ರಾಜ್ಯದ 774 ಪೊಲೀಸ್ ಠಾಣೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

CCTV-01

ಬೆಂಗಳೂರು, ಜೂ.22-ರಾಜ್ಯದ 774 ಪೊಲೀಸ್ ಠಾಣೆಗಳಲ್ಲಿ ಸಿಸಿ ಟಿವಿ ಅಳವಡಿಕೆ, ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ಖರೀದಿಸುವುದು ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಇಂದು ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಸಂಜೆ ಸಚಿವ ಸಂಪುಟ ಸಭೆ ನಡೆಯಲಿದ್ದು, 302.61 ಕೋಟಿ ರೂ. ವೆಚ್ಚದಲ್ಲಿ 774 ಪೊಲೀಸ್ ಠಾಣೆಗಳಲ್ಲಿ ಸಿಸಿ ಟಿವಿ ವ್ಯವಸ್ಥೆಯನ್ನು ಅಳವಡಿಸಲು ಅನುಮೋದನೆ ನೀಡುವ ಸಂಭವವಿದೆ.

ಪ್ರಸಕ್ತ ಸಾಲಿನಲ್ಲಿ ದೈಹಿಕ ವಿಕಲಚೇತನರಿಗೆ ವಿತರಿಸುವ ಉದ್ದೇಶದಿಂದ 78 ಕೋಟಿ ರೂ. ವೆಚ್ಚದಲ್ಲಿ 4 ಸಾವಿರ ಸುಧಾರಿತ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆಗಳಿವೆ. 2018ರ ಗಣರಾಜ್ಯೋತ್ಸವ ಮುನ್ನ ದಿನದಂದು ನೀಡಲಿರುವ ಪದ್ಮ ಶ್ರೇಣಿಯ ಪ್ರಶಸ್ತಿಗಾಗಿ ರಾಜ್ಯದ ಗಣ್ಯರ ಹೆಸರುಗಳನ್ನು ಶಿಫಾರಸು ಮಾಡಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
2010ರಲ್ಲಿ ಉಲ್ಲೇಖಿಸಿರುವಂತೆ ಜಲಕಾಯಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಮೂಲ ಸೌಕರ್ಯ ಕಲ್ಪಿಸಲು 80 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆಗಳಿವೆ.  ಕರ್ನಾಟಕ ರಿಯಲ್ ಎಸ್ಟೇಟ್ (ನಿಯಂತ್ರಣಾ ಮತ್ತು ಅಭಿವೃದ್ಧಿ) ನಿಯಮಗಳು 2016ಕ್ಕೆ ಸಂಪುಟ ಸಭೆ ಅನುಮೋದನೆ ನೀಡುವ ಸಂಭವವಿದೆ. ರಾಜ್ಯದ ಆ್ಯಂಬುಲೆನ್ಸ್‍ಗಳನ್ನು ಆರೋಗ್ಯ ಕವಚ 108 ಯೋಜನೆ ಸೇವೆಯಲ್ಲಿ ವಿಲೀನಗೊಳಿಸುವ ಉದ್ದೇಶದಿಂದ ಅರ್ಹ ಸೇವಾದಾರರನ್ನು ಆಯ್ಕೆ ಮಾಡಲು ಟೆಂಡರ್ ಕರೆಯುವ ವಿಚಾರ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಲಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 15.73 ಕೋಟಿ ರೂ. ಅನುದಾನದಲ್ಲಿ 114 ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆ ಇದೆ. ಬೆಂಗಳೂರಿನ ಇಂದಿರಾನಗರದಲ್ಲಿ ಕರ್ನಾಟಕ ಎಂಡ್ರೋಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ನಿರ್ಮಾಣ ಹಾಗೂ ಉಪಕರಣಗಳ ಖರೀದಿಗಾಗಿ 35 ಕೋಟಿ ರೂ. ಮಂಜೂರು ಮಾಡಲು ಆಡಳಿತಾತ್ಮಕ ಒಪ್ಪಿಗೆ ನೀಡುವ ಅವಕಾಶ ಸಿಗಲಿದೆ.

ಕರ್ನಾಟಕ ರಾಜ್ಯ ವಿಧಿವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವನ್ನು ಬೆಂಗಳೂರಿನ ಮಡಿವಾಳದಲ್ಲಿ 30.16 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡುವ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬರಲಿದೆ.  ರಾಜ್ಯದಲ್ಲಿ ಡಯಲ್ 100 ತುರ್ತು ಸ್ಪಂದನಾ ವ್ಯವಸ್ಥೆಯನ್ನು ಎಲ್ಲಾ 30 ಜಿಲ್ಲೆಗಳಿಗೂ ವಿಸ್ತರಿಸುವ ಬಗ್ಗೆ ಸಂಪುಟ ಸಭೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕ ಅಪ್ರೆಂಟೀಶಿಪ್ ತರಬೇತಿ ಯೋಜನೆಯಡಿ ಹಂತ ಹಂತವಾಗಿ 50 ಸಾವಿರ ವಿದ್ಯಾರ್ಥಿಗಳಿಗೆ ಸ್ಟೈ ಫಂಡ್ ನೀಡಲು 60 ಕೋಟಿ ರೂ.ಗಳನ್ನು ಮಂಜೂರು ಮಾಡಲು ಆಡಳಿತಾತ್ಮಕ ಒಪ್ಪಿಗೆ ದೊರೆಯುವ ಸಂಭವವಿದೆ.

ರಾಜೀವ್ ಆವಾಸ್ ಯೋಜನೆ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನು ನಗರಾಭಿವೃದ್ಧಿ ಇಲಾಖೆಯಿಂದ ವಸತಿ ಇಲಾಖೆಗೆ ವರ್ಗಾಯಿಸುವುದು, ಕೆಎಸ್‍ಆರ್‍ಟಿಸಿ ವೃಂದ ಮತ್ತು ನಿಯಂತ್ರಣಾ ಪ್ರಾಧಿಕಾರದಡಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಮೇಲ್ವಿಚಾರಕ ಸಿಬ್ಬಂದಿಗಳ ವೃಂದ ನಿರ್ವಹಣಾ ಪ್ರಾಧಿಕಾರವನ್ನು ಆಯಾ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕರಿಗೆ ನೀಡಿ ಪೂರ್ಣ ಪ್ರಮಾಣದ ಸ್ವಾಯತ್ತತೆಯನ್ನು ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯಕೈಗೊಳ್ಳಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin