ರಾಜ್ಯಪಾಲರಾಗುವ ಡಿ.ಎಚ್.ಶಂಕರಮೂರ್ತಿ ಆಸೆಗೆ ತಣ್ಣೀರೆರಚಿದ ಬಿಜೆಪಿ ವರಿಷ್ಠರು

ಈ ಸುದ್ದಿಯನ್ನು ಶೇರ್ ಮಾಡಿ

DHS

ಬೆಂಗಳೂರು, ಆ.18- ರಾಜ್ಯಪಾಲರ ಹುದ್ದೆಯ ನಿರೀಕ್ಷೆಯಲ್ಲಿದ್ದ ವಿಧಾನ ಪರಿಷತ್ ಸಭಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಆಸೆಗೆ ಕೇಂದ್ರ ಬಿಜೆಪಿ ವರಿಷ್ಠರು ತಣ್ಣೀರೆರಚಿದ್ದಾರೆ.
ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ ಶಂಕರಮೂರ್ತಿ ಈ ಹೊತ್ತಿಗೆ ರಾಜ್ಯಪಾಲರಾಗಿ ನೇಮಕವಾಗಬೇಕಿತ್ತು. ನಿನ್ನೆ ಕೇಂದ್ರ ಸರ್ಕಾರ ತೆರವಾಗಿದ್ದ ಮೂರು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿದೆ.   ಮಾಜಿ ಸಚಿವೆ ನಜ್ಮಾ ಹೆಫ್ತುಲ್ಲಾ ಅವರನ್ನು ಮಣಿಪುರಕ್ಕೆ ಮಾಜಿ ರಾಜ್ಯಸಭಾ ನಾಯಕ ವಿ.ಪಿ.ಸಿಂಗ್ ಬದ್ನೋರ್ ಅವರನ್ನು ಪಂಜಾಬ್ಗೆ ಹಾಗೂ ಬನ್ವರಿಲಾಲ್ ಪುರೋಹಿತರನ್ನು ಅಸ್ಸೋಂ ರಾಜ್ಯಪಾಲರನ್ನಾಗಿ ನೇಮಕ ಮಾಡಿತ್ತು.  ಇದರ ಜತೆಗೆ ಬಿಜೆಪಿ ನಾಯಕ ಜಗದೀಶ್ ಮುಖಿ ಅವರನ್ನು ಅಂಡಮಾನ್-ನಿಕೋಬಾರ್ ದ್ವೀಪದ ಲೆಫ್ಟಿನೆಂಟ್ ಗವರ್ನರ್ ಜನರಲ್ ಆಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿನ್ನೆಯಷ್ಟೆ ಕೇಂದ್ರ ಸರ್ಕಾರದ ಶಿಫಾರಸಿಗೆ ಅಂಕಿತ ಹಾಕಿದ್ದರು.

ಇದರ ಜತೆಗೆ ಈ ತಿಂಗಳ ಅಂತ್ಯಕ್ಕೆ ತಮಿಳುನಾಡು ರಾಜ್ಯಪಾಲ ಡಿ.ರೋಸಯ್ಯ ಅವರ ಅಧಿಕಾರಾವಧಿ ಮುಗಿಯಲಿತ್ತು. ತೆರವಾಗಲಿರುವ ಈ ಸ್ಥಾನಕ್ಕೆ ಶಂಕರಮೂರ್ತಿಯವರನ್ನೇ ನೇಮಕ ಮಾಡಬಹುದು ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದ್ದವು.  ಇದಕ್ಕೆ ಪುಷ್ಟಿ ನೀಡುವಂತೆ ಎರಡು ವಾರಗಳ ಹಿಂದೆ ದೆಹಲಿ ವರಿಷ್ಠರು ಶಂಕರಮೂರ್ತಿಯವರನ್ನು ಕರೆಸಿಕೊಂಡು ರಾಜ್ಯಪಾಲರ ಹುದ್ದೆ ಅಲಂಕರಿಸಲು ಸಿದ್ಧರಾಗಿ ಎಂದು ಸೂಚನೆ ಕೊಟ್ಟಿದ್ದರು.   ಸ್ವತಃ ಶಂಕರಮೂರ್ತಿ ಕೂಡ ತಮ್ಮ ಆಪ್ತರ ಬಳಿ ಶೀಘ್ರದಲ್ಲೇ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಪಾಲರ ಹುದ್ದೆ ಅಲಂಕರಿಸುವ ಇಂಗಿತ ವ್ಯಕ್ತಪಡಿಸಿದ್ದರು.  ಇದೀಗ ಕೇಂದ್ರ ಸರ್ಕಾರ ನಿನ್ನೆಯಷ್ಟೆ ಮೂರು ರಾಜ್ಯಗಳಿಗೆ ರಾಜ್ಯಪಾಲರು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಜನರಲ್ ಗವರ್ನರ್ ಅವರನ್ನು ನೇಮಕ ಮಾಡಿತ್ತು. ಆದರೆ, ಶಂಕರಮೂರ್ತಿ ನೇಮಕವಾಗದಿರುವುದಕ್ಕೆ ಇದೀಗ ಬಿಜೆಪಿ ವಲಯದಲ್ಲಿ ನಾನಾ ವ್ಯಾಖ್ಯಾನಗಳು ಕೇಳಿಬರುತ್ತಿವೆ.

ಕಾರಣವೇನು..?

