರಾ, ಘಟಪ್ರಭ, ಮಲಪ್ರಭ, ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಗೆ ಒಳಹರಿವು ಪ್ರಮಾಣ ಇನ್ನೂ ಹೆಚ್ಚಾಗಿಲ್ಲ. ಅಲ್ಲದೆ, ಬಹುತೇಕ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆ ಇದೆ.

ಇನ್ನು ರಾಜಧಾನಿ ಬೆಂಗಳೂರಿಗೆ ನೀರು ಪೂರೈಸುವ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಸ್ಥಿತಿ ಭಿನ್ನವಾಗಿಲ್ಲ. ಕೆಆರ್‍ಎಸ್‍ನಲ್ಲಿ ಸದ್ಯಕ್ಕೆ 2 ಟಿಎಂಸಿ ಅಡಿಗಿಂತ ಕಡಿಮೆ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5 ಟಿಎಂಸಿಯಷ್ಟು ನೀರಿತ್ತು.   ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳ ಸ್ಥಿತಿಯೂ ಇದೇ ರೀತಿ ಇದೆ. ಕಬಿನಿ ಜಲಾಶಯ ಬಹುತೇಕ ಬರಿದಾಗಿದೆ. ಹಾರಂಗಿ ಜಲಾಶಯಕ್ಕೆ 140 ಕ್ಯುಸೆಕ್ಸ್, ಹೇಮಾವತಿ ಜಲಾಶಯಕ್ಕೆ 175 ಕ್ಯುಸೆಕ್ಸ್, ಕೆಆರ್‍ಎಸ್‍ಗೆ 471 ಕ್ಯುಸೆಕ್ಸ್, ಕಬಿನಿಗೆ 118 ಕ್ಯುಸೆಕ್ಸ್ ನೀರು ಬರುತ್ತಿದೆ. ಆದರೆ, ಈ ಜಲಾಶಯಗಳ ಒಳ ಹರಿವಿಗಿಂತ ಹೊರ ಹರಿವೇ ಹೆಚ್ಚಾಗಿದೆ.

ಎಲ್ಲ ಜಲಾಶಯಗಳೂ ಈ ಅವಧಿಯಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ನೀರಿನ ಸಂಗ್ರಹ ಹೊಂದಿರುವುದು ಆತಂಕವನ್ನು ಮತ್ತಷ್ಟು ಅಧಿಕಗೊಳಿಸಿದೆ.
ಕರಾವಳಿ ಭಾಗದಲ್ಲಿ ವ್ಯಾಪಕ ಹಾಗೂ ಭಾರೀ ಮಳೆಯಾಗುತ್ತಿದ್ದರೂ ಘಟ್ಟ ಪ್ರದೇಶವನ್ನು ದಾಟಿ ಮುಂಗಾರು ಒಳನಾಡನ್ನು ಶಕ್ತಿಯುತವಾಗಿ ಪ್ರವೇಶಿಸಿಲ್ಲ. ದುರ್ಬಲಗೊಂಡಿರುವುದರಿಂದ ಮಳೆಯು ವ್ಯಾಪಕವಾಗಿ ಬೀಳುತ್ತಿಲ್ಲ. ಕಾವೇರಿ ಜಲಾನಯನ ಭಾಗಕ್ಕೆ ಹೆಚ್ಚಿನ ನೀರಿನ ಮೂಲವಾದ ಕೊಡಗು ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರೀಕ್ಷಿತ ಮಳೆಯಾಗುತ್ತಿಲ್ಲ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿಯವರ ಪ್ರಕಾರ, ನಾಳೆ ವೇಳೆಗೆ ಮುಂಗಾರು ಮಳೆ ಇಡೀ ರಾಜ್ಯವನ್ನು ಆವರಿಸಲಿದೆ, ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಮಳೆಯಾಗುತ್ತಿದೆ, ಕರಾವಳಿ ಭಾಗದಲ್ಲಿ ಭಾರೀ ಮಳೆ ಮುಂದುವರೆದಿದೆ. ಈಗಾಗಲೇ ಗದಗ್‍ವರೆಗೂ ಮುಂಗಾರು ಪ್ರವೇಶ ಮಾಡಿದೆ. ಇದೇ ರೀತಿ ಮಳೆ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದರು.  ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಉತ್ತರಾಭಿಮುಖವಾಗಿ ಚಲಿಸುತ್ತಿರುವುದರಿಂದ ರಾಜ್ಯದೆಲ್ಲೆಡೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಹೀಗಾಗಿ ಮಳೆಯ ಪ್ರಮಾಣ ಇಳಿಮುಖವಾಗಿದೆ ಎಂದು ಸ್ಪಷ್ಟಪಡಿಸಿದರು.

ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ಅವರ ಪ್ರಕಾರ, ಜೂ.13 ಮತ್ತು 14ರಂದು ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿಯಲ್ಲಿ ನಿನ್ನೆಯಿಂದ ಸಾಕಷ್ಟು ಮಳೆಯಾಗುತ್ತಿದ್ದರೂ ಮುಂಗಾರು ಜೂ.20ರ ವೇಳೆಗೆ ತೀವ್ರವಾದ ಹಾಗೂ ಕ್ರಿಯಾಶೀಲವಾಗುವ ಲಕ್ಷಣಗಳಿಲ್ಲ. ಮಂಕಾಗಿರುವುದರಿಂದ ಜಲಾಶಯಗಳ ಜಲಾನಯನ ಭಾಗಗಳಲ್ಲಿ ಬಿದ್ದಂತಹ ಮಳೆಯಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗುತ್ತಿಲ್ಲ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin