ರಾಜ್ಯದ 15ಪ್ರಮುಖ ನದಿಗಳಲ್ಲಿ ವಿಷಕಾರಕ ಅಂಶಗಳಿರುವುದು ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ruver

ಬೆಂಗಳೂರು, ಆ.13-ರಾಜ್ಯದ 15ಪ್ರಮುಖ ನದಿಗಳಲ್ಲಿನ ನೀರಿನಲ್ಲಿ ವಿಷಕಾರಕ ಅಂಶಗಳಿರುವುದು ಪತ್ತೆಯಾಗಿದ್ದು, ಒಂದು ವೇಳೆ ಈ ನೀರನ್ನು ಸೇವನೆ ಮಾಡಿದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.  ಪ್ರಮುಖವಾಗಿ ಅರ್ಕಾವತಿ ವ್ಯಾಪ್ತಿಯ ಕಾವೇರಿ, ಕಬಿನಿ, ಭದ್ರಾ, ಕೃಷ್ಣಾ, ಲಕ್ಷ್ಮಣತೀರ್ಥ, ಮಲಪ್ರಭಾ, ಮಂಜಿರಾ, ಕಾಳಿ, ಶಿಂಸಾ, ತುಂಗಭದ್ರಾ ಸೇರಿದಂತೆ ಒಟ್ಟು 15 ನದಿಗಳಲ್ಲಿನ ನೀರು ಬಳಕೆಗೆ ಯೋಗ್ಯವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.  ದೇಶಾದ್ಯಂತ 302 ನದಿಗಳಲ್ಲಿನ ನೀರನ್ನು ಕುಡಿಯಲು ಯೋಗ್ಯವೇ ಎಂಬುದನ್ನು ಮಾಲಿನ್ಯ ನಿಯಂತ್ರಣಾ ಮಂಡಳಿ ಪರೀಕ್ಷೆಗೆ ಒಳಪಡಿಸಿತ್ತು. ಇದರಲ್ಲಿ ಕರ್ನಾಟಕದ 15 ನದಿಗಳ ನೀರು ಕುಡಿಯಲು ಯೋಗ್ಯವಲ್ಲ, ಬಹುತೇಕ ನದಿಗಳಲ್ಲಿನ ನೀರಿನಲ್ಲಿ ವಿಷಕಾರಕ ರಸಾಯನಿಕ ಮಿಶ್ರಣಗಳು ಸೇರ್ಪಡೆಯಾಗಿವೆ ಎಂಬುದನ್ನು ಪತ್ತೆ ಹಚ್ಚಿದೆ.