ಕಳೆದ ನಾಲ್ಕು ದಶಕಗಳಿಂದ ಆರ್ಎಸ್ಎಸ್ನ ನಿಷ್ಠಾವಂತ ಕಾರ್ಯಕರ್ತನಾಗಿ ಬೆಳೆದು ಬಂದಿರುವ ಶಂಕರಮೂರ್ತಿ ವಿವಾದ ರಹಿತ ರಾಜಕಾರಣಿ ಎಂದೇ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅವರ ಸಜ್ಜನಿಕೆ, ಸನ್ನಡತೆ ಹಾಗೂ ಪಕ್ಷಕ್ಕಿರುವ ನಿಷ್ಠೆಯೇ ಸತತ ಆರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮೇಲ್ಮನೆ ಪ್ರತಿಪಕ್ಷದ ನಾಯಕರಾಗಿ, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಹಾಗೂ ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು.  ಆದರೆ, ಅವರ ಮೇಲೆ ಕೇಳಿಬಂದ ಗಂಭೀರ ಆರೋಪವೊಂದು ರಾಜ್ಯಪಾಲರ ಹುದೆಯನ್ನು ಕೈ ತಪ್ಪಿಸಿದೆ ಎಂಬ ಮಾತು ಬಿಜೆಪಿಯಲ್ಲಿ ಹರಿದಾಡುತ್ತಿದೆ. ವಿಧಾನಸೌಧ, ವಿಕಾಸಸೌಧದ ಮಧ್ಯೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಧ್ಯಾನಾಸಕ್ತ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿತ್ತು.

ಸರಿಸುಮಾರು 12 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಈ ಪ್ರತಿಮೆಯನ್ನು ರಾಜಸ್ಥಾನ ಮೂಲದ ಗುತ್ತಿಗೆದಾರರೊಬ್ಬರು ನಿರ್ಮಾಣ ಮಾಡಿದ್ದರು. ಆದರೆ, ಪ್ರತಿಮೆ ನಿರ್ಮಾಣದಲ್ಲಿ ಸಾಕಷ್ಟು ದುರುಪಯೋಗವಾಗಿದೆ ಎಂಬ ಮಾತುಗಳು ವಿಧಾನಸೌಧದ ಪಡಸಾಲೆಯಲ್ಲಿ ಕೇಳಿಬಂದಿತ್ತು.  ನಿಯಮದ ಪ್ರಕಾರ, ಮೂರ್ತಿ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಬೇಕಿತ್ತು. ಅಲ್ಲದೆ, ಉಪಕರಣಗಳ ಖರೀದಿಗೂ ಕೂಡ ಇದೇ ನಿಯಮ ಪಾಲನೆ ಮಾಡಬೇಕಿತ್ತು. ಶಂಕರಮೂರ್ತಿ ಈ ನಿಯಮಗಳನ್ನು ಗಾಳಿಗೆ ತೂರಿ ಗಾಂಧಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ್ದರು. ಇದರಲ್ಲಿ ಸಾಕಷ್ಟು ಭ್ರಷ್ಟಾಚಾರದ ಆರೋಪ ನಡೆದಿವೆ ಎಂಬ ಗುಸುಗುಸು ಹಬ್ಬಿತ್ತು.

ಇನ್ನು ವಿಧಾನ ಪರಿಷತ್ನ ನವೀಕರಣದ ಪೀಠೋಕರಣ ಖರೀದಿಯಲ್ಲೂ ಇದೇ ರೀತಿ ಅವ್ಯವಹಾರ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಸಭಾಪತಿಯಾದ ಮೇಲೆ ಎರಡು ಬಾರಿ ನವೀಕರಣ ಮಾಡುವ ಉದ್ದೇಶವಾದರೂ ಏನು ಎಂಬ ಪ್ರಶ್ನೆಯನ್ನೇ ಸದನದ ಹಿರಿಯ ಸದಸ್ಯರೊಬ್ಬರು ಬಹಿರಂಗವಾಗಿ ಹೊರಹಾಕಿದ್ದರು.  ಇಲ್ಲಿಯೂ ಕೂಡ ನಿಯಮಗಳನ್ನು ಗಾಳಿಗೆ ತೂರಿ ಕೋಟ್ಯಂತರ ರೂ. ಬೆಲೆಬಾಳುವ ಪೀಠೋಪಕರಣಗಳನ್ನು ಖರೀದಿ ಮಾಡಲಾಗಿತ್ತು. ಇದರಲ್ಲಿಯೂ ಕೂಡ ರಾಮನ ಲೆಕ್ಕ, ಕೃಷ್ಣನ ಲೆಕ್ಕ ವಾಸನೆಯಾಡಿತ್ತು.  ಹೀಗೆ ಶಂಕರಮೂರ್ತಿ ಮೇಲೆ ಕೆಲವು ಗಂಭೀರವಾದ ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ತಾತ್ಕಾಲಿಕವಾಗಿ ರಾಜ್ಯಪಾಲರ ನೇಮಕವನ್ನು ತಡೆಹಿಡಿದಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.  ಈ ತಿಂಗಳ ಅಂತ್ಯಕ್ಕೆ ತಮಿಳುನಾಡು ರಾಜ್ಯಪಾಲರಾಗಿರುವ ರೋಸಯ್ಯ ನಿವೃತ್ತರಾಗಲಿದ್ದು, ಕೊನೆ ಕ್ಷಣದಲ್ಲಿ ಶಂಕರಮೂರ್ತಿಗೆ ಅದೃಷ್ಟ ಖುಲಾಯಿಸಿದರೂ ಅಚ್ಚರಿ ಇಲ್ಲ ಎಂಬ ಮಾತು ಬಿಜೆಪಿಯಲ್ಲಿ ಹರಿದಾಡುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin