ರಾಜ್ಯದ ಬಹುತೇಕ ಕಡೆ ಉತ್ತಮ ಮಳೆ, ಚೇತರಿಕೆ ಕಂಡ ಮುಂಗಾರು
ಬೆಂಗಳೂರು, ಆ.10-ಅರಬ್ಬೀ ಸಮುದ್ರ ಹಾಗೂ ದಕ್ಷಿಣ ಒಳನಾಡಿನಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಇದರಿಂದ ಮುಂಗಾರು ಮಳೆ ಚೇತರಿಕೆ ಕಂಡಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ.
ಮೈಸೂರು, ರಾಮನಗರ, ಮಂಡ್ಯ, ಚಾಮರಾಜನಗರ, ಕೋಲಾರ, ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದ್ದಾರೆ.
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ನಿನ್ನೆಯಿಂದೀಚೆಗೆ ಉತ್ತಮ ಮಳೆಯ ವಾತಾವರಣ ಕಂಡುಬಂದಿದೆ. ಮೈಸೂರು ಜಿಲ್ಲೆಯಲ್ಲಿ 110 ಮಿ.ಮೀಟರ್ವರೆಗೂ ಉತ್ತಮ ಮಳೆಯಾಗಿದೆ. ಅದೇ ರೀತಿ ಕೊಪ್ಪಳ, ರಾಯಚೂರು, ಹೈದರಾಬಾದ್-ಕರ್ನಾಟಕ, ಬೆಳಗಾವಿ ಸೇರಿದಂತೆ ವಿವಿಧೆಡೆ ರಾಜ್ಯದ ಶೇಕಡ ಮುಕ್ಕಾಲು ಭಾಗದಷ್ಟು ಮಳೆಯಾಗಿದೆ. ಆದರೂ ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆ ಇದೆ ಎಂದು ಹೇಳಿದರು. ಹವಾ ಮುನ್ಸೂಚನೆ ಪ್ರಕಾರ ಇನ್ನೂ ಒಂದು ವಾರ ಕಾಲ ಇದೇ ರೀತಿ ಚದುರಿದಂತೆ ಅಲ್ಲಲ್ಲಿ ಮಳೆ ಮುಂದುವರೆಯಲಿದೆ ಎಂದು ಅವರು ಹೇಳಿದರು. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನದಿಂದಲೂ ಪದೇ ಪದೇ ಹಗುರ ಮಳೆ ಬರುತ್ತಿತ್ತು. ರಾತ್ರಿಯಾಗುತ್ತಿದ್ದಂತೆ ಹಲವು ಬಡಾವಣೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಇಡೀ ರಾತ್ರಿ ಮಳೆ ಬಿದ್ದ ವರದಿಯಾಗಿದೆ.
ಮಳೆ ಮಾಹಿತಿ ಮಿಲಿಮೀಟರ್ಗಳಲ್ಲಿ :
ಯಲಹಂಕ 41.5, ದೊಡ್ಡಬೊಮ್ಮಸಂದ್ರ 45, ಚೌಡೇಶ್ವರಿ ವಾರ್ಡ್ 39, ನಾಗಪುರ 30, ನಂದಿನಿಲೇಔಟ್ 40.5, ವಿಶ್ವನಾಥ್ನಾಗೇನಹಳ್ಳಿ 45, ಎಚ್ಬಿಆರ್ ಲೇಔಟ್ 20, ದೊಡ್ಡ ಬಿದರಕಲ್ಲು 17.5, ಜ್ಞಾನಭಾರತಿ ವಾರ್ಡ್ 16, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ 21.5, ಶೆಟ್ಟಿಹಳ್ಳಿ 27.5, ಹೆಗ್ಗನಹಳ್ಳಿ 26, ವಿದ್ಯಾರಣ್ಯಪುರ 57, ಅಟ್ಟೂರು 44, ಬ್ಯಾಟರಾಯನಪುರ 39.5, ಕೊಡಿಗೇಹಳ್ಳಿ 33.5, ಮಾರಪ್ಪನಪಾಳ್ಯ 30.5, ತಾವರಕೆರೆ 30, ಚಿಕ್ಕನಹಳ್ಳಿ 23, ಮನೋರಾಯನಪಾಳ್ಯ 33.5, ಹೇರೋಹಳ್ಳಿ 28.5, ಜೆ.ಪಿ.ಪಾರ್ಕ್ 18.5, ಉಳಿದ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾದ ವರದಿಯಾಗಿದೆ. ಇಂದೂ ಸಹ ಮೋಡ ಮುಸುಕಿದ ವಾತಾವರಣ ಮುಂದುವರೆದಿದ್ದು, ಸಂಜೆ ಹಾಗೂ ರಾತ್ರಿ ಮಳೆಯಾಗುವ ಸಾಧ್ಯತೆಗಳಿವೆ.