ನದಿಗಳಲ್ಲಿರುವ ನೀರನ್ನು ನೇರವಾಗಿ ಬಳಕೆ ಮಾಡದೆ ಶುದ್ಧ ಘಟಕಗಳ ಮೂಲಕ  ಶುದ್ಧೀಕರಿಸಿ ಬಳಕೆ ಮಾಡಬೇಕು. ಇಲ್ಲದಿದ್ದರೆ ರಸಾಯನಿಕ ಮಿಶ್ರಣಗಳ ಸೇರ್ಪಡೆಯಿಂದ ಮನುಷ್ಯ ಜೀವಕ್ಕೆ ಹಾನಿಯಾಗಲಿದೆ ಎಂದು ಮಂಡಳಿ ಸಲಹೆ ಮಾಡಿದೆ.  ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ 302 ನದಿಗಳಲ್ಲಿನ ನೀರನ್ನು ಪರೀಕ್ಷೆ ನಡೆಸಿ ವರದಿ ನೀಡಬೇಕೆಂದು ಕೇಂದ್ರ ಅರಣ್ಯ ಮತ್ತು ಪರಿಸರ, ಜಲಸಂಪನ್ಮೂಲ ಇಲಾಖೆ ಸೂಚಿಸಿತ್ತು.  ಇದೀಗ ಹೊರಬಿದ್ದಿರುವ ವರದಿ ಪ್ರಕಾರ ರಾಜ್ಯದ 15 ನದಿಗಳ ನೀರು ಕಲುಷಿತಗೊಂಡಿದೆ ಎಂದು ಕೇಂದ್ರ  ಸಚಿವ ಅನಿಲ್ ಮಾದವ್ ರಾಜ್ಯಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕಾರಣವೇನು?
ಕಾವೇರಿ ಕೊಳ್ಳ, ತುಂಗಭದ್ರಾ, ಮಲಪ್ರಭಾ, ಕೃಷ್ಣ ವ್ಯಾಪ್ತಿಯ ಬಹುತೇಕ ನದಿ ನೀರುಗಳಲ್ಲಿ ಸತ್ತಪ್ರಾಣಿಗಳ ಮೂಳೆಗಳು, ಅರೆಬರೆ ಸುಟ್ಟ ಮೃತ ದೇಹಗಳು, ಮನುಷ್ಯನ ಸುಟ್ಟ ಅಸ್ಥಿ ಬಿಡುವುದು, ಅನುಪಯುಕ್ತ ತ್ಯಾಜ್ಯಗಳನ್ನು ನದಿಗೆ ಬಿಸಾಡುವುದು, ಕಾರ್ಖಾನೆಗಳು ವಿಸರ್ಜಿಸುವ ಮಲಿನ ನೀರು ಇತ್ಯಾದಿಗಳ  ಅಂಶಗಳಿಂದ ನದಿ ನೀರು  ವಿಷಕಾರಿಯಾಗಿದೆ.  ಇದೀಗ ಕೇಂದ್ರ ಸರ್ಕಾರದ ಸಲಹೆಯಂತೆ ಪ್ರಮುಖ ಜಲಾಶಯಗಳಾದ ಅರ್ಕಾವತಿ, ಭದ್ರಾ, ಭೀಮಾ, ಕಾವೇರಿ, ಕಬಿನಿ, ಮಲಪ್ರಭಾ, ಘಟಪ್ರಭಾ, ಕಗಿನಾ, ಕಾಳಿ, ಕೃಷ್ಣಾ, ಲಕ್ಷ್ಮಣತೀರ್ಥ, ಮಂಜೀರಾ, ಶಿಂಸಾ ಮತ್ತು ತುಂಗಭದ್ರಾ ನದಿಗಳಲ್ಲಿ ನೀರನ್ನು ಶುದ್ಧೀಕರಿಸಿ ಪೂರೈಕೆ ಮಾಡಬೇಕೆಂದು ನಿರ್ದೇಶನ ನೀಡಿದೆ.

ಈ ಹಿಂದೆ ಕಾವೇರಿ ನೀರು ಕುಡಿಯಲು ಯೋಗ್ಯವಲ್ಲ ಎಂದು ರಾಜ್ಯಸರ್ಕಾರ  ಶುದ್ಧೀಕರಣಕ್ಕೆ ಮುಂದಾಗಿತ್ತು. ಬಹುತೇಕ ಈ ವ್ಯಾಪ್ತಿಯಲ್ಲಿ ಸತ್ತ ಜಾನುವಾರುಗಳು, ಮನುಷ್ಯನ ಅರೆಬರೆ ಸುಟ್ಟ ದೇಹ, ತ್ಯಾಜ್ಯ ವಸ್ತುಗಳು ಎಲ್ಲೆಂದರಲ್ಲಿ ಹರಿದು ಬರುತ್ತಿದ್ದವು. ಇದನ್ನು ಮನಗಂಡು ರಾಜ್ಯಸರ್ಕಾರ ಕಾವೇರಿ ನದಿಯನ್ನು ಶುದ್ಧೀಕರಣ ಮಾಡಲು ಬಜೆಟ್‍ನಲ್ಲಿ ವಿಶೇಷ ಅನುದಾನ ಒದಗಿಸಿತ್ತು.
ಆದರೆ ಸರ್ಕಾರ ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಶುದ್ಧೀಕರಣ ಹಾಳೆಯ ಮೇಲಷ್ಟೇ ಉಳಿಯಿತು.  ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಎಂಡೋ ಸಲ್ಫಾನ್ ಬಳಕೆಯಿಂದ ಕೆಲ ಜಿಲ್ಲೆಗಳಲ್ಲಿನ ಜನ ಶಾಶ್ವತವಾಗಿ ಅಂಗವಿಕಲತೆಗೆ ಒಳಗಾದರೋ ಅದೇ ರೀತಿ ಕಲುಷಿತ ನೀರಿನ ಸೇವನೆಯಿಂದ ಮನುಷ್ಯನ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

► Follow us on –  Facebook / Twitter  / Google+

Facebook Comments

Sri Raghav

Admin