ರಾಜ್ಯದ ವಿವಿಧೆಡೆ ಸರ್ಕಾರಿ ಅಧಿಕಾರಿಗಳ ಮನೆ- ಕಚೇರಿಗ ಏಕಕಾಲಕ್ಕೆ ಎಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ACB--01

ಬೆಂಗಳೂರು, ಜ.4- ಬೆಳ್ಳಂ ಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರಾಜ್ಯದ ವಿವಿಧೆಡೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಹಲವು ಅಕ್ರಮಗಳನ್ನು ಪತ್ತೆ ಹಚ್ಚಿದ್ದಾರೆ.

ನೆಲಮಂಗಲ:
ನೆಲಮಂಗಲದ ತಾಲ್ಲೂಕಿನ ವಾಜರಹಳ್ಳಿ ಗ್ರಾಪಂ ಪಿಡಿಒ ರೇಖಾ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ಎಂಟಾಗನಹಳ್ಳಿ, ಕುಲವನಹಳ್ಳಿ, ಅರೆಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು , ಇವರುಗಳ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವಾಜರಹಳ್ಳಿಗೆ ವರ್ಗಾವಣೆ ಮಾಡಲಾಗಿತ್ತು.
ಅಲ್ಲಿಯೂ ಸಹ ಇವರು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದು ಎಸಿಬಿ ಅಧಿಕಾರಿಗಳು ಜನಪ್ರಿಯ ಅಪಾರ್ಟ್‍ಮೆಂಟ್‍ನ ಅವರ ನಿವಾಸದ ಮೇಲೆ ಎಸಿಬಿ ಡಿವೈಎಸ್ಪಿ ಕೋದಂಡರಾಮು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಬಳ್ಳಾರಿ:
ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರ ನಿವಾಸದ ಮೇಲೆ ಚಿತ್ರದುರ್ಗದ ಎಸಿಬಿ ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ಚಿತ್ರದುರ್ಗ ನಗರದ ದವಳಗಿರಿ ಬಡಾವಣೆಯ ನಿವಾಸ ಹಾಗೂ ಬಳ್ಳಾರಿ ನಿವಾಸಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಯಚೂರು: ನಗರಸಭೆಯ ನೈರ್ಮಲ್ಯ ಇನ್‍ಸ್ಪೆಕ್ಟರ್ ಅಮರೇಶ್ ಅವರ ಗಂಗಾಪರಮೇಶ್ವರಿ ಕಾಲೋನಿಯಲ್ಲಿರುವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯಪುರ:
ವಿಜಯಪುರದ ನೀರಾವರಿ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಸೂಪರಿಡೆಂಟ್ ಬಾರಾಕುಟ್ರಿ ತಾಂಡಾದ ನಿವಾಸದ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗದಗ: ಜಿಲ್ಲೆಯ ನರಗುಂದ ತಾಲ್ಲೂಕು ಪಂಚಾಯ್ತಿ ಎಕ್ಸಿಕ್ಯೂಟಿವ್ ಆಫೀಸರ್ ಅಶೋಕ್ ಪಾಟೀಲ್ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದು , ಬಾಗಲಕೋಟೆ ಜಿಲ್ಲೆಯ ಮುಧೋಳದ ನಿವಾಸದ ಮೇಲೂ ಗದಗದ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆ: ನರಗುಂದ ತಾಲ್ಲೂಕು ಪಂಚಾಯ್ತಿ ಇಒ ಅಶೋಕ್ ಪಾಟೀಲ್ ಅವರ ಮುಧೋಳನಗರದ ನಿವಾಸ, ನರಗುಂದ ಪಟ್ಟಣದಲ್ಲಿರುವ ಮನೆ ಮೇಲೆ ಎಸ್ಪಿ ವಂಶಿಕೃಷ್ಣ , ಡಿವೈಎಸ್ಪಿ ಮಲ್ಲೇಶ್ ಮಲ್ಲಾಪುರ ಅವರ ನೇತೃತ್ವದ ತಂಡ ದಾಳಿ ನಡೆಸಿದೆ.

ಹಾಸನ:
ಹಾಸನದಲ್ಲಿ ಎಸಿಬಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದ ತಂಡ ಲೋಕೋಪಯೋಗಿ ಇಲಾಖೆ ಸಕಲೇಶಪುರ ವಿಭಾಗ ಎಇಇ ವೆಂಕಟೇಶ್ ಅವರ ನಿವಾಸದ ಮೇಲೆ ದಾಳಿ ಮಾಡಿ ಅವರ ಹೆಸರಿನಲ್ಲಿದ್ದ 1 ಮನೆ, ನಾಲ್ಕು ಸೈಟ್, ಎರಡು ಬೈಕ್ ಪತ್ತೆಹಚ್ಚಿ ಅರ್ಧ ಕೆಜಿಗೂ ಹೆಚ್ಚು ಚಿನ್ನವನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗ:
ಕರ್ನಾಟಕ ನೀರಾವರಿ ನಿಗಮದ ಎಇಇ ಬಾಳಣ್ಣ ಅವರ ಭದ್ರಾವತಿ ನಿವಾಸ ಹಾಗೂ ಹೊನ್ನಾವರ, ಕರ್ಕಿ ಗ್ರಾಮದ ಮನೆಗಳ ಮೇಲೂ ದಾಳಿ ಮಾಡಿದ್ದಾರೆ. ದಾವಣಗೆರೆ: ಬೆಸ್ಕಾಂನ ಎಇಇ ಜಗದೀಶಪ್ಪ ಎಂಬುವರ ಕುಮಾರಸ್ವಾಮಿಯ ಬಡಾವಣೆಯಲ್ಲಿರುವ ಮೂರು ಮನೆಗಳ ಮೇಲೆ ದಾಳಿ ಮಾಡಿದ್ದಾರೆ, ಧಾರವಾಡದಲ್ಲಿ ಒಂದು, ತುಮಕೂರು ಒಂದು, ಬೆಂಗಳೂರಿನಲ್ಲೊಂದು , ಹೊಸದುರ್ಗ ತಾಲ್ಲೂಕಿನ ಚಿಕ್ಕಮ್ಮನಹಳ್ಳಿಯಲ್ಲಿ 5 ಎಕರೆ ಜಮೀನು, ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ 20 ಎಕರೆ ಜಮೀನು ಸೇರಿದಂತೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಎಸ್ಪಿ ವಂಶಿಕೃಷ್ಣ ಹಾಗೂ ಡಿಎಸ್‍ಪಿ ವಸುದೇವ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಧಾರವಾಡ:
ಧಾರವಾಡದ ವಿವೇಕಾನಂದ ಸರ್ಕಲ್‍ನಲ್ಲಿರುವ ಉದ್ಯಮಿ ಕೆ.ಪಿ.ನಂಜುಂಡಿ ಮಾಲೀಕತ್ವದ ಲಕ್ಷ್ಮಿ ಗೋಲ್ಡ್ ಪ್ಯಾಲೆಸ್ ಮೇಲೆ ಅಧಿಕಾರಿಗಳು ದಾಳಿ ಮಾಡಿ ಸಿಬ್ಬಂದಿಗಳು ಹೊರಹೋಗದಂತೆ ಕೆಲಕಾಲ ವ್ಯಾಪಾರ ವಹಿವಾಟು ನಡೆಸದಂತೆ ಸೂಚಿಸಿ ಪರಿಶೀಲನೆ ನಡೆಸಿದರು.

Facebook Comments

Sri Raghav

Admin