ರಾಜ್ಯದ ಸಫಾಯಿ ಕರ್ಮಚಾರಿಗಳಿಗೆ ವೇತನ ಹೆಚ್ಚಳ ಸೌಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Safai

ಬೆಂಗಳೂರು,  ಆ. 9 : ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳ ಕನಿಷ್ಠ ವೇತನ 04-08-2016 ರಿಂದ ಅನ್ವಯವಾಗುವಂತೆ ಹೆಚ್ಚಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.      ಇದರ ಅನ್ವಯ ಸಫಾಯಿ ಕರ್ಮಚಾರಿಗಳು ಮಹಾನಗರ ಪಾಲಿಕೆಗಳಲ್ಲಿ ಪಡೆಯುತ್ತಿದ್ದ ಮಾಸಿಕ ರೂ 7730/- ದ್ವಿಗುಣಗೊಂಡಿದ್ದು ಹೊಸ ಹೆಚ್ಚಳದ ಅನ್ವಯ ರೂ 14040/- ಮತ್ತು ರೂ 3000/- ಸಂಕಷ್ಟ ಭತ್ಯೆ ಸೇರಿ ರೂ 17040/- ಮಾಸಿಕ ವೇತನವನ್ನು ಪಡೆಯಲಿದ್ದಾರೆ. ನಗರ ಸಭೆ ವ್ಯಾಪ್ತಿಯ ಹಳೆ ವೇತನ ರೂ 6953/- ಇದ್ದದ್ದು ಈಗ ರೂ 16650/-, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಹಳೆ ವೇತನ ರೂ 6166/- ಈಗ ರೂ 15740/- ಪಡೆಯಲಿದ್ದಾರೆ.

ಸರ್ಕಾರ ನೀಡಿರುವ ಈ ವೇತನ ಹೆಚ್ಚಳ ಕುರಿತು ಇಂದು ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ ಅವರು   ದೇಶದಲ್ಲಿ ಸಫಾಯಿ ಕರ್ಮಚಾರಿಗಳಿಗೆ ಈ ಮಟ್ಟದ ವೇತನ ಹೆಚ್ಚಳವನ್ನು ಯಾವ ರಾಜ್ಯ ಸರ್ಕಾರವೂ ಕೂಡ ನೀಡಿಲ್ಲ, ಗುಜರಾತ್ ರಾಜ್ಯದಲ್ಲಿ ರೂ 9400, ಕೇರಳದಲ್ಲಿ ರೂ 12000 ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೂಡ ರೂ 10000 ನೀಡುತ್ತಿದ್ದು ದೇಶದಲ್ಲಿ ಅತಿ ಹೆಚ್ಚು ವೇತನವನ್ನು ನೀಡುತ್ತಿರುವುದು ಕರ್ನಾಟಕ ರಾಜ್ಯ ಮಾತ್ರ ಎಂದು ಹೇಳಿದರು.      ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಹಲವು ಕಲ್ಯಾಣ ಯೋಜನೆಗಳನ್ನು ರೂಪಿಸಿದೆ, ಅದರಲ್ಲಿ ಮುಖ್ಯವಾಗಿ ಯಾಂತ್ರೀಕೃತವಲ್ಲದ ಕರ್ಮಚಾರಿಗಳ  ಮುಕ್ತ ರಾಜ್ಯವನ್ನಾಗಿಸಲು ಪಣ ತೊಟ್ಟಿದೆ, ಈಗಾಗಲೇ ಬೆಂಗಳೂರಿನ ಆಯ್ದ 60 ಕಾರ್ಮಿಕರನ್ನು ಆಯ್ಕೆ ಮಾಡಿಕೊಂಡು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ 1 ತಿಂಗಳ ಕಾಲ ಸ್ವಯಂ ಉದ್ಯೋಗದ ತರಬೇತಿಯನ್ನು ನೀಡಲಾಗಿದೆ, ಅವರ ಮುಂದಿನ ಜೀವನೋಪಾಯಕ್ಕಾಗಿ ಕೆಂದ್ರ ಸರ್ಕಾರದ ಅನುದಾನವನ್ನು  ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 1 ಲಕ್ಷ ರೂಗಳನ್ನು ಸಹಾಯ ಧನವಾಗಿ  ನೀಡಲಾಗುವುದು ಮತ್ತು ಅವರ ವಸತಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರದಿಂದ ಸಹ ಸಹಾಯ ಸಿಗಲಿದೆ ಎಂದರು.

2007ರಲ್ಲಿ ರಾಜ್ಯ ಸರ್ಕಾರ ನಡೆಸಿದ್ದ ಯಾಂತ್ರೀಕೃತವಲ್ಲದ ಕರ್ಮಚಾರಿಗಳ  ಸಮೀಕ್ಷೆಯಲ್ಲಿ ಒಟ್ಟು 302 ಕಾರ್ಮಿಕರಿದ್ದಾರೆ ಎಂದು ಸಮಿತಿ ವರದಿ ನೀಡಿತು,್ತ ಆದರೆ ಇದಕ್ಕೆ ತದ್ವಿರುದ್ಧವಾಗಿ 2013  ಯಾಂತ್ರೀಕೃತವಲ್ಲದ ಕರ್ಮಚಾರಿಗಳ ಕಾಯ್ದೆ ಅನ್ವಯ ಕೇಂದ್ರ ಸರ್ಕಾರ 2014 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಒಟ್ಟು 15375 ಯಾಂತ್ರೀಕೃತವಲ್ಲದ ಕರ್ಮಚಾರಿಗಳು ಇದ್ದಾರೆಂದು ವರದಿ ನೀಡಿತ್ತು. ಈ ತರಹದ ಭಿನ್ನ ವರದಿಗಳನ್ನು ಗಮನಿಸಿರುವ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಮುಖಾಂತರ ಮರು ಸರ್ವೆ ನಡೆಸುತ್ತಿದೆ, ನವೆಂಬರ್ 2016 ರೊಳಗೆ ಅಂತಿಮ ಪಟ್ಟಿ ಆಯೋಗದ ಕೈ ಸೇರಲಿದೆ ಎಂದು ಹೇಳಿದರು.     ಪತ್ರಿಕಾ ಗೋಷ್ಠಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯ ನಿರ್ದೇಶಕ ಪದ್ಮನಾಭ್ ಮತ್ತು ಯಾಂತ್ರೀಕೃತವಲ್ಲದ ಕರ್ಮಚಾರಿಗಳು  ಹೊರ ಬಂದು ಸ್ವಯಂ ಉದ್ಯೋಗ ತರಬೇತಿ ಪಡೆದಿರುವ ಹಲವು ಕಾರ್ಮಿಕರು ತಮ್ಮ ಅನುಭವಗಳನ್ನು ಹಂಚಿಕೊಂಡರು.

Facebook Comments

Sri Raghav

Admin